ಬೆಂಗಳೂರು: ಚೀನಾದ ಹಾಂಗ್ಜೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತೀಯ ಕ್ರೀಡಾಪಟುಗಳು ಅಸಾಮಾನ್ಯ ಸಾಧನೆ ಮಾಡಿರುವುದು 2023ರಲ್ಲಿ ಕ್ರೀಡಾ ಕ್ಷೇತ್ರದ ಪಾಲಿಗೆ ಹೆಗ್ಗಳಿಕೆಯ ಸಂಗತಿ. ಭಾರತದ ಕ್ರೀಡಾಪಟುಗಳು ನಿಯೋಗ 100ಕ್ಕೂ ಅಧಿಕ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಎತ್ತರಕ್ಕೆ ಏರಿದೆ. 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಅಭಿಯಾನವನ್ನು ಭಾರತ ಮಹತ್ವಾಕಾಂಕ್ಷೆಯಿಂದ ಆರಂಭಿಸಿ ಈ ಸ್ಮರಣೀಯ ಸಾಧನೆಯೊಂದಿಎಗ ಭಾರತೀಯ ಕ್ರೀಡಾಪಟುಗಳ ಪರಾಕ್ರಮದ ಮೇಲೆ ಬೆಳಕು ಚೆಲ್ಲಿತು.
लक्ष्य हुआ पूरा🎯
— SAI Media (@Media_SAI) October 7, 2023
इस बार सौ पार💯#AsianGames2022#IsBaar100Paar#Cheer4India#HallaBol#JeetegaBharat#BharatAtAG22 pic.twitter.com/e4KnLA8YXv
ಭಾರತದ 655 ಸ್ಪರ್ಧಿಗಳ ಬಲವಾದ ತಂಡದೊಂದಿಗೆ ಚೀನಾದ ಹ್ಯಾಂಗ್ಝೌಗೆ ತೆರಳಿತ್ತು. ವಾಪಸ್ ಬರುವಾಗ ದಾಖಲೆಯ 107 ಪದಕಗಳೊಂದಿಗೆ ಬಂದಿದೆ. ಕ್ರೀಡಾಪ್ರೇಮಿಗಳಿಗೆ ಹಾಗೂ ಪೋಷಕರಿಗೆ ಈ ಸಾಧನೆ ದೊಡ್ಡ ಸಮ್ಮಾನ. ಈ ಗಮನಾರ್ಹ ಸಾಧನೆಯು ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಬಲವನ್ನು ಇನ್ನಷ್ಟು ವೃದ್ಧಿಸಿದೆ. ಭಾರತದ ಪದಕ ಪಟ್ಟಿಯಲ್ಲಿ 28 ಚಿನ್ನ ಇರುವುದು ಮತ್ತೊಂದು ವಿಶೇಷವಾಗಿದೆ. ಜತೆಗೆ 38 ಬೆಳ್ಳಿ ಮತ್ತು 41 ಕಂಚಿನ ಪದಕಗಳಿದ್ದವು.
2018 ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ 16 ಚಿನ್ನದ ಪದಕಗಳನ್ನು ಪಡೆದಿತ್ತು. ಈ ಬಾರಿ 28 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಈ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಯ ಗುಣಮಟ್ಟ ಹಾಗೂ ಕೌಶಲಕ್ಕೆ ತಕ್ಕ ಹಾಗೆ ಭಾರತದ ಸ್ಪರ್ಧಿಗಳು ಪಳಗಿರುವುದು ಖಚಿತವಾಗಿ. ಸ್ಪರ್ಧೆಯ ನಿರ್ಣಾಯಕ 14ನೇ ದಿನದಂದು, ಭಾರತವು ಒಟ್ಟು 12 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಎತ್ತರಕ್ಕೆ ಏರಿತು. ಇದರಲ್ಲಿ 6 ಚಿನ್ನ, 4 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಸೇರಿಕೊಂಡಿವೆ. ಈ ಅಸಾಧಾರಣ ಯಶಸ್ಸು ಭಾರತೀಯ ಕ್ರೀಡಾಪಟುಗಳು, ತರಬೇತುದಾರರು ಮತ್ತು ಪ್ರತಿಭೆಯನ್ನು ಪೋಷಿಸುವ ವ್ಯವಸ್ಥೆ, ಅಥ್ಲೀಟ್ಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಕೂಟದ ಆರಂಭದಿಂದಲೂ ಮಿಂಚಿದ ಭಾರತ ಕ್ರೀಡಾಪಟುಗಳು 107 ಪದಕಗಳನ್ನು ಗೆದ್ದು ಕ್ರೀಡಾ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಏರಿಸಿತು. ಜಕಾರ್ತಾದಲ್ಲಿ 2018ರಲ್ಲಿ 70 ಪದಕಗಳನ್ನು ಗೆದ್ದಿದ್ದ ಭಾರತ, ಏಷ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿಗೆ 100 ಪದಕಗಳ ಗಡಿಯನ್ನು ದಾಟಿತ್ತು. ಈ ಗೆಲುವು ಕ್ರೀಡಾಪಟುಗಳು ಮತ್ತು ಸಹಾಯಕ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿ ಎನಿಸಿಕೊಂಡಿತು. ಭಾರತವು 655 ಕ್ರೀಡಾಪಟುಗಳನ್ನು ಒಳಗೊಂಡ ಅತಿದೊಡ್ಡ ನಿಯೋಗವನ್ನು ಚೀನಾಕ್ಕೆ ಕಳಹಿಸಿಕೊಟ್ಟಿತ್ತು. ಅಂತಿಮವಾಗಿ ಚೀನಾ, ಜಪಾನ್ ಮತ್ತು ಕೊರಿಯಾ ಗಣರಾಜ್ಯದ ನಂತರ ನಾಲ್ಕನೇ ಸ್ಥಾನವನ್ನು ಪದಕಪಟ್ಟಿಯಲ್ಲಿ ಪಡೆಯಿತು.
