Site icon Vistara News

IPL 2023 : ವೈಯಕ್ತಿಕ ಸಾಧನೆಗಾಗಿ ಆಡಿದರೆ ಕಪಾಳ ಮೋಕ್ಷ ಗ್ಯಾರಂಟಿ ಎಂದು ಸೆಹ್ವಾಗ್​​​ ಎಚ್ಚರಿಸಿದ್ದು ಯಾರಿಗೆ?

to-whom-did-sehwag-warn-that-if-he-plays-for-personal-achievement-salvation-is-guaranteed

#image_title

ಮೊಹಾಲಿ: ಐಪಿಎಲ್ 16ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡವನ್ನು ಹಾಲಿ ಚಾಂಪಿಯನ್​ ಗುಜರಾತ್​ ಜಯಂಟ್ಸ್​ ತಂಡ ಆರು ವಿಕೆಟ್​ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್​ ಮಾಡಿದ ಶಿಖರ್​ ಧವನ್​ ನಾಯಕತ್ವದ ಪಂಜಾಬ್​ ತಂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 153 ರನ್ ಬಾರಿಸಿದರೆ ಗುರಿ ಬೆನ್ನಟ್ಟಿದ ಗುಜರಾತ್​ ಜಯಂಟ್ಸ್​ ತಂಡ ಇನ್ನೊಂದು ಎಸೆತ ಬಾಕಿ ಇರುವಾಗ 4 ವಿಕೆಟ್ ಕಳೆದುಕೊಂಡು 154 ರನ್​ ಬಾರಿಸಿತು. ರಾಹುಲ್​ ತೆವತಿಯಾ ಇನಿಂಗ್ಸ್​ನ 19ನೇ ಓವರ್​ನ ಐದನೇ ಎಸೆತದಲ್ಲಿ ಫೋರ್ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್​ ಶುಭಮ್​ನ್ ಗಿಲ್​ 67 ರನ್​ ಬಾರಿಸಿದ್ದರು. ಆದರೆ, ಅವರ ಬ್ಯಾಟಿಂಗ್​ ಬಗ್ಗೆ ಹಿರಿಯ ಕ್ರಿಕೆಟಿಗರಿಗೆ ಸಮಾಧಾನವಾಗಿಲ್ಲ. ಅವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್ ಕಡಿಮೆಯಿತ್ತು ಎಂಬುದೇ ಅವರೆಲ್ಲರ ಆರೋಪ. ಅದರಲ್ಲೂ ಮಾಜಿ ಸ್ಫೋಟಕ ಬ್ಯಾಟರ್​ ವೀರೇಂದ್ರ ಸೆಹ್ವಾಗ್​ ಈ ಬಗ್ಗೆ ಕಠು ಪದಗಳ ಟೀಕೆ ವ್ಯಕ್ತಪಡಿಸಿದ್ದು ಇದೇ ರೀತಿ ಬ್ಯಾಟ್​ ಮಾಡಿದರೆ ಕ್ರಿಕೆಟ್ ಕ್ಷೇತ್ರ ಕಪಾಳಕ್ಕೆ ಬಾರಿಸುವುದು ಖಾತರಿ ಎಂದು ಹೇಳಿದ್ದಾರೆ.

ಶುಭ್​ಮನ್​ ಗಿಲ್​ ತನ್ನ ಅರ್ಧ ಶತಕ ಪೂರೈಸಲು 40 ಎಸೆತಗಳನ್ನು ಬಳಸಿಕೊಂಡಿದ್ದರು. ನಂತರದ 9 ಎಸೆತಗಳಲ್ಲಿ 17 ರನ್ ಕಲೆ ಹಾಕಿದ್ದರು. ಇದೇ ಅಂಕಿ ಅಂಶವನ್ನು ತೋರಿಸಿ ಶುಭ್​ಮನ್​ ಗಿಲ್​​ ಬ್ಯಾಟಿಂಗ್ ವೈಖರಿ ಸರಿಯಾಗಿ ಇರಲಿಲ್ಲ. ಕೇವಲ ವೈಯಕ್ತಿಕ ಸಾಧನೆಗಾಗಿ ಅವರು ಅರ್ಧ ಶತಕ ಪೂರೈಸಿದ್ದರು ಎಂದು ಸೆಹ್ವಾಗ್ ಹೇಳಿದ್ದಾರೆ. ಒಂದು ವೇಳೆ ಗಿಲ್​ ವೇಗದಲ್ಲಿ ಬ್ಯಾಟಿಂಗ್ ಮಾಡಿದ್ದರೆ ಪಂದ್ಯ ಕೊನೇ ಓವರ್ ತನಕ ಹೋಗುತ್ತಿರಲಿಲ್ಲ ಎಂಬುದಾಗಿ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

