ಮುಂಬಯಿ: ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (WPL 2023) ಫೈನಲ್ಗೆ ಪ್ರವೇಶ ಪಡೆದಿದೆ. ಮಂಗಳವಾರದ ಡಬಲ್ ಹೆಡರ್ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 5 ವಿಕೆಟ್ ಸುಲಭ ಜಯ ದಾಖಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದೆ. ಮಾರ್ಚ್ 24ರಂದು ನಡೆಯಲಿರುವ ಯುಪಿ ವಾರಿಯರ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವಿಜೇತರು ಫೈನಲ್ಗೆ ಪ್ರವೇಶ ಪಡೆಯಲಿದ್ದಾರೆ.
ಇಲ್ಲಿನ ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿದ್ದ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ಬಳಗ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಇನ್ನೂ 13 ಎಸೆತಗಳ ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು 5 ವಿಕೆಟ್ ನಷ್ಟಕ್ಕೆ 142 ರನ್ ಬಾರಿಸಿತು.
ಇದನ್ನೂ ಓದಿ : WPL 2023: ಸೋಲಿನೊಂದಿಗೆ ಅಭಿಯಾನ ಮುಗಿಸಿದ ಆರ್ಸಿಬಿ
ಸಾಧಾರಣ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಡೆಲ್ಲಿ ತಂಡ ವೇಗದ ಅರಂಭ ಪಡೆದುಕೊಂಡಿತು. ಮೆಗ್ಲ್ಯಾನಿಂಗ್ (39) ಹಾಗೂ ಶಫಾಲಿ ವರ್ಮಾ(21) ಮೊದಲ ವಿಕೆಟ್ಗೆ 56 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರೋಡ್ರಿಗಸ್ 3 ರನ್ ವಿಕೆಟ್ ಒಪ್ಪಿಸುವ ಮೂಲಕ ಮತ್ತೆ ಹಿನ್ನಡೆ ಅನುಭವಿಸಿತು ಡೆಲ್ಲಿ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಮರಿಜನ್ ಕಪ್ ಅಜೇಯ 34 ಬಾರಿಸಿದರೆ ಅಲೀಸ್ ಕಾಪ್ಸೆ 34 ರನ್ ಬಾರಿಸಿದರು. ಕಾಪ್ಸಿ ಕೊನೇ ಹಂತದಲ್ಲಿ ಔಟಾದರೂ ಮರಿಜನ್ ಗುರಿ ಮುಟ್ಟಿಸಿದರು.
ಯುಪಿ ನಿಧಾನಗತಿಯ ಆಟ
ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ಬಳಗ ನಿಧಾನಗತಿಯಲ್ಲಿ ಆಟವಾಡಿತು. ಅಲಿಸಾ ಹೀಲಿ 36 ರನ್ ಬಾರಿಸಿದರೂ ವೇಗವಿರಲಿಲ್ಲ. ಸಿಮ್ರಾನ್ ಶೇಖ್ 11 ರನ್ಗಳಿಗೆ ಔಟಾದರೆ, ಶ್ವೇತಾ ಸೆಹ್ರಾವತ್ 19 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ತಾಹಿಲಾ ಮೆಗ್ರಾಥ್ ಅಜೇಯ 58 ರನ್ ಬಾರಿಸಿ ತಂಡದ ಮೊತ್ತವನ್ನು 100 ರ ಗಡಿ ದಾಟಿಸಿದರು. ಅದರೆ, ಅವರಿಗೆ ಉಳಿದವರ ಬೆಂಬಲ ದೊರೆಯಲಿಲ್ಲ.
ಆರ್ಸಿಬಿಗೆ ನಾಲ್ಕನೇ ಸ್ಥಾನ
ದಿನದ ಮೊದಲ ಪಂದ್ಯದಲ್ಲಿ ಆರ್ಸಿಬಿ ತಂಡ ಮುಂಬಯಿ ವಿರುದ್ಧ 4 ವಿಕೆಟ್ಗಳ ಸೋಲಿಗೆ ಒಳಗಾಯಿತು. ಈ ಸೋಲಿನೊಂದಿಗೆ ಆರ್ಸಿಬಿ ತಂಡ ಉದ್ಘಾಟನಾ ಆವೃತ್ತಿಯ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಗುಜರಾತ್ ಜಯಂಟ್ಸ್ ತಂಡ ಐದನೇ ತಂಡವಾಗಿ ಅಭಿಯಾನ ಮುಗಿಸಿತು. ಸಂಪೂರ್ಣ ವೈಫಲ್ಯ ಎದುರಿಸಿದ ಸ್ಮೃತಿ ಮಂಧಾನಾ ನೇತೃತ್ವದ ಆರ್ಸಿಬಿ ಒಟ್ಟು ಎಂಟು ಪಂದ್ಯಗಳಲ್ಲಿ ಆರರಲ್ಲಿ ಸೋಲು ಕಂಡು ಎರಡಲ್ಲಿ ಮಾತ್ರ ವಿಜಯ ಸಾಧಿಸಿತು. ನಾಯಕಿ ಸ್ಮೃತಿ ಮಂಧಾನಾ ಕೂಡ ಒಂದೇ ಒಂದು ಅರ್ಧ ಶತಕ ಬಾರಿಸದೇ ನಿರಾಸೆ ಎದುರಿಸಿದರು.