Site icon Vistara News

ಹಿರಿಯರಂತೆ ಕಿರಿಯರಿಗೂ ವಿಶ್ವಕಪ್​ ಫೈನಲ್​ನಲ್ಲಿ ಸೋಲುಣಿಸಿದ ಆಸೀಸ್​; ಭಾರತದ 6ನೇ ಕಪ್​ ಪ್ರಯತ್ನ ವಿಫಲ

The ecstasy and the despair: all in one picture

ಬೆನೋನಿ (ದಕ್ಷಿಣ ಆಫ್ರಿಕಾ): 6ನೇ ಪ್ರಶಸ್ತಿ ಗೆಲ್ಲುವ ಇರಾದೆಯೊಂದಿಗೆ ಅಂಡರ್​ 19 ವಿಶ್ವಕಪ್(ICC Under 19 World Cup 2024)​ ಫೈನಲ್​ ಪಂದ್ಯದಲ್ಲಿ ಆಡಲಿಳಿದ 5 ಬಾರಿಯ ಚಾಂಪಿಯನ್​ ಭಾರತ ತಂಡಕ್ಕೆ ಆಸ್ಟ್ರೇಲಿಯಾ(India U19 vs Australia U19 Final) ಸೋಲಿನ ಆಘಾತ ನೀಡಿದೆ. 79 ರನ್​ಗಳಿಂದ ಗೆದ್ದ ಆಸ್ಟ್ರೇಲಿಯಾ 4ನೇ ವಿಶ್ವಕಪ್(U19 World Cup Final)​ ಕಿರೀಟ ತನ್ನದಾಗಿಸಿಕೊಂಡಿದೆ. ಈ ಸೋಲಿನಿಂದ ಹಿರಿಯ ಕ್ರಿಕೆಟಿಗರಿಂದ ಸಾಧ್ಯವಾಗದ್ದು ಕಿರಿಯ ಕ್ರಿಕೆಟಿಗರಿಂದಲಾದರೂ ಸಾಕಾರಗೊಳ್ಳಲಿ ಎಂಬ ದೇಶದ ಕ್ರೀಡಾಪ್ರೇಮಿಗಳ ಹಾರೈಕೆ ಹಾಗೂ ಅಪಾರ ನಿರೀಕ್ಷೆ ಹುಸಿಯಾಯಿತು.

ಭಾರತದ ಸೀನಿಯರ್‌ ತಂಡ ಆಸ್ಟ್ರೇಲಿಯ ವಿರುದ್ಧ ಆಡಿದ ಕಳೆದೆರಡೂ ಐಸಿಸಿ ಕೂಟದ ಫೈನಲ್‌ನಲ್ಲಿ ಮುಗ್ಗರಿಸಿ ಮುಖಭಂಗ ಅನುಭವಿಸಿತ್ತು. ಆದರೆ ಕಿರಿಯರು ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ 2 ಫೈನಲ್( 2012 ಮತ್ತು 2018)​ ಪಂದ್ಯಗಳಲ್ಲಿಯೂ ಗೆದ್ದು ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಇದೇ ವಿಶ್ವಾಸದಲ್ಲಿ ಮೂರನೇ ಬಾರಿಯೂ ಕಿರಿಯರು ಕಪ್​ ಗೆಲ್ಲಬಲ್ಲರು, ಹಿರಿಯರ ಸೋಲಿಗೆ ಸೇಡು ತೀರಿಸಿಯಾರು ಎಂದು ನಿರೀಕ್ಷೆ ಮಾಡಲಾಗಿತ್ತು. ಜತೆಗೆ ಈ ಬಾರಿಯ ಟೂರ್ನಿಯಲ್ಲಿ ಭಾರತ ಅಜೇಯ ತಂಡವಾಗಿ ಫೈನಲ್​ಗೂ ಲಗ್ಗೆಯಿಟ್ಟಿತ್ತು. ಆದರೆ ಫೈನಲ್​ನಲ್ಲಿ ಇದೇ ಆಟ ತೋರ್ಪಡಿಸುವಲ್ಲಿ ವಿಫಲವಾಗಿ ಶರಣಾದರು.

ಇಲ್ಲಿನ ಬೆನೋನಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆಸ್ಟ್ರೇಲಿಯಾ ಹರ್ಜಸ್ ಸಿಂಗ್(55), ನಾಯಕ ಹಗ್ ವೈಬ್ಜೆನ್(48) ಮತ್ತು ಒಲಿವರ್​ ಪೀಕ್(46*) ಬ್ಯಾಟಿಂಗ್​ ಹೋರಾಟದಿಂದ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 253 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ನಾಟಕೀಯ ಕುಸಿತ ಕಂಡು 43.5 ಓವರ್​ಗಳಲ್ಲಿ 174 ರನ್​ಗಳಿಗೆ ಸರ್ವಪತನ ಕಂಡಿತು.

