ಬೆಂಗಳೂರು: ಭಾರತದ ವಿರುದ್ಧ ಪಾಕಿಸ್ತಾನದ ವಿಶ್ವಕಪ್ ಪಂದ್ಯ ಅದು. 1996ರ ವಿಶ್ವಕಪ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನ ಒಂದು ವಿಕೆಟ್ ಕಳೆದುಕೊಂಡಿದೆ. 204 ಬಾಲ್‌ನಲ್ಲಿ 179 ರನ್ ಗಳಿಸಬೇಕಿದೆ. ಇನ್ನೂ ಒಂಭತ್ತು ವಿಕೆಟ್ ಕೈಯಲ್ಲಿದೆ. 15ನೇ ಓವರ್ ಬೌಲಿಂಗ್ ಮಾಡುತ್ತಿದ್ದವರು ಕರ್ನಾಟಕದ ಆಟಗಾರ ವೆಂಕಟೇಶ್ ಪ್ರಸಾದ್.
ಅದೇಕೊ ಭಾರತದ ಬೌಲರ್‌ಗಳು ತಮ್ಮನ್ನು ಡಾಮಿನೇಟ್ ಮಾಡುತ್ತಿದ್ದಾರೆ ಎಂದು ಅರಿತುಕೊಂಡ ಪಾಕ್ ಬ್ಯಾಟರ್ ಆಮಿರ್ ಸೋಹೇಲ್, ವೆಂಕಟೇಶ್ ಪ್ರಸಾದ್ ಅವರ ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಕ್ರೀಸ್‌ನಿಂದ ಮೂರ್ನಾಲ್ಕು ಹೆಜ್ಜೆ ಮುಂದೆ ಬಂದು ಶಾರ್ಟ್‌ಪಿಚ್ ಬಾಲನ್ನು ಬೀಸಿದ ರೀತಿಗೆ ಎಂಥವರೂ ಬೆಚ್ಚಬೇಕಿತ್ತು. ಆಮೀರ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ವೆಂಕಟೇಶ್ ಪ್ರಸಾದ್ ಕಡೆಗೆ ತಿರುಗಿ ಬ್ಯಾಟನ್ನು ಬೌಂಡರಿ ಕಡೆ ತೋರಿದರು. ಕೈಯಿಂದಲೂ ಬೌಂಡರಿ ಕಡೆಗೆ ಸನ್ನೆ ಮಾಡಿ, ನಿನಗೆ ಇದೇ ಕಾದಿದೆ ಎಂಬಂತೆ ಪ್ರವೋಕ್ ಮಾಡಿದರು.
ಈ ರೀತಿ ಬೌಲರ್‌ಗಳು ಪ್ರವೋಕ್ ಮಾಡುವುದು ಮೈಂಡ್ ಗೇಮ್. ಈ ರೀತಿ ಪ್ರವೋಕ್ ಆಗಿ ಬೌಲರ್‌ಗಳು ಏಕಾಗ್ರತೆ ಕಳೆದುಕೊಳ್ಳಬೇಕು, ಆ ಒತ್ತಡದ ಲಾಭ ಪಡೆದು ರನ್ ಗಳಿಸಬೇಕು ಎಂದು ಬ್ಯಾಟರ್ ಆಮಿರ್ ಸೋಹೇಲ್ ಬಯಸಿದ್ದರು. ಆದರೆ ವೆಂಕಟೇಶ್ ಪ್ರಸಾದ್ ಎಸೆದ ಮುಂದಿನ ಬಾಲ್ ಆಮೀರ್ ಸೋಹೇಲ್ ಬ್ಯಾಟನ್ನು ದಾಟಿ ಸೀದ ಆಫ್ ಸ್ಟಂಪನ್ನು ಕಿತ್ತು ನೆಲಕ್ಕೆ ಉರುಳಿಸಿತು. ತಮಗೆ ಬ್ಯಾಟ್ ಮೂಲಕ ಪ್ರವೋಕ್ ಮಾಡಿದ ಆಮೀರ್ ಸೋಹೇಲರ್‌ರನ್ನು ಮುಂದಿನ ಎಸೆತದಲ್ಲೆ ಪೆವಿಲಿಯನ್‌ಗೆ ಕಳಿಸಿದ್ದರು ವೆಂಕಿ. ಅಷ್ಟಕ್ಕೂ ಈ ಎಸೆತ ಈಗ, 25ವರ್ಷದ ನಂತರ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಅದಕ್ಕೆ ಕಾರಣ, ಕರ್ನಾಟಕದ ಬೆಳಗಾವಿ.
