ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ವಿ ನಾಯಕ ಹಾಗೂ ಐಪಿಎಲ್‌ನ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಮುಂದಿನ ಆವೃತ್ತಿಯಲ್ಲಿ ಆಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿಎಸ್‌ಕೆ ಮಾಜಿ ಆಟಗಾರ ಕೇದಾರ್ ಜಾಧವ್ ಹೇಳಿದ್ದಾರೆ 41 ವರ್ಷದ ಧೋನಿ ಐಪಿಎಲ್‌ನ 238 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಹಾಲಿ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ 200 ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಈ ರೀತಿಯಾಗಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಅವರು ಮುಂದಿನ ಆವೃತ್ತಿಯಲ್ಲಿ ಆಡುವುದಿಲ್ಲ ಎಂಬುದಾಗಿ ಕೇದಾರ್ ಹೇಳಿಕೆ ನೀಡಿದ್ದಾರೆ.
ಐಪಿಎಲ್‌ನ 16 ನೇ ಆವೃತ್ತಿಯ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎಂಬ ಊಹಾಪೋಹಗಳಿವೆ. ಆದರೆ ಸಿಎಸ್‌ಕೆ ನಾಯಕ ಈ ಬಗ್ಗೆ ಅಧಿಕೃತ ಘೋಷಣೆ ನೀಡಿಲ್ಲ. ಆದಾಗ್ಯೂ, ಮಾಜಿ ಸಹ ಆಟಗಾರ ಕೇದಾರ್ ಜಾಧವ್ ಅವರು ಧೋನಿ ನಿವೃತ್ತಿಯ ಬಗ್ಗೆ ‘2000%’ ಖಚಿತತೆ ವ್ಯಕ್ತಪಡಿಸಿದ್ದಾರೆ.
“ಐಪಿಎಲ್‌ನಲ್ಲಿ ಆಟಗಾರನಾಗಿ ಎಂಎಸ್ ಧೋನಿ ಅವರ ಅಂತಿಮ ಸೀಸನ್ ಇದು ಎಂದು ನಾನು ನಿಮಗೆ ಶೇಕಡಾ 2,000 ರಷ್ಟು ಖಚಿತವಾಗಿ ಹೇಳುತ್ತಿದ್ದೇನೆ. ಜುಲೈನಲ್ಲಿ ಧೋನಿಗೆ 42 ವರ್ಷ ತುಂಬಲಿದೆ. ಅವರು ಫಿಟ್ ಆಗಿದ್ದರೂ ಕೂಡ ಮನುಷ್ಯ. ಹೀಗಾಗಿ, ಇದು ಅವರ ಕೊನೆಯ ಸೀಸನ್ ಎಂದು ನಾನು ಭಾವಿಸುತ್ತೇನೆ. ಅಭಿಮಾನಿಗಳು ಅವರ ಯಾವುದೇ ಪಂದ್ಯಗಳನ್ನು ನೋಡುವ ಕಳೆದುಕೊಳ್ಳಬಾರದು. ಅವರ ಆಟದ ಪ್ರತಿ ಕ್ಷಣವನ್ನು ವೀಕ್ಷಿಸಬೇಕು ”ಎಂದು ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್ ಜತೆಗಿನ ಸಂವಾದದಲ್ಲಿ ಕೇದಾರ್ ಹೇಳಿದರು.
ದಿಗ್ಗಜ ಕ್ರಿಕೆಟಿಗ ಹಾಗೂ ಸಿಎಸ್‌ಕೆ ನಾಯಕನ ಅಭಿಮಾನಿಗಳಿಗೆ ವ್ಯಾಪ್ತಿಯ ಮಿತಿಯಿಲ್ಲ. ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕೆಲವೇ ಕೆಲವು ಆಟಗಾರರಲ್ಲಿ ಅವರೂ ಒಬ್ಬರು. ಇಂಥ ಆಟಗಾರ ಕಳೆದ ಏಪ್ರಿಲ್ 12ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಹಣಾಹಣಿಯಲ್ಲಿ, 200ನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ : IPL 2023: ಸೋಲಿಗೆ ನಾಯಕ ಧೋನಿ ನೀಡಿದ ಕಾರಣವೇನು?
ಅಂದಿನ ಪಂದ್ಯ ನಡೆದ ಚೆನ್ನೈನ ಚೆಪಾಕ್ ಸ್ಟೇಡಿಯಮ್ನಲ್ಲಿ ಬೃಹತ್ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರು. ಚೇಸಿಂಗ್ ವೇಳೆ ಧೋನಿಯ ಬ್ಯಾಟಿಂಗ್ ವೀಕ್ಷಿಸಿದ್ದ ಡಿಜಿಟಲ್ ವೀಕ್ಷಕರ ಸಂಖ್ಯೆಯೂ ಗಗನಕ್ಕೇರಿತ್ತು. ಧೋನಿ ಜಿಯೊ ಸಿನಿಮಾ ಹಾಗೂ ಟಿವಿ ನೇರ ಪ್ರಸಾರದ ವೀಕ್ಷಕರ ಸಂಖ್ಯೆ ಹೆಚ್ಚಾಗಲೂ ನೆರವಾಗಿದ್ದಾರೆ ಎಂದು ಕೇದಾರ್ ಜಾಧವ್ ಹೇಳಿದ್ದಾರೆ.
ಧೋನಿ ಬ್ಯಾಟಿಂಗ್ ಮಾಡುವಾಗ ಜಿಯೊ ಸಿನಿಮಾ ಹಿಂದಿನ ದಾಖಲೆಯನ್ನು ಮುರಿದಿತ್ತು. 2.2 ಕೋಟಿ ವೀಕ್ಷಕರು ಸಿಎಸ್‌ಕೆ ನಾಯಕ ಕೊನೇ ಓವರ್ನಲ್ಲಿ ಬ್ಯಾಟ್ ಮಾಡುವಾಗ ಜಿಯೊ ಸಿನಿಮಾದಲ್ಲಿ ಪಂದ್ಯ ವೀಕ್ಷಿಸಿದ್ದರು. ಧೋನಿ 17 ಎಸೆತಗಳಲ್ಲಿ ಅನೇಯ 32 ಬಾರಿಸಿ ಪಂದ್ಯವನ್ನು ಥ್ರಿಲ್ಲಿಂಗ್ ಹಂತಕ್ಕೆ ಕೊಂಡೊಯ್ಡಿದ್ದರು. ಆದರೆ, ಸಂದೀಪ್ ಶರ್ಮಾ ಮ್ಯಾಜಿ್ಕ್ ಮಾಡಿ ರಾಜಸ್ಥಾನ್ ತಂಡಕ್ಕೆ ಮೂರು ರನ್ ಗೆಲುವು ತಂದುಕೊಟ್ಟಿದ್ದರು.