ಮುಂಬಯಿ: ಗ್ರೇಸ್ ಹ್ಯಾರಿಸ್ (72) ಅವರ ವಿಸ್ಫೋಟಕ ಅರ್ಧ ಶತಕ ಹಾಗೂ ತಾಹಿಲಾ ಮೆಕ್ಗ್ರಾಥ್ ಅವರ 57 ರನ್ಗಳ ನೆರವಿನಿಂದ ಮಿಂಚಿದ ಯುಪಿ ವಾರಿಯರ್ಸ್ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) 17ನೇ ಪಂದ್ಯದಲ್ಲಿ ಗುಜರಾತ್ ಜಯಂಟ್ಸ್ ವಿರುದ್ಧ 3 ವಿಕೆಟ್ ವಿಜಯ ಸಾಧಿಸಿತು. ಇದರೊಂದಿಗೆ ಯುಪಿ ವಾರಿಯರ್ಸ್ ತಂಡ ಸತತ ಎರಡನೇ ಜಯಕ್ಕೆ ಪಾತ್ರವಾಗಿದ್ದು, ಐದು ತಂಡಗಳ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಗುಜರಾತ್ ಜಯಂಟ್ಸ್ ತಂಡ ಎರಡನೇ ಸೋಲಿಗೆ ಒಳಗಾಗಿದ್ದು, ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ.
ಬ್ರಬೊರ್ನ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ಜಯಂಟ್ಸ್ ತಂಡ 6 ವಿಕೆಟ್ಗೆ 178 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ ಬಳಗ 1.5 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿತು.
ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಯುಪಿ ತಂಡ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳುವ ಮೂಲಕ ಹಿನ್ನಡೆಗೆ ಒಳಗಾಯಿತು. ದೇವಿಕಾ ವೈದ್ಯ (7), ಅಲಿಸಾ ಹೀಲಿ (12), ಕಿರಣ್ ನವ್ಗಿರೆ (4) ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ಆತಂಕ್ಕೆ ಸಿಲುಕಿತು. ಈ ವೇಳೆ ಯುಪಿ ತಂಡ 39 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ತಾಹಿಲಾ ಹಾಗೂ ಗ್ರೇಸ್ ಹ್ಯಾರಿಸ್ 88 ರನ್ಗಳನ್ನು ಪೇರಿಸಿತು. ಅದರಲ್ಲೂ ಗ್ರೇಸ್ ಹ್ಯಾರಿಸ್ 41 ಎಸೆತಗಳಲ್ಲಿ 7 ಫೋರ್ ಹಾಗೂ 4 ಸಿಕ್ಸರ್ ಸಮೇತ 72 ರನ್ ಬಾರಿಸಿದರು. ಮೆಗ್ರಾಥ್ ಅವರು 38 ಎಸೆತಗಳಲ್ಲಿ 11 ಫೋರ್ ಮೂಲಕ 57 ರನ್ ಗಳಿಸಿದರು.
ತಾಹಿಲಾ ಔಟಾದ ಬಳಿಕ ಆಡಲು ಬಂದ ದೀಪ್ತಿ ಶರ್ಮಾ 6 ರನ್‌ಗೆ ವಿಕೆಟ್ ಒಪ್ಪಿಸಿದರು. ಆದರೆ ಸೋಫಿ ಎಕ್ಲೆಸ್ಟೋನ್ ಅಜೇಯ 19 ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಸಿಮ್ರಾನ್ ಶಿಖಾ 1 ರನ್ ಬಾರಿಸಿದರು.
ಗಾರ್ಡ್ನರ್ ಅರ್ಧ ಶತಕ
ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಗುಜರಾತ್ ಪರಿಸ್ಥಿತಿಯೂ ಉತ್ತಮವಾಗಿರಲಿಲ್ಲ. ಸೋಫಿ ಡಂಕ್ಲಿ 23 ರನ್ ಬಾರಿಸಿ ಔಟಾದರೆ, ಲಾರಾ ವೋಲ್ವರ್ತ್ 17 ರನ್‌ಗೆ ವಿಕೆಟ್ ಒಪ್ಪಿಸಿದರು. ಹರ್ಲಿನ್ ಡಿಯೋಲ್ 4 ರನ್‌ಗೆ ಸೀಮಿತಗೊಂಡರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ ದಯಾಲನ್ ಹೇಮಲತಾ (57) ಹಾಗೂ ಆ್ಯಶ್ಲೀ ಗಾರ್ಡ್ನರ್ (60) ಅರ್ಧ ಶತಕಗಳನ್ನು ಬಾರಿಸುವ ಜತೆಗೆ 97 ರನ್ಗಳ ಜತೆಯಾಟ ನೀಡಿದರು. ಇವರಿಬ್ಬರ ಸಾಧನೆಯಿಂದ ಗುಜರಾತ್ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.