Site icon Vistara News

Uber Cup 2024 Quarterfinal: ಭಾರತದ ಸವಾಲು ಅಂತ್ಯ; ಜಪಾನ್​ ವಿರುದ್ಧ ಕ್ವಾ. ಫೈನಲ್​ನಲ್ಲಿ ಸೋಲು

Uber Cup 2024 Quarterfinal

ಚೆಂಗ್ಡು (ಚೀನಾ): ಉಬೆರ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಕ್ವಾರ್ಟರ್​ ಫೈನಲ್(Uber Cup 2024 Quarterfinal)​ ಪಂದ್ಯದಲ್ಲಿ ಭಾರತದ(India) ಮಹಿಳಾ ತಂಡ ಜಪಾನ್(Japan)​ ವಿರುದ್ಧ 3-0 ಅಂತರದ ಸೋಲು ಕಾಣುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದೆ. ಗುರುವಾರ ನಡೆದ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಜಪಾನ್​ ಸೆಮಿಫೈನಲ್​ಗೆ ಪ್ರವೇಶಿಸಿದೆ. ಶುಕ್ರವಾರ ನಡೆಯಲಿರುವ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ ತಂಡ 6 ಬಾರಿಯ ಚಾಂಪಿಯನ್​ ​ಚೀನಾದ ಸವಾಲು ಎದುರಿಸಲಿದೆ.

ಮೊದಲ ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ 10-21, 22-20, 15-21 ರಲ್ಲಿ ಅಯಾ ಒಹೊರಿ ವಿರುದ್ಧ ಸೋತರು. ಮೊದಲ ಗೇಮ್‌ನಲ್ಲಿ ಲಯ ಕಂಡುಕೊಳ್ಳಲು ಹರಸಾಹಸಪಟ್ಟ ಚಲಿಹಾ ಎರಡನೇ ಗೇಮ್​ನಲ್ಲಿ ತಿರುಗಿ ಬಿದ್ದು 22-20 ಅಂತರದಿಂದ ಕೈವಶ ಮಾಡಿಕೊಳ್ಳುವ ಮೂಲಕ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಗೇಮ್​ನಲ್ಲಿ ಸೋಲು ಕಂಡರು.

ಮೊದಲ ಮಹಿಳಾ ಡಬಲ್ಸ್​ನಲ್ಲಿ ಕೆ.ಪ್ರಿಯಾ-ಶ್ರುತಿ ಮಿಶ್ರಾ ಜೋಡಿಯನ್ನು ನಮಿ ಮತ್ಸುಯಾಮಾ-ಚಿಹರು ಶಿದಾ ಸೇರಿಕೊಂಡು 8-21, 9-21 ನೇರ ಗೇಮ್​ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಮಹಿಳಾ ಸಿಂಗಲ್ಸ್​ನಲ್ಲಿ ಇಶಾರಾಣಿ ಶಾರಾಣಿ ಬರುಹಾ ಅವರನ್ನು 15-21, 12-21 ನೇರ ಗೇಮ್​ಗಳ ಅಂತದಿಂದ 2017ರ ವಿಶ್ವ ಚಾಂಪಿಯನ್‌ ಜಪಾನಿನ ನೊಜೊಮಿ ಒಕುಹಾರ ಮಣಿಸಿದರು. ಈ ಸೋಲಿನೊಂದಿಗೆ ಭಾರತ ತಂಡದ ಸವಾಲು ಕೂಡ ಅತ್ಯಂಗೊಂಡಿತು. ಭಾರತ 1957, 2014 ಮತ್ತು 2016ರಲ್ಲಿ ಮೂರು ಬಾರಿ ಉಬರ್ ಕಪ್‌ನಲ್ಲಿ ಸೆಮಿಫೈನಲ್ ತಲುಪಿತ್ತು. ಈ ಬಾರಿ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸುವ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್​ ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ Thomas Cup 2024: ಅಂತಿಮ ಲೀಗ್​ ಪಂದ್ಯದಲ್ಲಿ ಇಂಡೊನೇಷ್ಯಾಕ್ಕೆ ಮಣಿದ ಭಾರತ

ಥಾಮಸ್‌ ಕಪ್‌: ಇಂದು ಭಾರತ-ಚೀನಾ ಸೆಣಸಾಟ


ಇಂದು ನಡೆಯುವ ಪುರುಷರ ಥಾಮಸ್‌ ಕಪ್‌(Thomas Cup 2024) ಟೂರ್ನಿಯ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ(Indian men’s Badminton team) ತಂಡ ಬದ್ಧ ಎದುರಾಳಿ ಚೀನಾ ತಂಡದ ಸವಾಲು ಎದುರಿಸಲಿದೆ. ಬುಧವಾರ ನಡೆದಿದ್ದ ಅಂತಿಮ ಲೀಗ್​ ಪಂದ್ಯದಲ್ಲಿ ಭಾರತ 14 ಬಾರಿಯ ಚಾಂಪಿಯನ್ ಇಂಡೊನೇಷ್ಯಾ ವಿರುದ್ಧ 1-4 ಅಂತರದಿಂದ ಸೋಲನುಭವಿಸಿತ್ತು. ಸೋಮವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 5-0 ಅಂತರದಿಂದ, ಮೊದಲ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 4-1 ಅಂತರದ ಭರ್ಜರಿ ಗೆಲುವು ಸಾಧಿಸಿತ್ತು.

Exit mobile version