Site icon Vistara News

ಅಂಡರ್​-19 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಉದಯ್ ಸಹರಾನ್​ ಸಾರಥ್ಯ

Uday Saharan

ಮುಂಬಯಿ: 2024ರ ಪುರುಷರ ಅಂಡರ್ 19 ವಿಶ್ವಕಪ್ (U-19 World Cup) ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡ ಮರು ದಿನವೇ ಈ ಟೂರ್ನಿಗಾಗಿ ಹಾಲಿ ಚಾಂಪಿಯನ್​ ಭಾರತ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಪ್ರಸಕ್ತ ಸಾಗುತ್ತಿರುವ ಅಂಡರ್​-19 ಏಷ್ಯಾಕಪ್​ ಟೂರ್ನಿಯಲ್ಲಿ ಆಡುತ್ತಿರುವ ಆಟಗಾರೇ ಈ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಉದಯ್ ಸಹರಾನ್​(Uday Saharan)​ ಅವರೇ ವಿಶ್ವಕಪ್​ಗೂ ನಾಯಕನಾಗಿದ್ದಾರೆ.

ವಿಶ್ವಕಪ್​ಗೆ ಮಾತ್ರವಲ್ಲದೆ ಇದಕ್ಕೂ ಮುನ್ನ ನಡೆಯುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ತ್ರಿಕೋನ ಸರಣಿಗೂ ತಂಡ ಪ್ರಕಟಿಸಲಾಗಿದೆ. ಮೂರು ತಂಡಗಳ ತ್ರಿಕೋನ ಸರಣಿ ಡಿಸೆಂಬರ್ 29 ರಿಂದ ಆರಂಭವಾಗಿ ಜನವರಿ 10ರ ತನಕ ನಡೆಯಲಿದೆ. ಜನವರಿ 19 ರಿಂದ ಫ್ರೆಬ್ರವರಿ 11 ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ಜನವರಿ 20ಕ್ಕೆ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಣಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಐದು ಪ್ರಶಸ್ತಿಗಳನ್ನು ಗೆದ್ದಿರುವ ಭಾರತ, ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಪಾಕಿಸ್ತಾನ ಎರಡು ಬಾರಿ ಗೆದ್ದರೆ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ ಒಂದು ಬಾರಿ ಕಿರೀಟವನ್ನು ಎತ್ತಿ ಹಿಡಿದಿವೆ.

ಭಾರತ ತಂಡ

ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಮಯೂರ್ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಉದಯ್ ಸಹರಾನ್ (ನಾಯಕ), ಅರವಲ್ಲಿ ಅವನೀಶ್ ರಾವ್ (ವಿಕೆಟ್ ಕೀಪರ್), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಮುರುಗನ್ ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್), ಧನುಷ್ ಗೌಡ, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ ಮತ್ತು ನಮನ್ ತಿವಾರಿ.

ಇದನ್ನೂ ಓದಿ Rishabh Pant: ಕೊನೆಗೂ ಪಂತ್ ಕಮ್​ಬ್ಯಾಕ್​ಗೆ ವೇದಿಕೆ ಸಿದ್ಧ; ನಾಯಕನಾಗಿ ಕಣಕ್ಕೆ

ಬ್ಯಾಕ್ ಅಪ್ ಆಟಗಾರರು

ದಿಗ್ವಿಜಯ್ ಪಾಟೀಲ್ (ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ), ಜಯಂತ್ ಗೋಯತ್ (ಹರಿಯಾಣ ಕ್ರಿಕೆಟ್ ಸಂಸ್ಥೆ), ಪಿ ವಿಘ್ನೇಶ್ (ತಮಿಳುನಾಡು ಕ್ರಿಕೆಟ್ ಸಂಸ್ಥೆ), ಕಿರಣ್ ಚೋರ್ಮಲೆ (ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ).

ಭಾರತ ತಂಡದ ಲೀಗ್​ ಹಂತದ ವೇಳಾಪಟ್ಟಿ

ಜನವರಿ 20- ಭಾರತ vs ಬಾಂಗ್ಲಾದೇಶ

ಜನವರಿ 22- ಭಾರತ vs ಐರ್ಲೆಂಡ್

ಜನವರಿ 28- ಭಾರತ vs ಯುಎಸ್​ಎ

ಹೊಸ ರೂಪದಲ್ಲಿ ಟೂರ್ನಿ

2022 ರ ಆವೃತ್ತಿಯ ಅಗ್ರ 11 ಪೂರ್ಣ ಸದಸ್ಯ ತಂಡಗಳು ನೇರವಾಗಿ ಅರ್ಹತೆ ಪಡೆದಿವೆ ಮತ್ತು ಐದು ತಂಡಗಳು – ನಮೀಬಿಯಾ, ನೇಪಾಳ, ನ್ಯೂಜಿಲೆಂಡ್, ಸ್ಕಾಟ್ಲೆಂಡ್ ಮತ್ತು ಯುಎಸ್ಎ – ಪ್ರಾದೇಶಿಕ ಅರ್ಹತಾ ಸ್ಪರ್ಧೆಗಳ ಮೂಲಕ ತಮ್ಮ ಸ್ಥಾನಗಳನ್ನು ಗಳಿಸಿವೆ. 2024 ರ ಆವೃತ್ತಿಯನ್ನು ಹೊಸ ಸ್ವರೂಪದಲ್ಲಿ ಆಡಲಾಗುವುದು – ಈವೆಂಟ್​​ನ ಎರಡನೇ ಹಂತದಲ್ಲಿ ‘ಸೂಪರ್ ಸಿಕ್ಸರ್ಸ್’ ಮಾದರಿಯಲ್ಲಿ ನಡೆಯಲಿದೆ.

16 ತಂಡಗಳು

ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಭಾರತ, ಬಾಂಗ್ಲಾದೇಶ, ಯುಎಸ್​ಎ, ವೆಸ್ಟ್ ಇಂಡೀಸ್, ನಮೀಬಿಯಾ, ಇಂಗ್ಲೆಂಡ್, ಅಫಘಾನಿಸ್ತಾನ, ನೇಪಾಳ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್​, ಜಿಂಬಾಬ್ವೆ, ಐರ್ಲೆಂಡ್, ಸ್ಕಾಟ್ಲೆಂಡ್​ ಮತ್ತು ಆಸ್ಟ್ರೇಲಿಯಾ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.

Exit mobile version