ಶುಭ್​ಮನ್​ ಗಿಲ್​ ಕೊನೇ 17 ರನ್​ಗಳನ್ನು ಬಾರಿಸಲು 7ರಿಂದ 8 ಎಸೆತಗಳನ್ನು ಮಾತ್ರ ಬಳಸಿಕೊಂಡಿದ್ದಾರೆ. ಅಂದರೆ ಅರ್ಧ ಶತಕ ಬಾರಿಸಿದ ಬಳಿಕವಷ್ಟೇ ಅವರು ಬ್ಯಾಟಿಂಗ್​ ವೇಗವನ್ನು ವೃದ್ಧಿಸಿದ್ದಾರೆ. ಇದೇ ರೀತಿಯಲ್ಲಿ ಆಟ ಮುಂದುವರಿಸಿದ್ದರೆ ಕೊನೇ ಓವರ್​ನಲ್ಲಿ ಗುಜರಾತ್​ ತಂಡಕ್ಕೆ 17 ರನ್​ ಮಾಡುವ ಪರಿಸ್ಥಿತಿ ಎದುರಾಗುತ್ತಿತ್ತು ಎಂದು ಸೆಹ್ವಾಗ್ ಹೇಳಿದ್ದಾರೆ.

ನಾನು ಅರ್ಧ ಶತಕ ಬಾರಿಸಿಕೊಳ್ಳುತ್ತೇನೆ. ಪಂದ್ಯವನ್ನು ಹೇಗಾದರೂ ಮಾಡಿ ಗೆಲ್ಲಬಹುದು ಎಂಬುದು ಅವರ ಯೋಚನೆಯಾಗಿರುತ್ತದೆ. ಇದು ಕ್ರಿಕೆಟ್ ಇಲ್ಲಿ. ಇಲ್ಲಿ ವೈಯಕ್ತಿಕ ಸಾಧನೆ ಬಗ್ಗೆಯೇ ಹೆಚ್ಚು ಯೋಚನೆ ಮಾಡಿದರೆ ಕಪಾಳ ಮೋಕ್ಷ ಗ್ಯಾರಂಟಿ. ಅರ್ಧ ಶತಕ ಬಾರಿಸಿದ ಬಳಿಕ ತೋರಿಸಿದ ಬ್ಯಾಟಿಂಗ್ ವೇಗವನ್ನು ಮೊದಲೇ ತೋರಿಸಿದ್ದರೆ ತಂಡ ಬೇಗ ಗೆಲ್ಲುತ್ತಿತ್ತು ಎಂಬುದಾಗಿ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯದಲ್ಲಿ ಏನಾಯಿತು?

ಮೊಹಾಲಿಯ ಐ.ಎಸ್‌.ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್​ ಬಾರಿಸಿತು. ಜವಾಬಿತ್ತ ಗುಜರಾತ್​ ಟೈಟನ್ಸ್​ 19.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 154 ರನ್​ ಬಾರಿಸಿ ಗೆಲುವು ದಾಖಲಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟಿದ ಗುಜರಾತ್​ಗೆ ಆರಂಭಿಕರಾದ ವೃದ್ಧಿಮಾನ್​ ಸಾಹಾ ಮತ್ತು ಶಭಮನ್​ ಗಿಲ್​ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ ಕೇವಲ ನಾಲ್ಕು ಓವರ್​ಗಳಲ್ಲಿ 40 ರನ್​ ಜತೆಯಾಟ ನಡೆಸಿತು. ಈ ವೇಳೆ ಕಗಿಸೊ ರಬಾಡ ಅವರು ಸಾಹಾ ವಿಕೆಟ್​ ಕಿತ್ತರು. ಈ ವಿಕೆಟ್​ ಪಡೆಯುತ್ತಿದ್ದಂತೆ ರಬಾಡ ಅವರು ಐಪಿಎಲ್​ನಲ್ಲಿ ನೂರು ವಿಕೆಟ್​ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಬಳಿಕ ಬಂದ ಸಾಯಿ ಸುದರ್ಶನ್​ 19 ರನ್​ಗೆ ಔಟಾದರು. ಆದರೆ ಮತ್ತೊಂದು ತುದಿಯಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದ ಶುಭಮನ್​ ಗಿಲ್​ 40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 49 ಎಸೆತಗಳಿಂದ ಅವರು 67 ರನ್​ ಗಳಿಸಿ ಸ್ಯಾಮ್​ ಕರನ್​ಗೆ ವಿಕೆಟ್​ ಒಪ್ಪಿಸಿದರು.

ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ತೆಗೆಯುವ ಸವಾಲಿನಲ್ಲಿ ಡೇವಿಡ್​ ಮಿಲ್ಲರ್(17*)​ ಮತ್ತು ರಾಹುಲ್​ ತೆವಾಟಿಯ(5*) ಅಜೇಯ ಆಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 2 ಎಸೆತದ ಮುಂದೆ ನಾಲ್ಕು ರನ್​ ಬೇಕಿದ್ದಾಗ ತೆವಾಟಿಯ ಬೌಂಡರಿ ಬಾರಿಸಿ ಗೆಲುವನ್ನು ಸಾರಿದರು. ಪಂಜಾಬ್​ ಪರ ಅರ್ಶ್​ದೀಪ್​ ಸಿಂಗ್​, ರಬಾಡ, ಸ್ಯಾಮ್​ ಕರನ್​ ತಲಾ ಒಂದು ವಿಕೆಟ್​ ಪಡೆದರು.

ಪಾಂಡ್ಯ ಮತ್ತೆ ವಿಫಲ

​ನಾಯಕ ಪಾಂಡ್ಯ ಅವರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ಕೇವಲ 8 ರನ್​ಗೆ ಔಟಾಗುವ ಮೂಲಕ ಮತ್ತೆ ಎರಡಂಕಿ ಮೊತ್ತ ದಾಟುವಲ್ಲಿ ಎಡವಿದರು. ಇದಕ್ಕೂ ಮುನ್ನ ಆಡಿದ ಎರಡು ಪಂದ್ಯದಲ್ಲಿ ಕ್ರಮವಾಗಿ ಅವರು ಗಳಿಸಿದ ಮೊತ್ತ 8,5. ಇದೀಗ ಮೂರು ಪಂದ್ಯಗಳಲ್ಲಿ ಅವರ ಬ್ಯಾಟ್​ನಿಂದ ಬಂದ ಒಟ್ಟು ಮೊತ್ತ 21. ಸದ್ಯ ಈ ಪಂದ್ಯದಲ್ಲಿ ಗಿಲ್​ ಮತ್ತು ಸಹ ಆಟಗಾರರು ಆಡಿದ ಕಾರಣ ಪಂದ್ಯ ಗೆಲುವು ದಾಖಲಿಸಿತು. ಆದರೆ ಮುಂದಿನ ಪಂದ್ಯದಲ್ಲಿಯೂ ಇವರನ್ನೇ ನಂಬಿ ಕೂತರೆ, ಒಂದೊಮ್ಮೆ ಅವರು ಆಡದೇ ಹೋದರೆ ಪಂದ್ಯ ಸೋಲು ಕಾಣುವುದು ಖಚಿತ. ಹೀಗಾಗಿ ಪಾಂಡ್ಯ ತಕ್ಷಣ ಎಚ್ಚೆತ್ತುಕೊಂಡು ಮುಂದಿನ ಪಂದ್ಯದಲ್ಲಿ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳುವ ಅನಿವಾರ್ಯತೆ ಇದೆ.

ನೀರಸ ಬ್ಯಾಟಿಂಗ್​ ಪ್ರದರ್ಶಿಸಿದ ಪಂಜಾಬ್​

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ಗೆ ಆರಂಭದಲ್ಲೇ ಮೊಹಮ್ಮದ್​ ಶಮಿ ಶಾಕ್​ ನೀಡಿದರು. ತಂಡ ಖಾತೆ ತೆರೆಯುವ ಮೊದಲೇ ಪ್ರಭ್​ಶಿಮ್ರಾನ್​ ಸಿಂಗ್​ ವಿಕೆಟ್​ ಬೇಟೆಯಾಡಿ ಗುಜರಾತ್​ಗೆ ಮುನ್ನಡೆ ತಂದುಕೊಟ್ಟರು. ಗಾಯದಿಂದಾಗಿ ಜಾನಿ ಬೇರ್​ಸ್ಟೋ ಟೂರ್ನಿಯಿಂದ ಹೊರಬಿದ್ದ ಕಾರಣ ತಂಡ ಸೇರ್ಪಡೆಗೊಂಡಿದ್ದ ಮ್ಯಾಥ್ಯೂ ಶಾರ್ಟ್‌ ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಕ್ರೀಸ್​ಗೆ ಬಂದ ಆರಂಭದಲ್ಲೇ ಮೊಹಮ್ಮದ್​ ಶಮಿ ಓವರ್​ನಲ್ಲಿ ಅವರು ಬಡಬಡನೆ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು.

