Site icon Vistara News

Under 19 World Cup: ಸೂಪರ್​ ಸಿಕ್ಸ್​ ಪ್ರವೇಶಿಸಿದ ಭಾರತ; ಅಮೆರಿಕ ವಿರುದ್ಧ 201 ರನ್​ ಗೆಲುವು

Raj Limbani struck in his first over

ಬ್ಲೋಮ್‌ಫಾಂಟೇನ್‌: ಆರಂಭಿಕ ಆಟಗಾರ ಅರ್ಶಿನ್ ಕುಲಕರ್ಣಿ(108)​ ಬಾರಿಸಿದ ಆಕರ್ಷಕ ಶತಕದಿಂದಾಗಿ ಭಾರತ ತಂಡವು(India U19 vs United States U19) ಐಸಿಸಿ ಅಂಡರ್‌-19 ವಿಶ್ವಕಪ್‌(Under 19 World Cup) ಕ್ರಿಕೆಟ್‌ ಕೂಟದ ತನ್ನ ಮೂರನೇ ಪಂದ್ಯದಲ್ಲಿ ಅಮೆರಿಕ ತಂಡವನ್ನು 201 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿ ಸೂಪರ್‌ ಸಿಕ್ಸ್‌ ಹಂತಕ್ಕೇರಿದೆ. ಜ.30ರಂದು ನಡೆಯುವ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್​ ಸವಾಲು ಎದುರಿಸಲಿದೆ.

ಭಾನುವಾರ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಭಾರತ, ​ಅರ್ಶಿನ್ ಕುಲಕರ್ಣಿ(Arshin Kulkarni) ಹಾಗೂ ಮುಶೀರ್‌ ಖಾನ್​ ಅವರ ಸೊಗಸಾದ ಬ್ಯಾಟಿಂಗ್​ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ ಕೇವಲ 5 ವಿಕೆಟ್​ ನಷ್ಟಕ್ಕೆ
326 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ಅಮೆರಿಕ 8 ವಿಕೆಟ್​ ಕಳೆದುಕೊಂಡು ಕೇವಲ 125 ರನ್​ ಗಳಿಸಲಷ್ಟೇ ಶಕ್ತವಾಯಿತು. ಭಾರತ 201 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಅಚ್ಚರಿ ಎಂದರೆ ಕಳೆದ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿಯೂ ಭಾರತ 201 ರನ್​ಗಳ ಗೆಲುವು ಸಾಧಿಸಿತ್ತು.

ಭಾರತದ ಇನಿಂಗ್ಸ್​ ಆರಂಭಿಸಿದ ಅರ್ಶಿನ್ ಕುಲಕರ್ಣಿ ತಾಳ್ಮೆಯು ಬ್ಯಾಟಿಂಗ್​ ನಡೆಸಿ ಶತಕ ಬಾರಿಸಿದರು. ಇವರ ಈ ಶತಕದ ಇನಿಂಗ್ಸ್​ನಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್​ ದಾಖಲಾಯಿತು. ಕಳೆದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದ್ದ ​ಮುಶೀರ್‌ ಖಾನ್​ ಈ ಪಂದ್ಯದಲ್ಲಿಯೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ತೋರಿದರು.

ಮೂರನೇ ವಿಕೆಟ್​ಗೆ ಆಡಲಿಳಿದ ಮುಶೀರ್‌ ಖಾನ್​ 6 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ 73 ರನ್​ ಗಳಿಸಿ ಅರ್ಧಶತಕ ಬಾರಿಸಿದರು. ನಾಯಕ ಉದಯ್‌ ಸಹರನ್‌(35), ಪ್ರಿಯಾಂಶು ಮೊಲಿಯಾ ಅಜೇಯ 27 ರನ್​ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ನೆರವು ನೀಡಿದರು.

ಇದನ್ನೂ ಓದಿ IND vs ENG: ಟೀಮ್​ ಇಂಡಿಯಾವನ್ನು ಮಣಿಸಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್​

ಭಾರತ ಪರ ಬೌಲಿಂಗ್​ನಲ್ಲಿ ಸಂಘಟಿತ ದಾಳಿ ನಡೆಸಿದ ನಮನ್ ತಿವಾರಿ 9 ಓವರ್​ ಎಸೆದು 3 ಮೇಡನ್​ ಸಹಿತ 20 ರನ್​ಗೆ 4 ವಿಕೆಟ್​ ಕಿತ್ತು ಮಿಂಚಿದರು. ಉಳಿದಂತೆ ಮುರುಗನ್​ ಅಶ್ವಿನ್​, ಪ್ರಿಯಾಂಶು ಮೊಲಿಯಾ, ಸೌಮಿ ಪಾಂಡೆ ಮತ್ತು ರಾಜ್ ಲಿಂಬಾನಿ ತಲಾ ಒಂದು ವಿಕೆಟ್​ ಪಡೆದರು.

ಚೇಸಿಂಗ್​ ನಡೆಸಿದ ಅಮೆರಿಕ ಪರ ಉತ್ಕರ್ಷ್ ಶ್ರೀವಾಸ್ತವ (40) ಮತ್ತು ಅಮೋಗ್​ ಅರೆಪಲ್ಲಿ(27) ಮಾತ್ರ ನಿರೀಕ್ಷಿತ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಉಳಿದ ಎಲ್ಲ ಬ್ಯಾಟರ್​ಗಳು ಅಗ್ಗಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

Exit mobile version