ಏಷ್ಯನ್ ಕ್ರೀಡಾಕೂಟವು ಭಾರತದ ಪಾಳಿಗೆ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು. ಭಾರತೀಯ ಕ್ರೀಡಾಪಟುಗಳು ಶ್ರೇಷ್ಠತೆಯ ಉತ್ತುಂಗವನ್ನು ತಲುಪಿದ್ದರು.
ಆರ್ಚರಿ ಸಾಧನೆ
ಏಷ್ಯನ್ ಗೇಮ್ಸ್ನಲ್ಲಿ ಭಾರತದ ಬಿಲ್ಲುಗಾರರು ಉತ್ತಮ ಸಾಧನೆ ಮಾಡಿದ್ದಾರೆ.5 ಚಿನ್ನ, 2 ಬೆಳ್ಳಿ, 2 ಕಂಚು ಸೇರಿಕೊಂಡು 9 ಪದಕಗಳನ್ನು ಗೆದ್ದುಕೊಂಡಿತು. ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತವು ಪ್ರಾಬಲ್ಯ ಸಾಧಿಸಿತು. ಎಲ್ಲಾ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಾಸ್ ಡಿಯೋಟಾಲೆ ಜೋಡಿ ಏಷ್ಯನ್ ಗೇಮ್ಸ್ ನ ಕಾಂಪೌಂಡ್ ಬಿಲ್ಲುಗಾರಿಕೆ ಮಿಶ್ರ ತಂಡದಲ್ಲಿ ಐತಿಹಾಸಿಕ ಮೊದಲ ಚಿನ್ನ ಗೆದ್ದಿತು. ಜ್ಯೋತಿ ವೆನ್ನಮ್ ತಂಡ ಮತ್ತು ವೈಯಕ್ತಿಕ ಕಾಂಪೌಂಡ್ ಸ್ಪರ್ಧೆ ಸೇರಿದಂತೆ ಎರಡು ಚಿನ್ನದ ಪದಕಗಳನ್ನು ಗೆದ್ದರೆ, ಓಜಾಸ್ ಮತ್ತು ಅಭಿಷೇಕ್ ವರ್ಮಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದರು.
ಬ್ಯಾಡ್ಮಿಂಟನ್ ಸಾಧನೆ
ಗಾಯದ ನಂತರ ಅಂಗಣಕ್ಕೆ ಮರಳುತ್ತಿರುವ ಭಾರತದ ಸ್ಟಾರ್ ಶಟ್ಲರ್ ಪಿ.ವಿ.ಸಿಂಧು ಅವರಿಂದ ಭಾರತೀಯ ಅಭಿಮಾನಿಗಳು ಭರವಸೆ ಹೊಂದಿದ್ದರು. ಆದರೆ ಅವರು ನಾಕೌಟ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಿನ್ನದ ಪದಕ ಗೆದ್ದರೆ, ಎಚ್.ಎಸ್.ಪ್ರಣಯ್ ಕಂಚಿನ ಪದಕ ಗೆದ್ದರೆ, ಪುರುಷರ ತಂಡ ಬೆಳ್ಳಿ ಗೆದ್ದಿತು.
