ಬ್ಲೋಮ್‌ಫಾಂಟೀನ್: ಅಂಡರ್-19 ಏಕದಿನ ವಿಶ್ವಕಪ್(U19 World Cup) ಕ್ರಿಕೆಟ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ತಂಡ ಭಾನುವಾರ ನಡೆಯುವ ಫೈನಲ್(U19 World Cup 2024) ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ. ಹಾಲಿ ಚಾಂಪಿಯನ್ ಹಾಗೂ ಸರ್ವಾಧಿಕ 5 ಸಲ ಚಾಂಪಿಯನ್ ಆಗಿರುವ ಭಾರತ ಈ ಟೂರ್ನಿಯಲ್ಲಿ ಗೆದ್ದಿರುವ 5 ಫೈನಲ್ ಪಂದ್ಯದ ಇಣುಕು ನೋಟವೊಂದು ಇಲ್ಲಿದೆ.
ಕೈಫ್ ನಾಯಕತ್ವದಲ್ಲಿ ಮೊದಲ ಕಪ್(2002)
1988ರಲ್ಲಿ ಆರಂಭಗೊಂಡ 19 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಸಲ ಚಾಂಪಿಯನ್ ಪಟ್ಟ ಅಲಂಕರಿಸಿದ್ದು 2002 ರಲ್ಲಿ. ಮೊಹ್ಮಮದ್ ಕೈಫ್ ನಾಯಕತ್ವದಲ್ಲಿ ಆಡಲಿಳಿದ ಭಾರತ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿ ಚೊಚ್ಚಲ ಟ್ರೋಫಿ ಗೆದ್ದು ಬೀಗಿತ್ತು.
ಕೊಹ್ಲಿ ನಾಯಕತ್ವದಲ್ಲಿ ದ್ವಿತೀಯ ಟ್ರೋಫಿ(2008)
ಭಾರತ ತಂಡ ಎರಡನೇ ಬಾರಿ ಅಂಡರ್ 19 ವಿಶ್ವಕಪ್ ಟ್ರೋಫಿ ಗೆದ್ದಿದ್ದು 2008ರಲ್ಲಿ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಈ ಸಾಧನೆ ಮಾಡಿತ್ತು. ಮಳೆ ಪೀಡಿತ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 12 ರನ್‌ಗಳಿಂದ (D/L ವಿಧಾನ) ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 45.4 ಓವರ್ಗಳಲ್ಲಿ 159 ರನ್ಗೆ ಸರ್ವಪತನ ಕಂಡಿತು. ದಕ್ಷಿಣ ಆಫ್ರಿಕಾ ಚೇಸಿಂಗ್ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು 25 ಓವರ್ಗೆ ಸೀಮಿತ ಮಾಡಿ ಗೆಲುವಿಗೆ 116 ರನ್ ನೀಡಲಾಯಿತು. ಆದರೆ ದಕ್ಷಿಣ ಆಫ್ರಿಕಾ 8 ವಿಕೆಟ್ ಕಳೆದುಕೊಂಡು ಕೇವಲ 103 ರನ್ ಗಳಿಸಿ ಶರಣಾಯಿತು.
2012ರಲ್ಲಿ ಮೂರನೇ ವಿಶ್ವಕಪ್
ಆಸ್ಟ್ರೇಲಿಯದಲ್ಲಿ ನಡೆದ 2012ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಮತ್ತೊಮ್ಮೆ ಜಯಭೇರಿ ಬಾರಿಸಿತ್ತು. ಈ ಮೂಲಕ ಮೂರನೇ ಟ್ರೋಫಿಗೆ ಮುತ್ತಿಕ್ಕಿತ್ತು. ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ನಾಯಕ ಉನ್ಮುಕ್ತ್ ಚಂದ್ ಅವರು ಈ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ U19 World Cup Final: ಆಸೀಸ್ ಸದೆಬಡಿದು 6ನೇ ವಿಶ್ವಕಪ್ ಗೆಲ್ಲಲಿ ಭಾರತ; ನಾಳೆ ಫೈನಲ್
2018ರಲ್ಲಿ 4ನೇ ಕಪ್ ಗೆದ್ದ ಭಾರತ
6 ವರ್ಷಗಳ ಬಳಿಕ ಅಂದರೆ 2018ರ ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ ಮತ್ತೆ ಭಾರತ ಮತ್ತು ಆಸ್ಟ್ರೇಲಿಯಾ ಮತ್ತೆ ಫೈನಲ್ ಮುಖಾಮುಖಿಯಾದವು. ಪೃಥ್ವಿ ಶಾ ನೇತೃತ್ವದ ಭಾರತ ತಂಡ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದು ಪ್ರಶಸ್ತಿ ಎತ್ತಿ ಹಿಡಿದಿತ್ತು. ಭಾರತ ಪರ ಮಂಜೋತ್ ಕಾಲ್ರಾ ಫೈನಲ್ ಪಂದ್ಯದಲ್ಲಿ ಅಜೇಯ 101 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
2022ರಲ್ಲಿ 5ನೇ ಪ್ರಶಸ್ತಿ ಗೆದ್ದ ಭಾರತ
ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆದ 2022ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 4 ವಿಕೆಟ್‌ಗಳಿಂದ ಕೆಡವಿ ಅಂಡರ್ 19 ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿಯೇ ಸರ್ವಾಧಿಕ 5 ಸಲ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆ ಬರೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 44.5 ಓವರ್ಗಳಲ್ಲಿ 189ರನ್ಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್ ಕಳೆದುಕೊಂಡು ಈ ಮೊತ್ತವನ್ನು ಪೇರಿಸಿ ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ ರಾಜ್ ಬಾವಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.