ಪ್ಯಾರಿಸ್: ಇಲ್ಲಿ ಆರಂಭಗೊಂಡ ವರ್ಷದ ದ್ವಿತೀಯ ಗ್ರ್ಯಾನ್ ಸ್ಲಾಮ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿ(French open 2023)ಯ ಸೋಮವಾರ ನಡೆಯುವ ಪಂದ್ಯದಲ್ಲಿ ವಿಶ್ವದ ನಂ.1 ಟೆನಿಸಿಗ ಕಾರ್ಲೊಸ್ ಅಲ್ಕರಾಜ್ ಮತ್ತು ಅನುಭವಿ ಆಟಗಾರ, 22 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳ ಒಡೆಯ ಸರ್ಬಿಯಾದ ನೋವಾಕ್ ಜೋಕೋವಿಕ್ ತಮ್ಮ ಅಭಿಯಾನವನ್ನು ಆರಂಭಿಸಲಿದ್ದಾರೆ.
ದಾಖಲೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಜೋಕೋವಿಕ್ಗೆ ಮೊದಲ ಸುತ್ತಿನಲ್ಲಿ ಅಮೆರಿಕದ ಅಲೆಕ್ಸಾಂಡರ್ ಕೊವಾಸೆವಿಚ್ ಸವಾಲು ಎದುರಾಗಲಿದೆ. ಮತ್ತೊಂದು ಪಂದ್ಯದಲ್ಲಿ ಇಟಲಿಯ ಫ್ಲಾವಿಯೊ ಕೊಬೊಲ್ಲಿ ವಿರುದ್ಧ ಅಲ್ಕರಾಜ್ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಭಾರತದ ಮೂವರ ಸ್ಪರ್ಧೆ
ಪುರುಷರ ಡಬಲ್ಸ್‌ನಲ್ಲಿ ಭಾರತದ ಯೂಕಿ ಭಾಂಬ್ರಿ ಹಾಗೂ ಸಾಕೇತ್ ಮೈನೇನಿ ಜತೆಗೂಡಿ ಆಡಲಿದ್ದಾರೆ. ಅನುಭವಿ ಮತ್ತು ಹಿರಿಯ ಆಟಗಾರ ರೋಹನ್ ಬೋಪಣ್ಣ ಹಾಗು ಅವರ ಜತೆಗಾರ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಕೂಡ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಸಾಕೇತ್-ಯೂಕಿ ಜೋಡಿ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಆರ್ಥರ್ ರಿಂಡಕ್ರ್ನೆಚ್-ಎನ್ಜೋ ಕೊಕಾಡ್ ವಿರುದ್ಧ ಆಡಲಿದೆ. ಬೋಪಣ್ಣ-ಎಬ್ಡೆನ್ ಜೋಡಿಗೆ ಫ್ರಾನ್ಸ್‌ನ ದೌಂಬಿಯಾ-ರಿಬೌಲ್ ಅವರ ಸವಾಲು ಎದುರಾಗಿದೆ.
ಇದನ್ನೂ ಓದಿ French Open 2023: ಇಂದಿನಿಂದ ಫ್ರೆಂಚ್ ಓಪನ್; ನಡಾಲ್ ದಾಖಲೆ ಮುರಿಯುವ ವಿಶ್ವಾಸದಲ್ಲಿ ಜೋಕೊ
ಅರೈನಾ ಸಬಲೆಂಕಾ, ಸಿಸಿಪಾಸ್ ದ್ವಿತೀಯ ಸುತ್ತಿಗೆ
ಟೂರ್ನಿಯ ಮೊದಲ ದಿನವಾದ ಭಾನುವಾರ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಅರೇನಾ ಸಬಲೆಂಕಾ, ಪುರುಷರ ಸಿಂಗಲ್ಸ್ನಲ್ಲಿ ಗ್ರೀಸ್‌ನ ಸ್ಟೆಫಾನೋಸ್ ಸಿಸಿಪಾಸ್ ಸೇರಿ ತಾರಾ ಆಟಗಾರರು ಗೆಲುವಿನ ಶುಭಾರಂಭ ಕಂಡಿದ್ದಾರೆ.
ಸಬಲೆಂಕಾ ಅವರು 6-3, 6-2 ನೇರ ಸೆಟ್‌ಗ ಅಂತರದಿಂದ ಉಕ್ರೇನ್‌ನ ಮಾರ್ಟಾ ಕೊಸ್ಟುಕ್ ವಿರುದ್ಧ ಸುಲಭ ಗೆಲುವು ಸಾಧಿಸಿದರು. 5ನೇ ಶ್ರೇಯಾಂಕದ ಗ್ರೀಸ್‌ನ ಸ್ಟೆಫಾನೋಸ್ ಸಿಸಿಪಾಸ್ 7-5, 6-3, 4-6, 7-6(9/7) ಅಂತರದಲ್ಲಿ ಚೆಕ್ ಗಣರಾಜ್ಯದ ಜಿರಿ ವೆಸ್ಲಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರು. ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ತಮ್ಮದೇ ದೇಶದವರಾದ ಮೆಕೆನ್ಜಿ ಮೆಕ್‌ಡೊನಾಲ್ಡ್ ವಿರುದ್ಧ 6-4, 7-5, 6-4ರಲ್ಲಿ ಗೆಲುವು ದಾಖಲಿಸಿದರು.