Site icon Vistara News

ಪಾಕ್​ ಫೈನಲ್​ ಕನಸಿಗೆ ಅಡ್ಡಿಯಾದದ್ದೇ ಈ ಒಂದು ನಿರ್ಧಾರ; ಈಗ ಚಿಂತಿಸಿ ಫಲವಿಲ್ಲ

pakistan team asia cup 2023

ಕೊಲಂಬೊ: ಗುರುವಾರ ನಡೆದ ಏಷ್ಯಾಕಪ್​ನ(Asia Cup 2023) ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ(Pakistan vs Sri Lanka) ವಿರುದ್ಧ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಗೆಲುವು ಸಾಧಿಸಿದ ಲಂಕಾ ಫೈನಲ್​ಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯುವ ಫೈನಲ್​ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಲಂಕಾ ವಿರುದ್ಧ ಪಾಕಿಸ್ತಾನ ಸೋಲು ಕಂಡರೂ ಫೈನಲ್​ ಪ್ರವೇಶಿಸಿವ ಅವಕಾಶವೊಂದಿತ್ತು. ಆದರೆ ಭಾರತ ವಿರುದ್ಧದ ಪಂದ್ಯಕ್ಕೆ ತೆಗೆದುಕೊಂಡ ಆ ಒಂದು ನಿರ್ಧಾರ ಇಂದು ಪಾಕ್​ಗೆ ಕಂಟಕವಾಗಿ ಟೂರ್ನಿಯಿಂದಲೇ ಹೊರಬೀಳುವಂತಾಯಿತು.

ಮೀಸಲು ದಿನ ತಂದ ಆಪತ್ತು

ಭಾರತ ವಿರುದ್ಧ ಭಾನುವಾರ(ಸೆಪ್ಟೆಂಬರ್​ 10) ನಡೆಯಬೇಕಿದ್ದ ಪಂದ್ಯಕ್ಕೆ ಹವಾಮಾನ ಇಲಾಖೆ ಮಳೆಯ ಎಚ್ಚರಿಕೆ ನೀಡಿತ್ತು. ಇದೇ ಕಾರಣಕ್ಕೆ ಈ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲಾಯಿತು. ಆದರೆ ಮೀಸಲು ದಿನದ ಲಾಭ ಭಾರತಕ್ಕೆ ವರದಾನವಾಯಿತು. ಪಾಕ್​ ವಿರುದ್ಧ ದಾಖಲೆಯ ಮೊತ್ತದಿಂದ ಗೆದ್ದ ಭಾರತ ಬಳಿಕ ಲಂಕಾ ವಿರುದ್ಧವೂ ಗೆದ್ದು ಫೈನಲ್​ ಪ್ರವೇಶ ಪಡೆಯಿತು. ಒಂದೊಮ್ಮೆ ಪಾಕಿಸ್ತಾನ ಈ ಮೀಸಲು ದಿನಕ್ಕೆ ಒಪ್ಪದೇ ಹೋಗಿದ್ದರೆ ಪಾಕ್​ ತಂಡಕ್ಕೂ ಒಂದು ಅಂಕ ಲಭಿಸುತ್ತಿತ್ತು. ಆಗ ಲಂಕಾ ವಿರುದ್ಧ ಸೋಲು ಕಂಡರೂ ಫೈನಲ್​ ರೇಸ್​ನಿಂದ ಪಾಕ್​ ಹೊರಬೀಳುತ್ತಿರಲಿಲ್ಲ. ಬದಲಾಗಿ ಇಂದು ನಡೆಯುವ ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದ ಫಲಿತಾಂಶದ ಆಧಾರದಲ್ಲಿ ಫೈನಲ್​ ಪ್ರವೇಶ ಪಡೆಯುವ ಅವಕಾಶವಿತ್ತು. ಆದರೆ ಬಾಂಗ್ಲಾ ವಿರುದ್ಧ ಭಾರತ ಸೋಲು ಕಾಣಬೇಕಿತ್ತು.

ಚಿಂತಿಸಿ ಫಲವಿಲ್ಲ

ಲಂಕಾ ವಿರುದ್ಧದ ಪಂದ್ಯ ರದ್ದಾಗಿದ್ದರೂ ಪಾಕಿಸ್ತಾನ ರನ್‌ ರೇಟ್‌ ಲೆಕ್ಕಾಚಾರದಲ್ಲಿ ಫೈನಲ್​ ರೇಸ್​ನಿಂದ ಹೊರಬೀಳುವುದು ಖಚಿತವಾಗಿತ್ತು. ಈ ಪಂದ್ಯಕ್ಕೂ ಮುನ್ನವೇ ಶ್ರೀಲಂಕಾ ಉತ್ತಮ ರನ್‌ರೇಟ್‌ ಕಾಯ್ದುಕೊಂಡು ದ್ವಿತೀಯ ಸ್ಥಾನ ಪಡೆದಿತ್ತು. ಫೈನಲ್​ ಪ್ರವೇಶಕ್ಕೆ ಪಾಕ್​ಗೆ ಲಂಕಾ ವಿರುದ್ಧ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ಆದರೆ ಕೊನೆಯ ಎಸೆತದ ವರೆಗೂ ಸಾಗಿದ ಪಂದ್ಯದಲ್ಲಿ ಲಂಕಾ ಮೇಲುಗೈ ಸಾಧಿಸಿ ಪಾಕಿಸ್ತಾನವನ್ನು ಹೊರದಬ್ಬಿತು. ಅಂದು ಮೀಸಲು ದಿನಕ್ಕೆ ಒಪ್ಪಿಗೆ ಸೂಚಿಸಿದ್ದೇ ಈ ಸ್ಥಿತಿಗೆ ಕಾರಣ ಎಂದು ಈಗ ಪಾಕ್​ ಆಟಗಾರರು ಚಿಂತಿಸುತ್ತಿದ್ದಾರೆ. ಆದರೆ ಇನ್ನು ಎಷ್ಟು ಚಿಂತೆ ಪಟ್ಟರೂ ಪ್ರಯೋಜನವಿಲ್ಲ.

