Site icon Vistara News

US Open 2023: ಯುಎಸ್ ಓಪನ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿದ ಬೋಪಣ್ಣ-ಎಬ್ಡೆನ್‌ ಜೋಡಿ

Rohan Bopanna and Matt Ebden storm

ನ್ಯೂಯಾರ್ಕ್‌: ಭಾರತದ ಹಿರಿಯ ಮತ್ತು ಅನುಭವಿ ಟೆನಿಸ್​ ಆಟಗಾರ ರೋಹನ್ ಬೋಪಣ್ಣ(Rohan Bopanna) ಮತ್ತು ಅವರ ಜತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌(Matthew Ebden) ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್​ ಪ್ರವೇಶಿಸಿದ್ದಾರೆ. 2010ರ ಯುಎಸ್ ಓಪನ್‌ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಫೈನಲ್‌ ಪ್ರವೇಶಿಸಿದ್ದ ಸಾಧನೆ ಮಾಡಿದ್ದರು.

ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಇಂಡೋ-ಆಸೀಸ್​ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದರು. ಈ ಪಂದ್ಯ ಒಂದು ಗಂಟೆ 28 ನಿಮಿಷಗಳ ಕಾಲ ರೋಚಕವಾಗಿ ಸಾಗಿತು.

ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಬೋಪಣ್ಣ-ಎಬ್ಡೆನ್‌ ಜೋಡಿ ಇದೀಗ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್​ ಟೂರ್ನಿಯ(Wimbledon 2023) ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌-ಬ್ರಿಟಿಷ್‌ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್‌ ಸ್ಕಾಪ್‌ಸ್ಕಿ ಅವರೆದುರು ಸೋಲು ಕಂಡಿದ್ದರು. ಮೂಲತಃ ಕೊಡಗಿನವರಾದ 43 ವರ್ಷದ ಬೋಪಣ್ಣ ಭಾರತದ ಟೆನಿಸ್​ಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ.

ಇದನ್ನೂ ಓದಿ Wimbledon 2023: ಸೆಮಿಫೈನಲ್​ನಲ್ಲಿ ಸೋಲು ಕಂಡ ರೋಹನ್‌ ಬೋಪಣ್ಣ ಜೋಡಿ

ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿ ಅಲ್ಕರಾಜ್‌

ಟೆನಿಸ್‌ ಲೋಕದ ಯುವ ಸೂಪರ್‌ ಸ್ಟಾರ್‌ ಕಾರ್ಲೊಸ್‌ ಅಲ್ಕರಾಜ್‌ ಅವರು ಈ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇವರ ಜತೆಗೆ 3ನೇ ಶ್ರೇಯಾಂಕಿತ ಡ್ಯಾನಿಲ್‌ ಮೆಡ್ವೆಡೆವ್‌, 12ನೇ ಶ್ರೇಯಾಂಕಿತ ಅಲೆಕ್ಸಾಂಡರ್‌ ಜ್ವೆರೆವ್‌ ಕೂಡಾ ಅಂತಿಮ 8ರ ಘಟ್ಟ ಪ್ರವೇಶಿಸಿದ್ದಾರೆ. ಕ್ವಾರ್ಟರ್​ ಫೈನಲ್​ನಲ್ಲಿ ಅಲ್ಕರಾಜ್‌ ಅವರು 12ನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೆವ್‌ ಸವಾಲು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್​ನ 4ನೇ ಸುತ್ತಿನ ಪಂದ್ಯದಲ್ಲಿ ಅಲ್ಕರಾಜ್‌ ಇಟಲಿಯ ಶ್ರೇಯಾಂಕ ರಹಿತ ಮತೇವೊ ಅರ್ನಾಲ್ಡಿ ವಿರುದ್ಧ 6-3, 6-3, 6-4 ಸೆಟ್‌ಗಳಲ್ಲಿ ಜಯಗಳಿಸಿದ್ದಾರೆ. ಜ್ವೆರೆವ್‌ ಪ್ರಿ ಕ್ವಾರ್ಟರ್‌ನಲ್ಲಿ ಇಟಲಿಯ ಜಾನಿಕ್‌ ಸಿನ್ನರ್‌ರನ್ನು 6-4, 3-6, 6-2, 4-6, 6-3 ಸೆಟ್‌ಗಳಲ್ಲಿ ಸೋಲಿಸಿದರು. ಇದೇ ವೇಳೆ ರಷ್ಯಾದ ಮೆಡ್ವೆಡೆವ್‌ ಆಸ್ಟ್ರೇಲಿಯಾದ ಅಲೆಕ್ಸ್‌ ಡೆ ಮಿನಾರ್ ವಿರುದ್ಧ 2-6, 6-4, 6-1, 6-2 ಅಂತರದಲ್ಲಿ ಜಯಗಳಿಸಿದ್ದಾರೆ.

ಸಬಲೆಂಕಾ ಮುನ್ನಡೆ

ಮಹಿಳಾ ಸಿಂಗಲ್ಸ್‌ನಲ್ಲಿ ನೂತನ ವಿಶ್ವ ನಂ.1 ಅರೈನಾ ಸಬಲೆಂಕಾ ಅವರು 13ನೇ ಶ್ರೇಯಾಂಕಿತೆ ರಷ್ಯಾದ ಡರಿಯಾ ಕಸತ್ಕಿನಾ ವಿರುದ್ಧ 6-1, 6-3ರಲ್ಲಿ ಗೆದ್ದು ಕ್ವಾರ್ಟರ್‌ಗೇರಿದರು. 3ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಸೋತು ಹೊರಬಿದ್ದರು. ಕಳೆದ ಬಾರಿ ರನ್ನರ್‌-ಅಪ್‌ ಒನ್ಸ್‌ ಜಬುರ್‌ ಕೂಡ ಸೋತು ಹೊರಬಿದ್ದಿದ್ದಾರೆ. ಜಬುರ್‌ ಚೀನಾದ 23ನೇ ಶ್ರೇಯಾಂಕಿತೆ ಕ್ಷಿನ್‌ವೆನ್‌ ಝೆಂಗ್‌ ವಿರುದ್ಧ 2-6, 4-6ರಲ್ಲಿ ಪರಾಭವಗೊಂಡರು.

Exit mobile version