ನ್ಯೂಯಾರ್ಕ್: ಟಿ20 ವಿಶ್ವಕಪ್ ಟೂರ್ನಿಯ(T20 World Cup 2024) ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ(USA vs CAN) ಗೆಲುವಿನ ಖಾತೆ ತೆರೆದಿದೆ. ಭಾನುವಾರ ನಡೆದ ಬೃಹತ್ ಮೊತ್ತದ ಮೇಲಾಟದಲ್ಲಿ ಕೆನಡಾ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಜತೆಗೆ ‘ಎ’ ಗುಂಪಿನಲ್ಲಿ ಅಂಕದ ಖಾತೆ ತೆರೆದಿದೆ.
ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 194 ರನ್ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್ ಮೊತ್ತವನ್ನು 17.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್ಎ ಗರಿಷ್ಠ ಮೊತ್ತ ಚೇಸ್ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.
ಚೇಸಿಂಗ್ ವೇಳೆ ಅಮೆರಿಕ ಆರಂಭಿಕ ಆಘಾತ ಎದುರಿಸಿತು. ತಂಡ ಖಾತೆ ತೆರೆಯುವ ಮುನ್ನವೇ ಸ್ಟೀವನ್ ಟೇಲರ್(0) ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. 42 ರನ್ ಒಟ್ಟುಗೂಡುವಷ್ಟರಲ್ಲಿ ಮೊನಾಂಕ್ ಪಟೇಲ್(16) ವಿಕೆಟ್ ಕೂಡ ಬಿತ್ತು. ಈ ವೇಳೆ ಜತೆಗೂಡಿದ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಉತ್ತಮ ಹಿಡಿತ ಸಾಧಿಸಿದ್ದ ಕೆನಡಾ ಬೌಲರ್ಗಳು ಗೌಸ್ ಮತ್ತು ಜೋನ್ಸ್ ಬ್ಯಾಟಿಂಗ್ ಆರ್ಭಟದ ಮುಂದೆ ಸಂಪೂರ್ಣ ಲಯ ಕಳೆದುಕೊಂಡರು.
ಉಭಯ ಆಟಗಾರರು ಸೇರಿಕೊಂಡು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಕಿಕ್ಕಿರಿದು ನೆರೆದ ತವರಿನ ವೀಕ್ಷಕರಿಗೆ ಭರಪೂರ ರಂಜನೆ ಲಭಿಸಿತು. ಈ ಜೋಡಿ ಮೂರನೇ ವಿಕೆಟ್ಗೆ ಬರೋಬ್ಬರಿ 131 ರನ್ಗಳ ಅಮೂಲ್ಯ ಜತೆಯಾಟ ನಡೆಸಿತು. ಆಂಡ್ರೀಸ್ ಗೌಸ್ 46 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 65 ರನ್ ಬಾರಿಸಿದರು. ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಆರನ್ ಜೋನ್ಸ್ 40 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ ಅಜೇಯ 94 ರನ್ ಬಾರಿಸಿದರು. ಗೆಲುವಿಗೆ ನಾಲ್ಕು ರನ್ ಬೇಕಿದ್ದಾಗ ಸಿಕ್ಸರ್ ಬಡಿದಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟುರು. ನ್ಯೂಜಿಲ್ಯಾಂಡ್ ತಂಡ ತೊರೆದು ಅಮೆರಿಕ ಪರ ಆಡುತ್ತಿರುವ ಕೋರಿ ಆ್ಯಂಡರ್ಸನ್ ಅಜೇಯ 3 ರನ್ ಬಾರಿಸಿದರು. ಬೌಲಿಂಗ್ನಲ್ಲಿ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಕೆನಡಾ ಪರ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಶ್ರೇಯಸ್ ಮೊವ್ವ(32) ಆರಂಭಿಕ ಆಟಗಾರ ಆರನ್ ಜಾನ್ಸನ್(23) ರನ್ ಬಾರಿಸಿದರು. ಬೃಹತ್ ಮೊತ್ತ ಪೇರಿಸಿದರು ಕೂಡ ಬೌಲರ್ಗಳಿಂದ ಸಂಘಟಿತ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯವನ್ನು ಕಳೆದುಕೊಂಡರು.