ತಪ್ಪಿದ ಮೊದಲ ಫೈನಲ್​ ಮುಖಾಮುಖಿ

ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿ ಫೈನಲ್‌ಗೇರಿದರೆ, ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿತ್ತು. ಏಷ್ಯಾಕಪ್‌ ಆರಂಭವಾದ 1984ರಿಂದ ಇದುವರೆಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಮ್ಮೆಯೂ ಏಷ್ಯಾಕಪ್‌ ಫೈನಲ್‌ನಲ್ಲಿ ಎದುರಾಗಿಲ್ಲ. ಹಾಗಾಗಿ, ಈ ಬಾರಿ ಪಾಕಿಸ್ತಾನವೇ ಫೈನಲ್‌ಗೆ ಬಂದರೆ ಉಭಯ ದೇಶಗಳ ತಂಡಗಳ ನಡುವಿನ ಕದನವು ಜಿದ್ದಾಜಿದ್ದಿನಿಂದ ಕೂಡಿರಲಿದೆ ಎಂದು ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಪಾಕಿಸ್ತಾನ ಸೋಲು ಕಂಡು ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ರೋಚಕ ಗೆಲುವು ಸಾಧಿಸಿದ ಲಂಕಾ

ಹಾಲಿ ಚಾಂಪಿಯನ್​ ಲಂಕಾ ತನ್ನ ಖ್ಯಾತಿಗೆ ತಕ್ಕ ಪ್ರದರ್ಶನವನ್ನು ತೋರುವ ಮೂಲಕ ಪಾಕಿಸ್ತಾನ ವಿರುದ್ಧ ಹೆಲುವು ಸಾಧಿಸಿತು. ಕಳೆದ ವರ್ಷ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿಯೂ ಲಂಕಾ ತಂಡ ಪಾಕಿಸ್ತಾನವನ್ನು ಮಣಿಸಿ ಏಷ್ಯಾಕಪ್ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಬಾರಿಯೂ ಪಾಕ್​ ತಂಡವನ್ನೇ ಮಣಿಸಿ ಫೈನಲ್​ ಪ್ರವೇಶ ಪಡೆದದ್ದು ವಿಶೇಷ.

ಇದನ್ನೂ ಓದಿ Asia Cup 2023: ಬಾಂಗ್ಲಾ ಪಂದ್ಯಕ್ಕೆ ಭಾರತ ತಂಡದಲ್ಲಿ ಹಲವು ಬದಲಾವಣೆ

ಅಂತಿಮ ಎಸೆತದಲ್ಲಿ ಗೆದ್ದು ಬೀಗಿದ ಶನಕ ಪಡೆ

ಕೊನೆಯ 12 ಎಸೆತಗಳಲ್ಲಿ ಲಂಕಾ ಗೆಲುವಿಗೆ 12 ರನ್​ಗಳ ಅಗತ್ಯವಿತ್ತು. ಆ ವೇಳೆ ಶಾಹೀನ್​ ಅಫ್ರಿದಿ ಎರಡು ವಿಕೆಟ್​ಗಳನ್ನು ಕಿತ್ತು ಲಂಕಾಗೆ ಒತ್ತಡ ಹೇರಿದರು. ಕೊನೆಯ ಓವರ್​ನಲ್ಲಿ 6 ಎಸೆತಗಳಲ್ಲಿ 8 ರನ್​ಗಳ ಸವಾಲು ಎದುರಾದಗ ಲಂಕಾ ಅಭಿಮಾನಿಗಳು ಉಸಿರು ಬಿಗಿಹಿಡಿದು ತಮ್ಮ ತಂಡ ಗೆಲ್ಲುವಂತೆ ಪ್ರಾರ್ಥಿಸತೊಡಗಿದರು. ಈ ಓವರ್​ ಜಮಾನ್ ಖಾನ್ ಎಸೆದರು. ಮೊದಲ ನಾಲ್ಕು ಎಸೆತವನ್ನು ಘಾತಕವಾಗಿ ಎಸೆದ ಜಮಾನ್ ಪಾಕ್​ಗೆ ಗೆಲುವು ತಂದು ಕೊಡಲಿದ್ದಾರೆ ಎಂದು ನಿರೀಕ್ಷಿಸಲಾಯಿತು. ಲಂಕಾಗೆ ಎರಡು ಎಸೆತದಲ್ಲಿ ಆರು ರನ್​ಗಳ ಅಗತ್ಯವಿತ್ತು. ಆದರೆ ಚರಿತ್ ಅಸಲಂಕಾ ಬೌಂಡರಿ ಬಾರಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ 2 ರನ್​ ಬಾರಿಸುವಲ್ಲಿಯೂ ಯಶಸ್ವಿಯಾದ ಅಸಲಂಕಾ ಲಂಕಾಗೆ ಸ್ಮರಣೀಯ ಗೆಲುವು ತಂದುಕೊಟ್ಟರು. ಪಾಕ್​ನ ಫೈನಲ್​ ಕನಸು ಭಗ್ನಗೊಂಡಿತು.

Exit mobile version