Site icon Vistara News

Tilak Varma : ಅಮ್ಮಾ ಈ ಸಾಧನೆ ನಿನಗರ್ಪಣೆ, ಅರ್ಧಶತಕ ಬಾರಿಸಿ ತಾಯಿಯನ್ನು ಸ್ಮರಿಸಿದ ತಿಲಕ್​ ವರ್ಮಾ

Tilak Varma

ಬೆಂಗಳೂರು : ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ತಂಡ ಏಷ್ಯನ್​ ಗೇಮ್ಸ್​ ಕ್ರಿಕೆಟ್​ ಸ್ಪರ್ಧೆಯಲ್ಲಿ ಫೈನಲ್ ತಲುಪಿದೆ. ಶುಕ್ರವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ 9 ವಿಕೆಟ್ ಸುಲಭ ಜಯ ದಾಖಲಿಸಿದ ಭಾರತ ತಂಡ ಫೈನಲ್​ಗೇರಿದ್ದು ಕನಿಷ್ಠ ಪಕ್ಷ ಬೆಳ್ಳಿಯ ಪದಕವೊಂದನ್ನು ಖಚಿತಪಡಿಸಿಕೊಂಡಿದೆ. ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ಅಧಿಕಾರಯುತ ವಿಜಯ ಸಾಧಿಸಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಅಬ್ಬರದ ಪ್ರದರ್ಶನ ನೀಡಿದೆ. ಇವರಲ್ಲಿ ಆಲ್​ರೌಂಡರ್​ ತಿಲಕ್​ ವರ್ಮಾ ಅವರ ಕೊಡುಗೆ ದೊಡ್ಡದಿದೆ. ಅವರು ಬೌಲಿಂಗ್​ನಲ್ಲಿ ಒಂದು ವಿಕೆಟ್ ಪಡೆಯುವ ಜತೆಗೆ ಬ್ಯಾಟಿಂಗ್​ನಲ್ಲಿ ಅಬ್ಬರದ 56 ರನ್​ ಬಾರಿಸಿದ್ದಾರೆ. ಈ ಯುವ ಆಟಗಾರ ತಮ್ಮ ಉತ್ತಮ ಪ್ರದರ್ಶನವನ್ನು ಪ್ರೀತಿಯ ತಾಯಿಗೆ ಅರ್ಪಿಸಿದ್ದಾರೆ.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ್ದ ಭಾರತ ತಂಡ ಎದುರಾಳಿ ಬಾಂಗ್ಲಾದೇಶ ತಂಡಕ್ಕೆ ಬ್ಯಾಟಿಂಗ್​ ಆಹ್ವಾನ ನೀಡಿತ್ತು. ಆದರೆ ಬಾಂಗ್ಲಾ ಬಳಗ 20 ಓವರ್​ಗಳಲ್ಲಿ ಕೇವಲ 96 ರನ್ ಬಾರಿಸಿತು. ಪ್ರತಿಯಾಗಿ ಭಾರತ ಕೇವಲ9.2 ಓವರ್​ಗಳಲ್ಲಿ 97 ರನ್ ಬಾರಿಸಿ ಗೆಲುವು ಪಡೆಯಿತು. ಈ ಗೆಲುವಿಗೆ ತಿಲಕ್​ ವರ್ಮಾ ಅವರ ಅಬ್ಬರದ ಬ್ಯಾಟಿಂಗ್ ನೆರವಾಯಿತು.

ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಳಿದ ತಿಲಕ್​ ವರ್ಮಾ ಆರಂಭದಿಂದಲೇ ಅಬ್ಬರಿಸಿದ್ದರು. ಬಾಂಗ್ಲಾ ಬೌಲರ್​ಗಳಿಗೆ ತಲೆ ಎತ್ತಲು ಅವಕಾಶ ಕೊಡದ ಅವರು ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದರು. 25ನೇ ಎಸತಕ್ಕೆ ಸಿಕ್ಸರ್ ಬಾರಿಸಿ ಅರ್ಧ ಶತಕ ಪೂರೈಸಿದ ಅವರು ಸಂಭ್ರಮಿಸಿದರು. ಈ ವೇಳೆ ಅವರು ತಮ್ಮ ತಾಯಿ ಗಾಯತ್ರಿ ದೇವಿ ಅವರಿಗೆ ಪ್ರದರ್ಶನವನ್ನು ಅರ್ಪಿಸಿದರು.

