Site icon Vistara News

ICC World Cup 2023 : ಕಳೆದ 10 ಪಂದ್ಯಗಳಲ್ಲಿ ಭಾರತದ ಬೌಲರ್​ಗಳ ಪರಾಕ್ರಮ ಈ ರೀತಿ ಇತ್ತು

Shami

ಮುಂಬಯಿ: ಭಾರತವು ಇದೇ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್​ನ (ICC World Cup 2023) ಲೀಗ್ ಹಂತದಿಂದ ಹಿಡಿದು ಸೆಮಿ ಫೈನಲ್ ತನಕ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಫೈನಲ್​ಗೇರಿದ್ದು, ಟ್ರೋಫಿ ಗೆಲ್ಲುವುದು ಮಾತ್ರ ಬಾಕಿ ಇದೆ. ಎರಡು ಬಾರಿಯ ಚಾಂಪಿಯನ್ ಭಾರತ ನಿರೀಕ್ಷೆಗಳನ್ನು ಮೀರಿ ಪ್ರದರ್ಶನ ನೀಡಿದೆ. ಮೊದಲ ತಂಡವಾಗಿ ನಾಕೌಟ್ ಹಂತಕ್ಕೆ ಏರಿತ್ತು.

ನವೆಂಬರ್ 19ರಂದು ಭಾರತ ಹಾಗೂ ಆಸ್ಟ್ರೇಲಿಯಾ (india vs australia final ) ನಡುವೆ ಫೈನಲ್​ ​ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಲೀಗ್ ಹಂತದಲ್ಲಿ ಹಾಗೂ ಸೆಮಿ ಫೈನಲ್​ ಸೇರಿದಂತೆ ಕಳೆದ 10 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಬೌಲರ್​ಗಳ ಅಂಕಿ ಅಂಕಿ ಅಂಶಗಳನ್ನು ಗಮನಿಸೋಣ. ಭಾರತ ಫೈನಲ್​​ಗೆ ತಲುಪುವಲ್ಲಿ ಬೌಲರ್​ಗಳ ಕೊಡುಗೆ ದೊಡ್ಡದಿದೆ. ಬುಮ್ರಾ, ಶಮಿ, ಸಿರಾಜ್​ ವೇಗದ ದಾಳಿಯಲ್ಲಿ ಮಿಂಚಿನ ಸಂಚಾರ ಮೂಡಿಸಿದ್ದರೆ, ಜಡೇಜಾ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಕೈಚಳಕ ತೋರಿದ್ದಾರೆ.

ಜಸ್​ಪ್ರಿತ್​ ಬುಮ್ರಾ

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ನಡೆಯುತ್ತಿರುವ ವಿಶ್ವ ಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 18.33ರ ಸರಾಸರಿಯಲ್ಲಿ 18 ವಿಕೆಟ್​ ಕಬಳಿಸಿರುವ 29ರ ಹರೆಯದ ಬುಮ್ರಾ , 3.98ರ ಎಕಾನಮಿ ಬೌಲಿಂಗ್ ರೇಟ್​ನೊಂದಿಗೆ ಭಾರತದ ಅಭಿಯಾನಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ. ದೆಹಲಿಯ ಬ್ಯಾಟಿಂಗ್ ಸ್ನೇಹಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅವರು ತಮ್ಮ ಅದ್ಭುತ ಬೌಲಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದರು. ಅಲ್ಲಿ ಅವರು 39 ರನ್​ಗೆ 4 ವಿಕೆಟ್​ ಉರುಳಿಸಿದ್ದರು.

ವಾಂಖೆಡೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಭಾರತವು 357 ರನ್​ಗಳ ಬೃಹತ್ ಮೊತ್ತವನ್ನು ರಕ್ಷಿಸುತ್ತಿದ್ದಾಗ, ಬುಮ್ರಾ ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಪಥುಮ್ ನಿಸ್ಸಾಂಕಾ ಅವರನ್ನು ಔಟ್ ಮಾಡಿ ಗಮನ ಸೆಳೆದಿದ್ದರು ಪಂದ್ಯಾವಳಿಯ ಇತಿಹಾಸದಲ್ಲಿ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಪ್ರಸ್ತುತ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದಾರೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಂಚ್ ಕಾದ ನಂತರ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆದ ಬಲಗೈ ವೇಗದ ಬೌಲರ್, ಭಾರತ ಪರ ಎರಡನೇ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ. ಕೇವಲ ಐದು ಪಂದ್ಯಗಳಿಂದ 23 ವಿಕೆಟ್​ಗಳನ್ನು ಪಡೆದಿರುವ ಶಮಿ 9.13 ಸರಾಸರಿ ಮತ್ತು 5.01 ಆರ್ಥಿಕ ಬೌಲಿಂಗ್ ದರವನ್ನು ಹೊಂದಿದ್ದಾರೆ. ಅವರು ಗರಿಷ್ಠ ವಿಕೆಟ್​ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.

