Site icon Vistara News

AIFF BAN | 17ರ ವಯೋಮಿತಿಯ ಮಹಿಳೆಯರ ಫುಟ್ಬಾಲ್‌ ವಿಶ್ವ ಕಪ್‌ ಭವಿಷ್ಯ ಅನಿಶ್ಚಿತ, ಏನು ಪರಿಹಾರ?

AIFF BAN

ನವ ದೆಹಲಿ : ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟಕ್ಕೆ ನಿಷೇಧ (AIFF BAN) ಹೇರಿರುವ ಫಿಫಾದ ನಿರ್ಧಾರದಿಂದಾಗಿ ೧೭ರ ವಯೋಮಿತಿಯ ಮಹಿಳೆಯರ ವಿಶ್ವ ಕಪ್ ಆಯೋಜಿಸುವ ಭಾರತದ ಹುಮ್ಮಸ್ಸಿಗೆ ಅಡಚಣೆ ಉಂಟಾಗಿದೆ. ನಿಷೇಧದ ಜತೆಗೆ ಜಾಗತಿಕ ಟೂರ್ನಿ ಆಯೋಜನೆಯ ಆತಿಥ್ಯದ ಹಕ್ಕನ್ನೂ ಫಿಫಾ ವಾಪಸ್‌ ಪಡೆದುಕೊಂಡಿದೆ. ಒಂದು ವೇಳೆ ಸೂಕ್ತ ಕಾಲಕ್ಕೆ AIFF ಕಾರ್ಯಕಾರಿ ಸಮಿತಿ ಚುನಾವಣೆ ನಡೆದು ಕಾರ್ಯಕಾರಿ ಸಮಿತಿ ರಚನೆಯಾಗದಿದ್ದರೆ ಈ ಪಂದ್ಯಾವಳಿ ಬೇರೆ ಕಡೆಗೆ ಸ್ಥಳಾಂತರವಾಗುವ ಸಾಧ್ಯತೆಗಳಿವೆ.

ಅಕ್ಟೋಬರ್‌ ೧೧ರಿಂದ ೩೦ರವರೆಗೆ ವಿಶ್ವ ಕಪ್‌ ನಡೆಯಲಿದೆ. ಕೊರೊನಾ ಕಾರಣಕ್ಕೆ ಮುಂದೂಡಿಕೆಯಾಗಿದ್ದ ಈ ಟೂರ್ನಿಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಆದರೆ ಸದ್ಯದ ನಿಷೇಧದಿಂದ ಮುಂದಿನ ಕೆಲಸ ನಡೆಸಲು ಎಐಎಫ್‌ಎಫ್‌ಗೆ ಅಡಚಣೆಯಾಗಿದೆ.

ನಿಷೇಧದ ಪರಿಣಾಮವಾಗಿ ಭಾರತ ಫುಟ್ಬಾಲ್‌ ತಂಡ ಯಾವುದೇ ಫಿಫಾ ಹಾಗೂ ಎಎಫ್‌ಸಿ ಆಯೋಜಿಸುವ ಫುಟ್ಬಾಲ್‌ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಅಂತೆಯೇ ಭಾರತದ ಕ್ಲಬ್‌ಗಳು ಕಾಂಟಿನೆಂಟಲ್‌ ಟೂರ್ನಿಗಳಲ್ಲಿ ಭಾಗವಹಿಸುವ ಅರ್ಹತೆ ಕಳೆದುಕೊಂಡಿದೆ.

ಚುನಾವಣೆ ನಡೆದು ಫುಟ್ಬಾಲ್‌ ಒಕ್ಕೂಟ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಆರಂಭಿಸಿದರೆ ವಿಶ್ವ ಕಪ್‌ ಆಯೋಜನೆಯ ಆತಿಥ್ಯವನ್ನು ಉಳಿಸುವುದಾಗಿ ಫಿಫಾ ಭರವಸೆ ನೀಡಿದೆ. ಆ ಬಗ್ಗೆ ಅಂತಿಮ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದೂ ಹೇಳಿದೆ. ಏತನ್ಮಧ್ಯೆ, ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಅಕ್ಟೋಬರ್‌ ೨೮ರಂದು ನಡೆಯಲಿದೆ. ೧೩ರಿಂದ ಪ್ರಕ್ರಿಯೆಗಳು ಆರಂಭಗೊಂಡಿದ್ದು, ೧೭ರಂದು ಮತ್ತೆ ಈ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ.

