ಒಡಿಶಾ : ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ (IND VS SA T20) ನಡುವಿನ ಸರಣಿಯ ಎರಡನೇ ಪಂದ್ಯ ಗುವಾಹಟಿಯ ಬರಸ್ಪಾರ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಭಾನುವಾರ ರಾತ್ರಿ ನಡೆಯಲಿದೆ. ಈ ಪಂದ್ಯವನ್ನು ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ. ಸೋತರೆ ೧-೧ ಅಂತರದ ಸಮಬಲದ ಸಾಧನೆ ಸಾಧಿಸಲಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತ ತಂಡಕ್ಕೆ ಈ ಪಂದ್ಯವನ್ನೂ ಗೆಲ್ಲುವ ಅವಕಾಶ ಹೆಚ್ಚಿದೆ. ಅದಕ್ಕಾಗಿ ಸಂಘಟಿತ ಹೋರಾಟ ನಡೆಯಬೇಕಾಗಿದೆ.
ಭಾರತ ತಂಡಕ್ಕೆ ಬೌಲಿಂಗ್ ವಿಭಾಗದ ಸ್ಥಿರತೆಯೇ ದೊಡ್ಡ ಚಿಂತೆ. ಆದಾಗ್ಯೂ ಹಿಂದಿನ ಪಂದ್ಯದಲ್ಲಿ ದೀಪಕ್ ಚಾಹರ್, ಅರ್ಶ್‌ದೀಪ್ ಸಿಂಗ್ ಹಾಗೂ ಹರ್ಷಲ್ ಪಟೇಲ್ ಉತ್ತಮ ಸಾಧನೆ ತೋರಿದ್ದರು. ಅದೇ ಲಯವನ್ನು ಇಲ್ಲೂ ಮುಂದುವರಿಸಿದರೆ ತಂಡಕ್ಕೆ ಸುಲಭ ಜಯ ದೊರಕಬಹುದು. ಜಸ್‌ಪ್ರಿತ್ ಬುಮ್ರಾ ಅವರ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಬದಲಿಗೆ ಅವಕಾಶ ಟೀಮ್ ಇಂಡಿಯಾ ಬಳಗ ಸೇರಿಕೊಂಡಿರುವ ಮೊಹಮ್ಮದ್ ಸಿರಾಜ್ ಆಡುವ ಬಳಗ ಸೇರಿಕೊಳ್ಳಬಹುದೇ ಎಂದು ಕಾದು ನೋಡಬೇಕಾಗಿದೆ. ಮೊದಲ ಪಂದ್ಯದಲ್ಲಿ ಅನುಭವಿ ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿತ್ತು. ವಿಶ್ವ ಕಪ್‌ಗೆ ರಣತಂತ್ರ ರೂಪಿಸುವ ಉದ್ದೇಶದಿಂದ ಅವರಿಗೆ ಈ ಸರಣಿಯಲ್ಲಿ ಅವಕಾಶಗಳು ದೊರೆಯಬಹುದು.
ಭಾರತದ ಬ್ಯಾಟಿಂಗ್ ವಿಭಾಗ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಕೆ. ಎಲ್ ಹಾಗೂ ಸೂರ್ಯಕುಮಾರ್ ಯಾದವ್ ಕಠಿಣ ಪಿಚ್‌ನಲ್ಲಿ ಅರ್ಧ ಶತಕಗಳನ್ನು ಬಾರಿಸುವ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ನ ವಿಶ್ವಾಸ ಗಳಿಸಿಕೊಂಡಿದೆ. ಹಿರಿ ತಲೆಗಳಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಬೇಕಾಗಿದೆ.
ದ. ಆಫ್ರಿಕಾಗೆ ಗೆಲುವಿನ ಅನಿವಾರ್ಯತೆ
ಪ್ರವಾಸಿ ತೆಂಬ ಬವುಮಾ ಬಳಗಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯ. ಸೋತರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕಳೆದಕೊಳ್ಳಲಿದೆ. ಭಾರತದ ಬೌಲರ್‌ಗಳನ್ನು ಹಾಗೂ ಇಲ್ಲಿನ ಪಿಚ್ ಪರಿಸ್ಥಿತಿಯನ್ನು ನಿಭಾಯಿಸಿ ಪಂದ್ಯ ಗೆಲ್ಲಲು ರಣತಂತ್ರ ರೂಪಿಸಲಿದೆ.
ಪಂದ್ಯ ವಿವರ
ಎಲ್ಲಿ ಪಂದ್ಯ ? ಒಡಿಶಾದ ಗುವಾಹಟಿಯ ಬರಸ್ಪಾರ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ
ಸಮಯ : ರಾತ್ರಿ ೭ಕ್ಕೆ ಪಂದ್ಯ ಆರಂಭ. ೬.೩೦ಕ್ಕೆ ಟಾಸ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ, ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಆರ್ ಅಶ್ವಿನ್, ದೀಪಕ್ ಚಾಹರ್, ಅರ್ಶ್‌ದೀಪ್ ಸಿಂಗ್.
ದಕ್ಷಿಣ ಆಫ್ರಿಕಾ : ತೆಂಬ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರಿಲೀ ರೊಸ್ಸೌ, ಏಡೆನ್ ಮರ್ಕ್ರಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ವೇಯ್ನ್ ಪಾರ್ನೆಲ್/ ಡ್ವೈನ್ ಪ್ರಿಟೋರಿಯಸ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನೋರ್ಜೆ,ತಬ್ರೈಜ್ ಶಮ್ಸಿ.
ಇದನ್ನೂ ಓದಿ | IND vs SA | ಬೆಳಗಿದ ರಾಹುಲ್- ಸೂರ್ಯ; ಭಾರತಕ್ಕೆ 8 ವಿಕೆಟ್ ಜಯ, ಸರಣಿಯಲ್ಲಿ 1-0 ಅಂತರದ ಮುನ್ನಡೆ