ಈ ಪಂದ್ಯಾವಳಿಯ ಸೆಮಿ ಫೈನಲ್​ನಲ್ಲಿ ಅವರು ನ್ಯೂಜಿಲ್ಯಾಂಡ್ ವಿರುದ್ಧ 57ಕ್ಕೆ 7 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಹಾಲಿ ವಿಶ್ವ ಕಪ್​ನಲ್ಲಿ ಮೂರನೇ ಬಾರಿ ಐದು ವಿಕೆಟ್ ಸಾಧನೆ ಮಾಡಿದರು. ಮೊದಲ ಪಂದ್ಯದಲ್ಲಿ, 33 ವರ್ಷದ ಆಟಗಾರ ಐದು ವಿಕೆಟ್ ಸಾಧನೆ ಮಾಡುವ ಮೂಲಕ ಗಣನೀಯ ಪ್ರಭಾವ ಬೀರಿದರು. ಇದು ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಮುಂಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರ ಅತ್ಯುತ್ತಮ ಪ್ರದರ್ಶನ ಮುಂದುವರಿಯಿತು, .ಅಲ್ಲಿ ಅನುಭವಿ ಮತ್ತೊಂದು ಸ್ಮರಣೀಯ ಐದು ವಿಕೆಟ್ ಸಾಧನೆಯನ್ನು (5/18) ಮಾಡಿದರು. ಇದು ಭಾರತ ತಂಡದ 302 ರನ್​ಗಳ ಅದ್ಭುತ ಗೆಲುವಿಗೆ ಕಾರಣವಾಯಿತು. ಈ ಅಸಾಧಾರಣ ಬೌಲಿಂಗ್ ಪ್ರದರ್ಶನವು ಅವರನ್ನು ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ವಿಕೆಟ್ ಪಡೆದವರ ಅಗ್ರಸ್ಥಾನಕ್ಕೆ ಏರಿಸಿತು. ಒಟ್ಟು 45 ವಿಕೆಟ್​ಗಳೊಂದಿಗೆ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ ದಾಖಲೆಗಳನ್ನು ಮೀರಿಸಿದ್ದಾರೆ.

ಇದನ್ನೂ ಓದಿ : ICC World Cup 2023 : ಯಾರು ಗೆಲ್ತಾರೆ ವಿಶ್ವ ಕಪ್​? ಕ್ರಿಕೆಟ್ ಪಂಡಿತರು ಏನಂತಾರೆ?

ಮೊಹಮ್ಮದ್ ಸಿರಾಜ್

5.61ರ ಎಕಾನಮಿ ರೇಟ್​ನಲ್ಲಿ 13 ವಿಕೆಟ್​ ಕಬಳಿಸಿರುವ ಮೊಹಮ್ಮದ್ ಸಿರಾಜ್, ತಮ್ಮ ಸಹ ವೇಗಿಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬೌನ್ಸ್ ಮಾಡುವ ಮತ್ತು ವಿಚಿತ್ರ ಕೋನಗಳನ್ನು ಸೃಷ್ಟಿಸುವ ಸಿರಾಜ್ ಅವರ ಸಾಮರ್ಥ್ಯವು ಬ್ಯಾಟರ್​ಗಳಿಗೆ ನಿರಂತರ ಅಪಾಯವೆಂದು ಸಾಬೀತಾಗಿದೆ. ಸ್ವಲ್ಪ ಹೆಚ್ಚಿನ ಎಕಾನಮಿ ದರದ ಹೊರತಾಗಿಯೂ, ನಿರ್ಣಾಯಕ ಘಟ್ಟಗಳಲ್ಲಿ ದಾಳಿ ಮಾಡುವ ಮತ್ತು ಎದುರಾಳಿಗಳ ಯೋಜನೆಗಳನ್ನು ಅಡ್ಡಿಪಡಿಸುವ ಅವರ ಜಾಣ್ಮೆ ಟೀಮ್ ಇಂಡಿಯಾಕ್ಕೆ ಅಮೂಲ್ಯವಾಗಿದೆ.