ತಿಲಕ್​ ವರ್ಮಾ ಅವರು ತಮ್ಮ ದೇಹದಲ್ಲಿ ತಾಯಿಯ ಚಿತ್ರದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅರ್ಧ ಶತಕ ಪೂರೈಸುತ್ತಿದ್ದಂತೆ ಅವರು ಜೆರ್ಸಿಯನ್ನು ಮೇಲೆತ್ತಿ ತಾಯಿಯ ಚಿತ್ರವನ್ನು ಮುಟ್ಟುವ ಜತೆಗೆ ಆಕಾಶಕ್ಕೆ ತಲೆ ಎತ್ತಿಕೈ ಮುಗಿದರು. ಈ ಮೂಲಕ ಅವರು ಏಷ್ಯನ್ ಗೇಮ್ಸ್​ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ತಾಯಿಗೆ ಅರ್ಪಿಸಿದರು. ತಿಲಕ್ ವರ್ಮಾ ಅವರ ಈ ಸನ್ನೆಯು ನೆಟ್ಟಿಗರ ಗಮನ ಸೆಳೆಯಿತು.

ಗೆಳತಿಯನ್ನೂಸ್ಮರಿಸಿದ ಆಟಗಾರ

ಪಂದ್ಯದ ಬಳಿಕ ಮಾತನಾಡಿದ ತಿಲಕ್​ ವರ್ಮಾ ಅವರು ನನ್ನ ಈ ಅತ್ಯುತ್ತಮ ಪ್ರದರ್ಶನವನ್ನು ತಾಯಿಗೆ ಅರ್ಪಿಸಿದ್ದೇನೆ ಎಂದ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ನನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೇನೆ. ಇವೆಲ್ಲದಕ್ಕೂ ನನ್ನ ತಾಯಿಯೇ ಕಾರಣ. ಹೀಗಾಗಿ ಅವರಿಗೆ ಶ್ರೇಯಸ್ಸನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಅವರು ತಮ್ಮ ಗೆಳತೆ ಸಮೈರಾ ಅವರನ್ನೂ ಸ್ಮರಿಸಿಕೊಂಡಿದ್ದಾರೆ.

ಪಂದ್ಯದಲ್ಲಿ ಏನಾಯಿತು?

ಇಲ್ಲಿನ ಝೆಜಿಯಾಂಗ್ ಯುನಿವರ್ಸಿಟಿ ಆಫ್ ಟೆಕ್ನಾಲಜಿ ಕ್ರಿಕೆಟ್ ಫೀಲ್ಡ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಭಾರತ ಬೌಲರ್​ಗಳ ಅಬ್ಬರಕ್ಕೆ ನಲುಗಿದ ನೆರೆಯ ದೇಶದ ತಂಡ ನಿಗದಿತ 20 ಓವರ್​ಗಳನ್ನು ಪೂರ್ತಿಯಾಗಿ ಅಡಿದರೂ 9 ವಿಕೆಟ್​ ನಷ್ಟಕ್ಕೆ 96 ರನ್​ಗಳನ್ನು ಮಾತ್ರ ಪೇರಿಸಲು ಶಕ್ತಗೊಂಡಿತು. ಪ್ರತಿಯಾಗಿ ಆಡಿದ ಬಲಿಷ್ಠ ಭಾರತ ತಂಡ ಬಾಂಗ್ಲಾ ವಿರುದ್ಧ ಅಬ್ಬರಿಸಿ ಕೇವಲ 9.2 ಓವರ್​ಗಳಲ್ಲಿ 1 ವಿಕೆಟ್​ ​ ನಷ್ಟಕ್ಕೆ 96 ರನ್ ಬಾರಿಸಿ 9 ವಿಕೆಟ್​ ಸುಲಭ ವಿಜಯ ಗಳಿಸಿತು.

