Site icon Vistara News

U19 Asia Cup: ಕುಲಕರ್ಣಿ ಆಲ್​ರೌಂಡರ್​ ಪ್ರದರ್ಶನ; ಭಾರತಕ್ಕೆ 7 ವಿಕೆಟ್​ ಜಯಭೇರಿ

ACC Mens U19 Asia Cup

ದುಬೈ: ಅರ್ಶಿನ್ ಕುಲಕರ್ಣಿ(Arshin Kulkarni) ಅವರ ಆಲ್‌ರೌಂಡ್ ಪ್ರದರ್ಶದಿಂದ ಅಂಡರ್‌ 19 ಏಷ್ಯಾಕಪ್‌ನಲ್ಲಿ(U19 Asia Cup) ಭಾರತ ತಂಡ(India U19 vs Afghanistan) ಭರ್ಜರಿ ಗೆಲುವಿನ ಆರಂಭ ಪಡೆದಿದೆ. ಅಫ್ಘಾನಿಸ್ತಾನ ವಿರುದ್ಧ ಶುಕ್ರವಾರ ನಡೆದ ಮೊಲದ ಪಂದ್ಯದಲ್ಲಿ ಟೀಮ್​ ಇಂಡಿಯಾ ಏಳು ವಿಕೆಟ್‌ಗಳ ಜಯ ಸಾಧಿಸಿದೆ.


ದುಬೈನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತಂಡವು, ಅಫ್ಘಾನಿಸ್ತಾನವನ್ನು 173 ರನ್‌ಗಳಿಗೆ ಕಟ್ಟಿ ಹಾಕಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿತು. ಬಳಿಕ ಚೇಸಿಂಗ್​ನಲ್ಲಿಯೂ ಅಮೋಘ ಬ್ಯಾಟಿಂಗ್​ ನಡೆಸಿ ಕೇವಲ 37.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 174 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು. ಭಾರತ ಮುಂದಿನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನದ ಸವಾಲು ಎದುರಿಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ.

ಆಲ್‌ರೌಂಡ್ ಪ್ರದರ್ಶನ ತೋರಿದ ಕುಲಕರ್ಣಿ

ಟೀಮ್​ ಇಂಡಿಯಾದ ಗೆಲುವಿನ ರುವಾರಿ ಅರ್ಶಿನ್ ಕುಲಕರ್ಣಿ ಅವರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ತಮ್ಮ ಉತ್ಕೃಷ್ಟ ಮಟ್ಟದ ಆಟ ಪ್ರದರ್ಶಿಸುವ ಗಮನಸೆಳೆದರು. 8 ಓವರ್​ ಬೌಲಿಂಗ್​ ನಡೆಸಿದ ಅವರು 29 ರನ್​ ವೆಚ್ಚದಲ್ಲಿ 3 ವಿಕೆಟ್​ ಕಿತ್ತರು. ಬಳಿಕ ಬ್ಯಾಟಿಂಗ್​ನಲ್ಲಿಯೂ ಮಿಂಚಿದ ಕುಲಕರ್ಣಿ 4 ಬೌಂಡರಿ ನೆರವಿನಿಂದ ಅಜೇಯ 70 ರನ್​ ಬಾರಿಸಿದರು. ಅವರ ಈ ಆಲ್​ರೌಂಡರ್​ ಪ್ರದರ್ಶನದಿಂದ ಭಾರತ ಗೆಲುವಿನ ಪತಾಕೆ ಹಾರಿಸಿತು. ಮುಶೀರ್ ಖಾನ್ ಕೂಡ ಅಜೇಯ 48 ಬಾರಿಸಿದರು. ಉಳಿದಂತೆ ಬೌಲಿಂಗ್​ನಲ್ಲಿ ರಾಜ್ ಲಿಂಬಾನಿ(3) ನಮನ್ ತಿವಾರಿ(2) ವಿಕೆಟ್​ ಕಿತ್ತರು.

ಇದನ್ನೂ ಓದಿ ಆಯ್ಕೆ ಸಮಿತಿಯ 2 ಅಧಿಕಾರಿಗಳ ಮುಂದೆ ಟಿ20 ಸರಣಿ ಆಡಲಿದೆ ಭಾರತ; ಬಿಸಿಸಿಐ ಪ್ಲ್ಯಾನ್ ಏನು?


ನಾಯಕ ಉದಯ್ ಸಹರನ್ ಕೇವಲ 20 ರನ್​ ಗಳಿಸಿ ನಿರಾಸೆ ಮೂಡಿಸಿದರು. ಆರಂಭಿಕ ಆಟಗಾರ ಆದರ್ಶ್​ ಸಿಂಗ್​ ಕೂಡ 14 ರನ್​ಗೆ ವಿಕೆಟ್​ ಕೈಚಲ್ಲಿದರು. ಅಫಘಾನಿಸ್ತಾನ ತಂಡ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಆರಂಭಕಾರ ಜಮ್ಶಿದ್ ಜದ್ರಾನ್(43) ರನ್​ ಬಾರಿಸಿ ಉತ್ತಮ ಅಡಿಪಾಯ ನಿರ್ಮಿಸಿದ್ದರು. ಆದರೆ ಇವರ ವಿಕೆಟ್​ ಪತನದ ಬಳಿಕ ಯಾರು ಕೂಡ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ಸು ಕಾಣಲಿಲ್ಲ.

ಸಂಕ್ಷಿಪ್ತ ಸ್ಕೋರ್‌

ಅಫಘಾನಿಸ್ತಾನ-50 ಓವರ್‌ಗಳಲ್ಲಿ 173ಕ್ಕೆ ಆಲೌಟ್​; (ಜಮಿದ್‌ ಜದ್ರಾನ್‌ 43, ಮೊಹಮ್ಮದ್‌ ಯೂಸುಫ್ ಜದ್ರಾನ್‌ 26, ನುಮಾನ್‌ ಶಾಹ 25, ಅರ್ಷಿನ್‌ ಕುಲಕರ್ಣಿ 29ಕ್ಕೆ 3, ರಾಜ್‌ ಲಿಂಬಾನಿ 46ಕ್ಕೆ 3, ನಮನ್‌ ತಿವಾರಿ 30ಕ್ಕೆ 2).

ಭಾರತ-37.3 ಓವರ್‌ಗಳಲ್ಲಿ 3 ವಿಕೆಟಿಗೆ 174 (ಅರ್ಷಿನ್‌ ಕುಲಕರ್ಣಿ ಔಟಾಗದೆ 70, ಮುಶೀರ್‌ ಖಾನ್‌ ಔಟಾಗದೆ 48, ಉದಯ್‌ ಸಹಾರಣ್‌ 20).

ಭಾರತ ಅಂಡರ್-19 ತಂಡ

ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರ್ವೆಲ್ಲಿ ಅವನೀಶ್ ರಾವ್ (ವಿಕೆಟ್​ ಕೀಪರ್​), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ.

Exit mobile version