ರವೀಂದ್ರ ಜಡೇಜಾ

ಭಾರತೀಯ ಸ್ಪಿನ್ ಬೌಲಿಂಗ್​ ವಿಭಾಗದ ಅಸ್ತ್ರವಾಗಿರುವ ರವೀಂದ್ರ ಜಡೇಜಾ ಅವರು ಹಾಲಿ ವಿಶ್ವ ಕಪ್​ನಲ್ಲಿ ಗರಿಷ್ಠ ಪ್ರದರ್ಶನ ನೀಡುತ್ತಿದ್ದಾರೆ. 18.25ರ ಅತ್ಯುತ್ತಮ ಸರಾಸರಿ ಮತ್ತು 4.25 ರ ಎಕಾನಮಿ ರೇಟ್​ನಲ್ಲಿ ಒಟ್ಟು 16 ವಿಕೆಟ್​ಗಳನ್ನು ಕಬಳಿಸಿರುವ ಅವರು ತಂಡದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಟನ್ಸ್​ ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ಅವರು 33 ರನ್​​ಗೆ 5 ವಿಕೆಟ್​ ಉರುಳಿಸಿದ್ದರು. ಅವರ ಬ್ಯಾಟಿಂಗ್ ಕೊಡುಗೆಗಳು ಅವರ ಬೌಲಿಂಗ್ ಪರಾಕ್ರಮಕ್ಕೆ ಹೊಂದಿಕೆಯಾಗದಿದ್ದರೂ, ಜಡೇಜಾ ನ್ಯೂಜಿಲೆಂಡ್ ವಿರುದ್ಧ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿರ್ಣಾಯಕ ಹಂತದಲ್ಲಿ ಅವರು ಬಾರಿಸಿದ್ದ 39* ರನ್ ಭಾರತ ತಂಡಕ್ಕೆ ಗೆಲುವಿನ ರನ್​ಗಳಾಯಿತು.

ಏಕದಿನ ವಿಶ್ವಕಪ್ನ ಒಂದೇ ಆವೃತ್ತಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಜಡೇಜಾ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ತಂಡದ ವಿರುದ್ಧ ಎರಡು ವಿಕೆಟ್​ಗಳನ್ನು ಪಡೆಯುವ ಮೂಲಕ ಲೀಗ್ ಹಂತದ ಅಂತ್ಯದ ವೇಳೆಗೆ ತಮ್ಮ ವಿಕೆಟ್​ಗಳ ಸಂಖ್ಯೆಯನ್ನು 16 ಕ್ಕೆ ಏರಿಸಿದ್ದರು. ಇದು ಅನಿಲ್ ಕುಂಬ್ಳೆ (1996 ರ ವಿಶ್ವಕಪ್​ನಲ್ಲಿ 15 ವಿಕೆಟ್​ಗಳು) ಮತ್ತು 2011 ರ ಪ್ರಶಸ್ತಿ ಗೆಲುವಿನಲ್ಲಿ 15 ವಿಕೆಟ್​ಗಳೊಂದಿಗೆ ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕುಲ್ದೀಪ್ ಯಾದವ್​

ಚೈನಾ ಮನ್​ ಬೌಲರ್​ ಕುಲ್ದೀಪ್ ಯಾದವ್ ಆಡಿರುವ 10 ಪಂದ್ಯಗಳಲ್ಲಿ 15 ವಿಕೆಟ್ ಉರುಳಿಸಿದ್ದಾರೆ. ಅವರು 24.53 ಸರಾಸರಿ ಹಾಗೂ 4,32 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಪ್ರಮುಖ ಪಂದ್ಯಗಳಲ್ಲಿ ಅವರು ಭಾರತ ತಂಡಕ್ಕೆ ಗೆಲುವು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Exit mobile version