ಬಿರುಸಿನಿಂದಲೇ ಬ್ಯಾಟ್​ ಬೀಸುತ್ತಿದ್ದ ಅವರನ್ನು ಕಳೆದ ಪಂದ್ಯದ ಹ್ಯಾಟ್ರಿಕ್​​ ವಿಕೆಟ್​ ವೀರ ರಶೀದ್​ ಖಾನ್​ ಕ್ಲೀನ್​ ಬೌಲ್ಡ್​ ಮಾಡುವ ಮೂಲಕ ಅವರ ಬ್ಯಾಟಿಂಗ್​ ಅಬ್ಬರಕ್ಕೆ ಬ್ರೇಕ್​ ಹಾಕಿದರು. ಒಟ್ಟು 24 ಎಸೆತ ಎದುರಿಸಿದ ಅವರು 36 ರನ್​ ಬಾರಿಸಿದರು. 6 ಬೌಂಡರಿ ಮತ್ತು ಒಂದು ಸಿಕ್ಸರ್​ ಒಳಗೊಂಡಿತ್ತು. ಕಳೆದ ಮೂರು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್​ ಮೂಲಕ ತಂಡಕ್ಕೆ ಆಸರೆಯಾಗಿದ್ದ ನಾಯಕ ಶಿಖರ್​ ಧವನ್​ ಅವರು ಈ ಪಂದ್ಯದಲ್ಲಿ ಕೇವಲ 8 ರನ್​ಗೆ ಔಟಾದರು.

ಇದನ್ನೂ ಓದಿ IPL 2023: ತಂದೆಯ ಕ್ರಿಕೆಟ್​ ಪ್ರದರ್ಶನವನ್ನು ಟಿವಿಯಲ್ಲಿ ಕಂಡು ಖುಷಿಪಟ್ಟ ಅಂಬೆಗಾಲಿನ ಮಗು; ವಿಡಿಯೊ ವೈರಲ್​

ಮ್ಯಾಥ್ಯೂ ಶಾರ್ಟ್‌ ವಿಕೆಟ್​ ಪತನದ ಬಳಿಕ ತಂಡದ ಮೊತ್ತವೂ ಕುಂಡಿತವಾಗಿ ಸಾಗಿತು. ಜಿತೇಶ್​ 25 ರನ್​ ಗಳಿಸಿ ಮೋಹಿತ್​ ಶರ್ಮ ಅವರಿಗೆ ವಿಕೆಟ್​ ಒಪ್ಪಿಸಿದರು. ಮೋಹಿತ್ ಶರ್ಮ ಅವರು ಮೂರು ವರ್ಷಗಳ ಬಳಿಕ ಐಪಿಎಲ್​ ಟೂರ್ನಿಯಲ್ಲಿ ಆಡಲಿಳಿದರು. ಅವರು 2020ರಲ್ಲಿ ಪಂಜಾಬ್​ ತಂಡದ ಪರ ಕೊನೆಯ ಬಾರಿ ಐಪಿಎಲ್​ ಪಂದ್ಯವನ್ನಾಡಿದ್ದರು. ಮೂರು ವರ್ಷಗಳ ಬಳಿಕ ಆಡಿದರೂ ಉತ್ತಮ ಪ್ರದರ್ಶನ ತೋರಿದರು. 4 ಓವರ್​ ಎಸೆದು ಕೇವಲ 18 ರನ್​ ನೀಡಿ 2 ವಿಕೆಟ್​ ಕಿತ್ತರು. ಆಲ್​ರೌಂಡರ್​ ಸ್ಯಾಮ್​ ಕರನ್​ 22, ಭನುಕಾ ರಾಜಪಕ್ಸೆ 20 ರನ್​ ಬಾರಿಸಿದರು. ಅಂತಿಮ ಹಂತದಲ್ಲಿ ಶಾರುಖ್​ ಖಾನ್​ ಅವರು ಸಿಡಿದು ನಿಂತ ಪರಿಣಾಮ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅವರು 9 ಎಸೆತಕ್ಕೆ 22 ರನ್​ ಗಳಿಸಿ ರನೌಟ್​ ಸಂಕಟಕ್ಕೆ ಸಿಲುಕಿದರು.

ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಅಸೌಖ್ಯದ ಕಾರಣ ಪಂದ್ಯದಿಂದ ಹೊರಗುಳಿದಿದ್ದ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ನಾಯಕ್ವ ವಹಿಸಿಕೊಂಡರು. ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ರಶೀದ್​ ಖಾನ್​ ತಂಡವನ್ನು ಮುನ್ನಡೆಸಿದ್ದರು.

Exit mobile version