ತಿಲಕ್​ ವರ್ಮಾ ಅಬ್ಬರದ ಬ್ಯಾಟಿಂಗ್​

ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡ ಯಶಸ್ವಿ ಜೈಸ್ವಾಲ್ ಅವರನ್ನು ಶೂನ್ಯಕ್ಕೆ ಕಳೆದುಕೊಳ್ಳುವ ಮೂಲಕ ಆರಂಭಿಕ ಹಿನ್ನಡೆಗೆ ಒಳಗಾಯಿತು. ಆದರೆ, ಅದರ ಲಾಭವನ್ನು ಪಡೆಯಲು ಮುಂದಿನ ನಾಯಕ ಋತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ ಅವಕಾಶ ಕೊಡಲಿಲ್ಲ. ತಿಲಕ್​ ವರ್ಮಾ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಅರ್ಧ ಶತಕ ಬಾರಿಸಿದರೆ, ಋತುರಾಜ್ ಗಾಯಕ್ವಾಡ್​ 56 ರನ್ ಬಾರಿಸಿದರು. ಮೈದಾನ ತುಂಬಾ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ ತಿಲಕ್ ವರ್ಮಾ 25 ಎಸೆತಕ್ಕೆ ತಮ್ಮ ಅರ್ಧ ಶತಕ ಪೂರೈಸಿದರು. ಅವರ ಇನಿಂಗ್ಸ್​​ನಲ್ಲಿ 2 ಫೋರ್ ಹಾಗೂ 6 ಸಿಕ್ಸರ್​ಗಳು ಇದ್ದವು. ಋತುರಾಜ್​ ಕೂಡ 26 ಎಸೆತಗಳಲ್ಲಿ 4 ಫೋರ್​ ಹಾಗೂ 3 ಸಿಕ್ಸರ್​ಗಳೊಂದಿಗೆ 40 ರನ್ ಬಾರಿಸಿದರು. ಇವರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಬಾಂಗ್ಲಾ ಬೌಲರ್​ಗಲು ದಿಕ್ಕಾಪಾಲಾದರು.

ಭರ್ಜರಿ ಬೌಲಿಂಗ್​

ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಯೋಜನೆಗೆ ತಕ್ಕ ಹಾಗೆ ಆಡಿತು. ಆರಂಭದಿಂದಲೇ ಬಾಂಗ್ಲಾ ಬ್ಯಾಟರ್​ಗಳನ್ನು ಕಟ್ಟಿ ಹಾಕಿತು. ತಮಿಳುನಾಡಿನ ಆಟಗಾರರಾದ ವಾಷಿಂಗ್ಟನ್ ಸುಂದರ್ ಹಾಗೂ ಸಾಯಿ ಕಿಶೋರ್ ಅನುಕ್ರಮವಾಗಿ 3 ಹಾಗೂ 2 ವಿಕೆಟ್​ಗಳನ್ನು ಉರುಳಿಸಿ ಬಾಂಗ್ಲಾ ದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅರ್ಶ್​ದೀಪ್​ ಸಿಂಗ್​, ತಿಲಕ್​ ವರ್ಮಾ. ರವಿ ಬಿಷ್ಣೋಯಿ, ಹಾಗೂ ಶಹಬಾಜ್​ ಅಹಮದ್ ತಲಾ ಒಂದು ವಿಕೆಟ್​ ಉರುಳಿಸಿದರು.

ಇದನ್ನೂ ಓದಿ : ICC World Cup 2023 : ಶುಭ್​ಮನ್​ ಗಿಲ್​ಗೆ ಡೆಂಗ್ಯೂ ಜ್ವರ; ವಿಶ್ವ ಕಪ್​ನಲ್ಲಿ ಭಾರತಕ್ಕೆ ಹಿನ್ನಡೆ

ಭಾರತದ ಬೌಲಿಂಗ್ ಅಬ್ಬರಕ್ಕೆ ಬಾಂಗ್ಲಾದೇಶದ ಬ್ಯಾಟಿಂಗ್ ಬೆನ್ನೆಲುಬು ಮುರಿಯಿತು. ಆರಂಭಿಕ ಬ್ಯಾಟರ್​ ಪರ್ವೇಜ್ ಹೊಸೈನ್​ 23 ರನ್ ಬಾರಿಸಿದರೆ ಮಧ್ಯಮ ಕ್ರಮಾಂಕದಲ್ಲಿ ಜಕರ್ ಅಲಿ 24 ರನ್ ಕೊಡುಗೆ ಕೊಟ್ಟರು. ರಕಿಬುಲ್ ಹಸನ್ ಕೂಡ 14 ರನ್ ಬಾರಿಸಿದರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ಬಾಂಗ್ಲಾದೇಶದ ಬಗ್ಗೆ ಹೇಳುವುದಾದರೆ, ಆ ತಂಡದ ಬೌಲರ್ಗಳು ಭಾರತದ ಬ್ಯಾಟಿಂಗ್​ ವಿಧಾನದಿಂದ ಆಘಾತಕ್ಕೊಳದಾರು. ಭಾರತೀಯ ಬ್ಯಾಟರ್​ಗಳು ಅವರಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ ಮತ್ತು ಅವರು ಪಡೆದ ಒಂದು ವಿಕೆಟ್ ಕೂಡ ತುಂಬಾ ಸುಲಭ ವಿಕೆಟ್ ಆಗಿತ್ತು. ಆದರೆ ಈ ತಂಡ ಶನಿವಾರ ತಮ್ಮ ಕಂಚಿನ ಪದಕಕ್ಕಾಗಿ ಹೋರಾಡಲಿದೆ.

Exit mobile version