ಹಾಕಿ ತಂಡಗಳಿಗೆ ಚಿನ್ನ, ಕಂಚು
ಭಾರತೀಯ ಪುರುಷರ ಹಾಕಿ ತಂಡವು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಚಿನ್ನ ಗೆಲ್ಲುವ ಮೂಲಕ ಒಂದು ಹೆಜ್ಜೆ ಮುಂದೆ ಸಾಗಿತ್ತಿ. ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಮಣಿಸಿದ ‘ಮಹಿಳೆಯರ ತಂಡ ಕಂಚಿನ ಪದಕ ಗೆದ್ದುಕೊಂಡಿತು. ವಿಶೇಷವೆಂದರೆ, ಭಾರತ ಮಹಿಳಾ ಹಾಕಿ ತಂಡವು ಹಿಂದಿನ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಗಳಿಸಿತು. ಆದರೆ ಸೆಮಿಯಲ್ಲಿ ಚೀನಾ ವಿರುದ್ಧ ಸೋತು ಕಂಚಿನ ಪದಕ ಗೆದ್ದುಕೊಂಡಿತ್ತು.
ಕಬಡ್ಡಿಯಲ್ಲಿ ಎರಡು ಚಿನ್ನ
2018ರ ಜಕಾರ್ತಾ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಮಹಿಳಾ ಕಬಡ್ಡಿ ತಂಡ ಚೈನೀಸ್ ತೈಪೆ ತಂಡವನ್ನು 26-25 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದುಕೊಂಡಿತು. ಪುರುಷರ ಕಬಡ್ಡಿ ತಂಡವೂ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿತು. ಪವನ್ ಸೆಹ್ರಾವತ್ ನೇತೃತ್ವದ ತಂಡವು ಇರಾನ್ ವಿರುದ್ಧ ಸೇಡು ತೀರಿಸಿಕೊಂಡಿತು. ಕಬಡ್ಡಿಯ ವಿಷಯಕ್ಕೆ ಬಂದಾಗ, ಭಾರತವು ಸೋಲಿಸಲಾಗದು ಎಂದು ಸಾಬೀತುಪಡಿಸಿತು
ಶೂಟಿಂಗ್ನಲ್ಲಿ ಪದಕಗಳ ಮಹಾಪೂರ
ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ 22 ಪದಕಗಳನ್ನು ಗೆದ್ದಿರುವ ಭಾರತೀಯ ಶೂಟಿಂಗ್ ತಂಡವು ಭಾರತದ ಶೂಟರ್ಗಳು ಸಾಧನೆ ಮಾಡಿತು. ಇದು ಭಾರತದ 33 ಸದಸ್ಯರ ಶೂಟಿಂಗ್ ತಂಡಕ್ಕೆ ಅತ್ಯುತ್ತಮ ಕ್ರೀಡಾಕೂಟವಾಯಿತು.
ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ 29 ಪದಕಗಳು
ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟುಗಳು 29 ಪದಕಗಳನ್ನು ಗಳಿಸಿದರು. ಮಹಿಳೆಯರ 5000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಪಾರುಲ್ ಚೌಧರಿ ಚಿನ್ನದ ಪದಕ ಗೆದ್ದರೆ, ಜಾವೆಲಿನ್ ಸ್ಪರ್ಧೆಯಲ್ಲಿ ಕಿಶೋರ್ ಕುಮಾರ್ ಜೆನಾ 86.77 ಮೀಟರ್ ಎಸೆದು ಬೆಳ್ಳಿ ಗೆದ್ದರು.
ಇದನ್ನೂ ಓದಿ : Year Ender 2023: ಈ ವರ್ಷ ಗಮನ ಸೆಳೆದ ಹೊಸ ಫಿಟ್ನೆಸ್ ತಂತ್ರಗಳಿವು
ಅಚ್ಚರಿಯ ಪದಕಗಳು
ಈಕ್ವೆಸ್ಟ್ರಿಯನ್ ವೈಯಕ್ತಿಕ ಡ್ರೆಸಿಂಗ್ನಲ್ಲಿ ಅನುಷ್ ಅಗರ್ವಾಲ್ಲಾ ಅವರ ಮೊದಲ ಕಂಚಿನ ಪದಕ ಮತ್ತು ನಂತರ ಹೃದಯ್, ದಿವ್ಯಕೃತಿ ಮತ್ತು ಸುದೀಪ್ತಿ ಮತ್ತು ಟೀಮ್ ಡ್ರೆಸ್ಸೇಜ್ ಈಕ್ವೆಸ್ಟ್ರಿಯನ್ನಲ್ಲಿ ಚಿನ್ನ ಗೆದ್ದು ಅಚ್ಚರಿ ಮೂಡಿಸಿದರು. ಭಾರತೀಯ ಮಹಿಳಾ ಟೇಬಲ್ ಟೆನಿಸ್ ತಂಡದ ಕಂಚಿನ ಪದಕ ಗೆದ್ದು ಮಿಂಚಿದರು. ಪುರುಷರ 1000 ಮೀಟರ್ ಓಟದಲ್ಲಿ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಮ್ ಐತಿಹಾಸಿಕ ಕಂಚಿನ ಪದಕ ಮತ್ತು ಮಿಶ್ರ 35 ಕಿ.ಮೀ ಓಟದ ನಡಿಗೆಯಲ್ಲಿ ರಾಮ್ ಬಾಬು ಮತ್ತು ಮಂಜು ರಾಣಿ ಮೂರನೇ ಸ್ಥಾನ ಪಡೆದಿರುವುದು ಭಾರತೀಯ ಕ್ರೀಡಾಪಟುಗಳ ಸಾಧನೆಯನ್ನು ತೋರಿಸಿತು.