ಏಕೆ ಬ್ಯಾನ್‌

ಅಖಿಲ ಭಾರತ ಫುಟ್ಬಾಲ್‌ ಒಕ್ಕೂಟದೊಳಗಿನ ಆಡಳಿತಾತ್ಮಕ ಗೊಂದಲ ೨೦೧೭ರಲ್ಲಿ ಆರಂಭಗೊಂಡಿತ್ತು. ಮಾಜಿ ಅಧ್ಯಕ್ಷ ಮೂರು ಅವಧಿ ಅಧಿಕಾರ ಮಾಡಿದ್ದರೂ, ಸಂವಿಧಾನವೊಂದು ರಚನೆಯಾಗುವ ತನಕ ಅಧಿಕಾರ ಮುಂದುವರಿಸಲು ಬಯಸಿದ್ದರು. ಆದರೆ, ರಾಷ್ಟ್ರೀಯ ಕ್ರೀಡಾ ನೀತಿಯ ಪ್ರಕಾರ ವ್ಯಕ್ತಿಯೊಬ್ಬರು ಯಾವುದೇ ಒಕ್ಕೂಟದಲ್ಲಿ ೧೨ ವರ್ಷ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮೋಹನ್‌ ಬಗಾನ್‌ ಕ್ಲಬ್‌ನ ಮಾಜಿ ಗೋಲ್‌ಕೀಪರ್‌ ಹಾಗೂ ಬಿಜೆಪಿ ನಾಯಕ ಕಲ್ಯಾಣ್‌ ಚೌಬೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಅದರ ಆಧಾರದಲ್ಲಿ ಸುಪ್ರೀಮ್‌ ಕೋರ್ಟ್‌ ೨೦೨೦ರಲ್ಲಿ ಪ್ರಫುಲ್‌ ಪಟೇಲ್‌ ಅವರನ್ನು ಪದಚ್ಯುತಗೊಳಿಸಿತ್ತು.

ಒಕ್ಕೂಟದ ವಿಸರ್ಜಿಸುವ ವೇಳೆ ಸುಪ್ರೀಂ ಕೋರ್ಟ್‌ ಮೂರು ಮಂದಿ ಸದಸ್ಯರನ್ನು ಒಳಗೊಂಡ ಆಡಳಿತಾತ್ಮಕ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿ ಹೊಸ ಸಂವಿಧಾನ ರಚಿಸಿ ಚುನಾವಣೆ ಅಯೋಜಿಸಲಿದೆ. ಅಂತೆಯೆ ಸಂವಿಧಾನ ರಚನೆಯಾಗಿ ಚುನಾವಣೆಗೆ ದಿನಾಂಕವೂ ಪ್ರಕಟಗೊಂಡಿದೆ. ಏತನ್ಮಧ್ಯೆ, ಫಿಫಾ ನಿಷೇಧವನ್ನೇ ಹೇರಿಬಿಟ್ಟಿದೆ. ಮೂರನೇ ವ್ಯಕ್ತಿಗಳು ಒಕ್ಕೂಟದ ಅಧಿಕಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂಬದು ಫಿಫಾದ ಆರೋಪ.

ಕೇಂದ್ರ ಸರಕಾರದ ಮನವಿಗೆ ಮೇರೆಗೆ ಆಗಸ್ಟ್‌ ೧೭ರಂದು ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಮ್‌ ಕೋರ್ಟ್‌ ಒಪ್ಪಿದೆ. ಅಂತೆಯೇ ಆಡಳಿತಾತ್ಮಕ ಸಮಿತಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಿ ಫಿಫಾಗೆ ವರದಿ ನೀಡಬೇಕು. ಕಾನೂನು ಬದ್ಧವಾಗಿದ್ದರೆ ನಿಷೇಧ ವಾಪಸ್‌ ಪಡೆಯಲಿದೆ. ಆ ಬಳಿಕ ವಿಶ್ವ ಕಪ್‌ ನಡೆಸಲು ಅರ್ಹತೆ ಪಡೆಯಲಿದೆ.

ಇದನ್ನೂ ಓದಿ | Football | ಭಾರತೀಯ ಫುಟ್ಬಾಲ್‌ ಒಕ್ಕೂಟವನ್ನು ನಿಷೇಧಿಸಿದ ಫಿಫಾ, ಏನಿದಕ್ಕೆ ಕಾರಣ?

Exit mobile version