Site icon Vistara News

Times Influential list 2024: ಟೈಮ್ಸ್‌ ಪ್ರಭಾವಿ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್,ಆಲಿಯಾ ಭಟ್

Times Influential list 2024

ನ್ಯೂಯಾರ್ಕ್: ಟೈಮ್ ಮ್ಯಾಗಜೀನ್‌ನ ಈ ವರ್ಷದ 100 ಪ್ರಭಾವಿ(Times Influential list 2024) ವ್ಯಕ್ತಿಗಳ ಪಟ್ಟಿ ಬಿಡುಗಡೆಗೊಂಡಿದ್ದು, ಅಚ್ಚರಿ ಎಂಬಂತೆ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ಗಂಭೀರ ಆರೋಪ ಮಾಡಿ ಕುಸ್ತಿಗೆ ವಿದಾಯ ಹೇಳಿದ್ದ ಒಲಿಂಪಿಯನ್​ ಕುಸ್ತಿಪಟು ಸಾಕ್ಷಿ ಮಲಿಕ್(Sakshi Malik) ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಜತೆಗೆ, ಬಾಲಿವುಡ್ ನಟಿ ಆಲಿಯಾ ಭಟ್(Alia Bhatt)​, ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ(Satya Nadella) ಕೂಡ ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸಿದ್ದ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಕುಸ್ತಿ ಫೆಡರೇಷನ್​ಗೆ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅವರು ಕಳೆದ ವರ್ಷದ ಡಿಸೆಂಬರ್‌ನಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ 31 ವರ್ಷದ ಸಾಕ್ಷಿ ಕುಸ್ತಿಗೆ ನಿವೃತ್ತಿ ಘೋಷಿಸಿದ್ದರು. ಒಲಿಂಪಿಕ್ ಅರ್ಹತಾ ಪಂದ್ಯಗಳಿಗಾಗಿ ನಡೆದಿದ್ದ ರಾಷ್ಟ್ರೀಯ ಟ್ರಯಲ್ಸ್‌ನಿಂದಲೂ ಹೊರಗುಳಿದಿದ್ದರು.

ಇದನ್ನೂ ಓದಿ Sakshi Malik: ಸಂಜಯ್ ಸಿಂಗ್ ನೇತೃತ್ವದ ಕುಸ್ತಿ ಟೂರ್ನಿಯಲ್ಲಿ ಸ್ಪರ್ಧಿಸಬೇಡಿ: ಸಾಕ್ಷಿ ಮಲಿಕ್

ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು. ಮೂಲತಃ ಆಂಧ್ರದವರಾದ ಸತ್ಯ ನಾದೆಲ್ಲಾ, ಕರ್ನಾಟಕದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿಇ ಮುಗಿಸಿದ್ದರು. ಹಾಗೆಯೇ ಎಂಎಸ್‌ ಅನ್ನು ಸ್ಟಾನ್‌ಫೋರ್ಡ್‌ ಮತ್ತು ಎಂಬಿಎ ಅನ್ನು ವಾರ್ಟನ್‌ನಲ್ಲಿ ಮುಗಿಸಿದ್ದಾರೆ. 2014ರಲ್ಲಿ ಮೈಕ್ರೋಸಾಫ್ಟ್ ನ ಸ್ಟೀವ್‌ ಬಾಲ್ಮರ್‌ ಅವರಿಂದ ಸಿಇಒ ಹುದ್ದೆ ಸ್ವೀಕರಿಸಿದ ಇವರು, ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

Exit mobile version