Site icon Vistara News

US Open 2023: ರನ್ನರ್​ ಅಪ್​ ಸ್ಥಾನ ಪಡೆದ ಬೋಪಣ್ಣ-ಎಬ್ಡೆನ್‌ ಜೋಡಿ

US Open 2023

ನ್ಯೂಯಾರ್ಕ್​: ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ಸೋಲು ಕಂಡಿದ್ದಾರೆ. ಈ ಟೂರ್ನಿಯಲ್ಲಿ ದ್ವಿತೀಯ ಬಾರಿ ಫೈನಲ್​ ಪ್ರವೇಶಿಸಿದ್ದ ಬೋಪಣ್ಣ ಎರಡು ಬಾರಿಯೂ ರನ್ನರ್​ಅಪ್​ ಸ್ಥಾನಕ್ಕೆ ತೃಪ್ತಿಪಟ್ಟರು.

ಶುಕ್ರವಾರ ತಡರಾತ್ರಿ ನಡೆದ ಫೈನಲ್​ನಲ್ಲಿ ಇಂಡೋ-ಆಸ್ಟ್ರೇಲಿಯನ್ ಜೋಡಿ ಮೂರನೇ ಶ್ರೇಯಾಂಕದ ಯುಎಸ್‌ಎ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ 6-2, 3-6, 4-6 ಸೆಟ್​ಗಳ ಅಂತರದಲ್ಲಿ ಸೋಲು ಕಂಡರು. ಮೊದಲ ಸೆಟ್​ ಗೆದ್ದಾಗ ಬೋಪಣ್ಣ ಜೋಡಿ ಐತಿಹಾಸಿಹ ಸಾಧನೆ ಮಾಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಆ ಬಳಿಕದ ಎರಡು ಸೆಟ್​ಗಳಲ್ಲಿ ಆಕ್ರಮಣಕಾರಿ ಆಟವಾಡಿದ ಸಾಲಿಸ್‌ಬರಿ ಮತ್ತು ರಾಜೀವ್ ರಾಮ್​ ಸತತ ಎರಡು ಸೆಟ್​ ಗೆದ್ದು ಪಂದ್ಯದಲ್ಲಿ ಮೇಲುಗೈ ಸಾಧಿಸಿದರು.

2010ರ ಯುಎಸ್ ಓಪನ್‌ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಈ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಇಲ್ಲಿ 7–6(7–5), 7–6(7–4) ಅಂತರದಿಂದ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದರು. ಇದೀಗ ಎರಡನೇ ಪ್ರಯತ್ನಲ್ಲಿಯೂ ಅವರು ರನ್ನರ್​ ಅಪ್ ಸ್ಥಾನ ಪಡೆದರು.

ಇದನ್ನೂ ಓದಿ US Open 2023: ಯುಎಸ್‌ ಓಪನ್‌ ಟೂರ್ನಿಯಲ್ಲಿ ಕಾಣಿಸಿಕೊಂಡ ಧೋನಿ

ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ಬೋಪಣ್ಣ ಯುವ ಆಟಗಾರರಿಗೆ ಸೋಲಿನ ರುಚಿ ತೋರಿಸಿದ್ದರು. ಸೆಮಿಫೈನಲ್​ ಪಂದ್ಯದಲ್ಲಿ ಇಂಡೋ-ಆಸೀಸ್​ ಜೋಡಿ ಫ್ರೆಂಚ್ ಜೋಡಿಯಾದ ಪಿಯರೆ-ಹ್ಯೂಗ್ಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ 7-6 (3), 6-2 ನೇರ ಸೆಟ್‌ಗಳ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟಿದ್ದರು. ಕ್ವಾರ್ಟರ್-ಫೈನಲ್ ಹಣಾಹಣಿಯಲ್ಲಿ ಇಂಡೋ-ಆಸೀಸ್​ ಜೋಡಿ ಅಮೆರಿಕಾದ 15ನೇ ಶ್ರೇಯಾಂಕದ ಜೋಡಿಯಾದ ನಥಾನಿಯಲ್ ಲ್ಯಾಮನ್ಸ್ ಮತ್ತು ಜಾಕ್ಸನ್ ವಿಥ್ರೋ ಅವರನ್ನು 7-6(10), 6-1 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಸೆಮಿಫೈನಲ್​ ಪ್ರವೇಶಿಸಿದ್ದರು.

43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾರೆ. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್​ ಟೂರ್ನಿಯ(Wimbledon 2023) ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌-ಬ್ರಿಟಿಷ್‌ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್‌ ಸ್ಕಾಪ್‌ಸ್ಕಿ ಎದುರು ಸೋಲು ಕಂಡಿದ್ದರು. 

Exit mobile version