ಭಾರತದ ಮಹಿಳೆಯರ ರೋಲರ್ ಸ್ಕೇಟಿಂಗ್ ತಂಡಗಳು 3000 ಮೀಟರ್ ರಿಲೇ ಟೀಮ್ ಸ್ಪರ್ಧೆಗಳಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿತು. ಭಾರತದ ಮಹಿಳಾ ರೆಗು ತಂಡ ಮತ್ತು ಪುರುಷರ ಬ್ರಿಡ್ಜ್ ತಂಡಗಳು ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕಗಳನ್ನು ಗೆದ್ದವು. ವಿಶೇಷವೆಂದರೆ, ಅದಿತಿ ಅಶೋಕ್ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ಏಷ್ಯನ್ ಕ್ರೀಡಾಕೂಟದಲ್ಲಿ ಗಾಲ್ಫ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಒಲಿಂಪಿಕ್ಸ್ ಟಿಕೆಟ್ ಪಡೆದ ಸ್ಪರ್ಧಿಗಳು
ಗೆದ್ದಿರುವ ಪ್ರತಿಷ್ಠಿತ ಪದಕಗಳ ಹೊರತಾಗಿ ಹ್ಯಾಂಗ್ಝೌನ ಏಷ್ಯನ್ ಗೇಮ್ಸ್ ಮುಂಬರುವ ಪ್ಯಾರಿಸ್ 2024 ಒಲಿಂಪಿಕ್ಸ್ಗೆ ಅಪೇಕ್ಷಿತ ಅರ್ಹತೆಗಳನ್ನು ಭಾರತೀಯ ಸ್ಪರ್ಧಿಗಳಿಗೆ ಒದಗಿಸಿತು. ಏಷ್ಯನ್ ಗೇಮ್ಸ್ನ ಪದಕಗಳು ಒಲಿಂಪಿಕ್ಸ್ನ ಅರ್ಹತೆಗೆ ಮಾನದಂಡವಾಗಿದ್ದವು. ವಿವಿಧ ಕ್ರೀಡೆಗಳಲ್ಲಿ ಒಟ್ಟು 74 ಒಲಿಂಪಿಕ್ ಕೋಟಾಗಳನ್ನು ಭಾರತದ ಸ್ಪರ್ಧಿಗಳು ಪಡೆದುಕೊಂಡಿದ್ದಾರೆ. ಆರ್ಚರಿಯಲ್ಲಿ 6, ಆರ್ಟಿಸ್ಟಿಕ್ ಸ್ವಿಮ್ಮಿಂಗ್ನಲ್ಲಿ 10, ಬಾಕ್ಸಿಂಗ್ನಲ್ಲಿ 34, ಬ್ರೇಕಿಂಗ್ನಲ್ಲಿ 2, ಹಾಕಿಯಲ್ಲಿ 2, ಮಾಡರ್ನ್ ಪೆಂಟಾಥ್ಲಾನ್ನಲ್ಲಿ 10, ಸೇಯ್ಲಿಂಗ್ನಲ್ಲಿ 6, ಟೆನಿಸ್ನಲ್ಲಿ 2 ಮತ್ತು ವಾಟರ್ ಪೋಲೊದಲ್ಲಿ 2 ಅರ್ಹತೆಗಳು ಲಭಿಸಿದವು.
ಒಟ್ಟಾರೆ ಏಷ್ಯನ್ ಗೇಮ್ಸ್ 2023 ಪದಕಗಳ ಪಟ್ಟಿಯಲ್ಲಿ ಆತಿಥೇಯ ಚೀನಾ ಅಗ್ರಸ್ಥಾನದಲ್ಲಿದೆ. 187 ಚಿನ್ನದ ಪದಕಗಳೊಂದಿಗೆ ಅದು ಮುಂಚೂಣಿ ಸ್ಥಾನ ಪಡೆದಿದೆ. ಜಪಾನ್ 47 ಚಿನ್ನದ ಪದಕಗಳೊಂದಿಗೆ ಮತ್ತು ಕೊರಿಯಾ ಗಣರಾಜ್ಯ 36 ಚಿನ್ನದ ಪದಕಗಳೊಂದಿಗೆ ನಂತರದ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ.