Site icon Vistara News

US OPEN | ಬೆಲಾರಸ್‌ ಆಟಗಾರ್ತಿಯ ಕೈ ಕುಲುಕಲು ನಿರಾಕರಿಸಿದ ಉಕ್ರೇನ್‌ನ ಮಾರ್ತಾ

us open

ನ್ಯೂಯಾರ್ಕ್‌ : ವರ್ಷದ ಕೊನೇ ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಟೂರ್ನಿ ಯುಎಸ್‌ ಓಪನ್‌ನಲ್ಲಿ ಜಾಗತಿಕ ರಾಜಕೀಯ ಪ್ರತಿಫಲನಗೊಳ್ಳುತ್ತಿದ್ದು, ಮಹಿಳೆಯರ ಸಿಂಗಲ್ಸ್‌ನ ಸ್ಪರ್ಧಿಗಳಾದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಹಾಗೂ ಉಕ್ರೇನ್‌ನ ಮಾರ್ತಾ ಕೊಸ್ಟ್ಯುಕ್‌ ಪರಸ್ಪರ ಕೈ ಕುಲುಕಲು ನಿರಾಕರಿಸಿದ ಪ್ರಸಂಗ ನಡೆದಿದೆ.

ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಮಿಲಿಟರಿ ದಾಳಿಗೆ ಬೆಲಾರಸ್‌ ಕೂಡ ಬೆಂಬಲ ನೀಡುತ್ತಿದೆ. ಹೀಗಾಗಿ ಉಕ್ರೇನ್‌ ಆಟಗಾರ್ತಿ ಮಾರ್ತಾ ಅವರು ಕೈ ಕುಲುಕುವುದಕ್ಕೆ ನಿರಾಕರಿಸಿದ್ದಾರೆ. ಪಂದ್ಯದಲ್ಲಿ ಬೆಲಾರಸ್‌ನ ಆಟಗಾರ್ತಿ ವಿರುದ್ಧ ಉಕ್ರೇನ್‌ನ ಆಟಗಾರ್ತಿ ೬-೨, ೬-೩ ನೇರ ಸೆಟ್‌ಗಳಿಂದ ಸೋಲು ಕಂಡಿದ್ದರು. ಬಳಿಕ ಅಜರೆಂಕಾ ಅವರು ಮಾರ್ತಾ ಅವರ ಕೈ ಕುಲುಕುವುದಕ್ಕೆ ಮುಂದಾಗಿದ್ದಾರೆ. ಆದರೆ, ಮಾರ್ತಾ ಅವರನ್ನು ನಿರ್ಲಕ್ಷಿಸಿ ಹೊರ ನಡೆದಿದ್ದಾರೆ.

“ನನಗೆನೂ ಅಚ್ಚರಿ ಉಂಟಾಗಿಲ್ಲ. ಈ ರೀತಿಯ ವರ್ತನೆಯನ್ನು ನಾನು ನಿರೀಕ್ಷೆ ಮಾಡಿದ್ದೆ. ಇದೊಂದು ದೊಡ್ಡ ಸಂಗತಿಯಲ್ಲ. ಕಳೆದ ತಿಂಗಳು ವಾಷಿಂಗ್ಟನ್‌ ಡಿಸಿಯಲ್ಲಿ ಉಕ್ರೇನ್‌ನ ಆಟಗಾರ್ತಿ ಡಯಾನಾ ಯಸ್ಟ್ರೆಮ್‌ಸ್ಕ್‌ ಕೂಡ ಕೈ ಕುಲುಕಿರಲಿಲ್ಲ,” ಎಂದು ಘಟನೆ ಕುರಿತು ಅಜರೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.

“ಪಂದ್ಯದ ಬಳಿಕ ಕೈಕುಲುಕುವುದು ಸಂಪ್ರದಾಯ. ಮಾಡುವುದು ಅಥವಾ ಮಾಡದೇ ಇರುವುದು ಅವರವರಿಗೆ ಬಿಟ್ಟ ವಿಚಾರ,” ಎಂಬುದಾಗಿಯೂ ಅವರು ಹೇಳಿದ್ದಾರೆ.

ತಟಸ್ಥ ಪ್ಲ್ಯಾಗ್‌

ಯುಎಸ್‌ ಓಪನ್‌ನಲ್ಲಿ ಆಡುವ ಬೆಲಾರಸ್‌ ಹಾಗೂ ರಷ್ಯಾದ ಆಟಗಾರ್ತಿಯರು ತಮ್ಮ ದೇಶದ ಧ್ವಜವನ್ನು ಪ್ರತಿನಿಧಿಸುವಂತಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ. ವಿಂಬಲ್ಡ್‌ನಲ್ಲಿ ಈ ಎರಡೂ ದೇಶಗಳ ಆಟಗಾರರಿಗೆ ನಿಷೇಧ ಹೇರಲಾಗಿತ್ತು. ಆದರೆ ಯುಎಸ್‌ ಓಪನ್‌ನಲ್ಲಿ ಅವರಿಗೆ ಆಡಲು ಅವಕಾಶ ಕೊಟ್ಟು ದೇಶವನ್ನು ಪ್ರತಿನಿಧಿಸುವಂತಿಲ್ಲ ಎಂದು ಹೇಳಲಾಗಿದೆ.

Exit mobile version