ಚೇಸಿಂಗ್​ ವೇಳೆ ಭಾರತ 3 ರನ್​ ಗಳಿಸುವಷ್ಟರಲ್ಲೇ ಮೊದಲ ವಿಕೆಟ್​ ಕಳೆದುಕೊಂಡಿತು. ನಂಬುಗೆಯ ಬ್ಯಾಟರ್​ ಅರ್ಶಿನ್ ಕುಲಕರ್ಣಿ ಕೇವಲ 3 ರನ್​ಗೆ ವಿಕೆಟ್​ ಕೈಚೆಲ್ಲಿ ನಿರಾಸೆ ಮೂಡಿಸಿದರು. ಬಳಿಕ ಬಂದ ಮುಶೀರ್ ಖಾನ್ 1 ರನ್​ ಗಳಿಸಿದಾಗಲೇ ಹ್ಯಾರಿ ಡಿಕ್ಸನ್ ಅವರಿಂದ ಕ್ಯಾಚ್ ಡ್ರಾಪ್​ ಆಗಿ ಜೀವದಾನ ಪಡೆದರೂ ಇದರ ಲಾಭವೆತ್ತುವಲ್ಲಿ ಅವರು ವಿಫಲರಾದರು. 22 ರನ್​ಗೆ ಆಟ ಮುಗಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 32 ರನ್​ಗೆ 4 ವಿಕೆಟ್​ ಬಿದ್ದಾಗಲೂ ತಂಡಕ್ಕೆ ಆಸರೆಯಾಗಿ ಬೃಹತ್​ ಮೊತ್ತದ ಜತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ನಾಯಕ ಉದಯ್ ಸಹಾರನ್(8) ಮತ್ತು ಸಚಿನ್ ದಾಸ್(9) ಈ ಪಂದ್ಯದಲ್ಲಿ ಕೈಕೊಟ್ಟರು. ಉಭಯ ಆಟಗಾರರು ಕೂಡ ಸಿಂಗಲ್​ ಡಿಜಿಟ್​ಗೆ ಔಟಾದರು. ಇದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಈ ಎರಡು ವಿಕೆಟ್​ ಬೀಳುತ್ತಿದ್ದಂತೆ ಭಾರತ ಅರ್ಧ ಪಂದ್ಯವನ್ನು ಸೋತಾಗಿತ್ತು. ಅಂತಿಮ ಹಂತದಲ್ಲಿ ಮುರುಗನ್​ ಅಶ್ವಿನ್​ ಅವರು ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಪಟ್ಟರೂ ಇವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಆದರೆ ಸೋಲಿನ ಅಂತರವನ್ನು ತಗ್ಗಿಸಿದರು. 46 ಎಸೆತಗಳಿಂದ 42 ರನ್​ ಬಾರಿಸಿದರು.

ಇದನ್ನೂ ಓದಿ Glenn Maxwell: ಬಿರುಸಿನ ಶತಕ ಬಾರಿಸಿ ರೋಹಿತ್​ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್

ಹರ್ಜಸ್ ಸಿಂಗ್ ಅರ್ಧಶತಕ


ಮೊದಲು ಬ್ಯಾಟಿಂಗ್​ ನಡೆಸಿದ​ ಆಸ್ಟ್ರೇಲಿಯಾ ಕೂಡ ಆರಂಭಿಕ ಆಘಾತ ಎದುರಿಸಿತು. ರಾಜ್ ಲಿಂಬಾನಿ ಅವರು ಸ್ಯಾಮ್ ಕಾನ್ಸ್ಟಾಸ್ ಅವರನ್ನು ಶೂನ್ಯಕ್ಕೆ ಔಟ್​ ಮಾಡಿದರು. ಆದರೆ, ಆ ಬಳಿಕ ಆಡಲಿಳಿದ ನಾಯಕ ಹಗ್ ವೈಬ್ಜೆನ್ ಆರಂಭಿಕ ಆಟಗಾರ ಹ್ಯಾರಿ ಡಿಕ್ಸನ್ ಜತೆಗೂಡಿ ತಾಳ್ಮೆಯುತ ಬ್ಯಾಟಿಂಗ್​ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 78 ರನ್​ ಒಟ್ಟುಗೂಡಿಸಿತು. ಹಗ್ ವೈಬ್ಜೆನ್ 48 ರನ್​ಗೆ ಔಟಾದರೆ, ಹ್ಯಾರಿ ಡಿಕ್ಸನ್ 42 ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ಉಭಯ ಆಟಗಾರರು ಕೂಡ ಅರ್ಧಶತಕದಿಂದ ವಂಚಿತರಾದರು. ಭಾರತದ ಬೌಲಿಂಗ್​ ದಾಳಿಯನ್ನು ದಿಟ್ಟವಾಗಿ ಎದುರಿಸಿ ನಿಂತದ್ದು ಹರ್ಜಸ್ ಸಿಂಗ್. ಆಕರ್ಷಕ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಅರ್ಧಶತಕ ದಾಖಲಿಸಿದರು.

64 ಎಸೆತ ಎದುರಿಸಿದ ಹರ್ಜಸ್ ಸಿಂಗ್ ತಲಾ ಮೂರು ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ 55 ರನ್​ ಗಳಿಸಿದರು. ಈ ವಿಕೆಟ್​ ಪತನದ ಬಳಿಕ 7ನೇ ಕ್ರಮಾಂಕದಲ್ಲಿ ಆಡಲಿಳಿದ ಒಲಿವರ್​ ಪೀಕ್ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಜೇಯ 46 ರನ್​ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ವಿಕೆಟ್​ ಕೀಪರ್​ ರಯಾನ್ ಹಿಕ್ಸ್ 26 ರನ್​ ಗಳಿಸಿದರು. ಭಾರತ ಪರ ಉತ್ತಮ ಬೌಲಿಂಗ್​ ದಾಳಿ ನಡೆಸಿದ ರಾಜ್ ಲಿಂಬಾನಿ 10 ಓವರ್​ ಬೌಲಿಂಗ್​ ನಡೆಸಿ 38 ರನ್ ವೆಚ್ಚದಲ್ಲಿ ಮೂರು ವಿಕೆಟ್​ ಉರುಳಿಸಿದರು.

Exit mobile version