ನೂಪುರ್ ಶರ್ಮಾ ಪ್ರತಿಕೃತಿ
ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಬಿಜೆಪಿ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಹೇಳಿಕೆ ಇದೀಗ ದೇಶಾದ್ಯಂತ ದಂಗೆಗೆ ಕಾರಣವಾಗಿದೆ. ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ನೂಪುರ್ ಶರ್ಮಾರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆಯಾದರೂ ಪ್ರತಿಭಟನೆ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ದೇಶದ ವಿವಿಧೆಡೆ ಹಿಂಸಾರೂಪದ ಪ್ರತಿಭಟನೆಗಳಿಂದಾಗಿ ಅಂತರಿಕ ಭದ್ರತೆಗೇ ಧಕ್ಕೆ ಉಂಟಾಗಿದೆ. ಇಂಥದ್ದೇ ಪ್ರತಿಭಟನೆಯ ಭಾಗವಾಗಿ ಮೂರು ದಿನದ ಹಿಂದೆ ಬೆಳಗಾವಿಯ ಮಸೀದಿಯೊಂದರ ಬಳಿ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನೇಣು ಬಿಗಿಯಲಾಗಿತ್ತು.
ನೇಣು ಹಾಕಿದ್ದು ಪ್ರತಿಕೃತಿಯಾದರೂ, ಅಂಥದ್ದೊಂದು ದೃಶ್ಯ ಭಾರತದಲ್ಲಿ ಭಯಾನಕವಾಗಿ ಕಾಣುತ್ತಿತ್ತು. ಅಪರಾಧಿಗಳನ್ನು ರಸ್ತೆಯಲ್ಲಿ ಕಲ್ಲು ಹೊಡೆದು ಸಾಯಿಸುವ, ನೇತು ಹಾಕುವ ಕಾನೂನನ್ನು ಹೊಂದಿರುವ ದೇಶಗಳಲ್ಲಿ ಇದು ಸಹಜವಾಗಿರಬಹುದು. ಆದರೆ ಪ್ರತಿಕೃತಿಯನ್ನು ನೇಣಿಗೆ ಹಾಕಿದ್ದಕ್ಕೆ ಭಾರತದಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೇ ಕಾರಣಕ್ಕೆ ವೆಂಕಟೇಶ್ ಪ್ರಸಾದ್ ಶುಕ್ರವಾರ ಟ್ವೀಟ್ ಮಾಡಿದ್ದರು. “ಇದು ಕರ್ನಾಟಕದಲ್ಲಿ ನೇತಾಡುತ್ತಿರುವ ನೂಪುರ್ ಶರ್ಮಾ ಪ್ರತಿಕೃತಿ. 21ನೇ ಶತಮಾನದ ಭಾರತದಲ್ಲಿ ಇಂಥದ್ದು ನಡೆಯುತ್ತಿರುವುದನ್ನು ನಂಬಲಾಗುತ್ತಿಲ್ಲ. ರಾಜಕೀಯ ಒತ್ತಟ್ಟಿಗಿರಲಿ, ಸಭ್ಯವಾಗಿ ವರ್ತಿಸುವುದನ್ನು ಎಲ್ಲರೂ ಕಲಿಯಬೇಕು ಎಂದು ನಾನು ಕೋರುತ್ತೇನೆ. ಇದು ಅತಿಯಾಯಿತು” ಎಂದಿದ್ದರು.
ಈ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದರು. ಅನೇಕರು ಹೊಗಳಿದ್ದರೆ, ಇನ್ನೂ ಅನೇಕರು ವೆಂಕಟೇಶ ಪ್ರಸಾದರನ್ನೆ ಟೀಕಿಸಿದರು. ಗೋ ಹಂತಕರು ಎಂದು ಆರೋಪಿಸಿ ಮುಸ್ಲಿಂ ಯುವಕರನ್ನು ನಿಜವಾಗಿ ನೇಣು ಹಾಕಿದಾಗ ನೀವು ಎಲ್ಲಿದ್ದಿರಿ? ಎಂದೆಲ್ಲ ಪ್ರಶ್ನಿಸಲಾಯಿತು. ಈ ರೀತಿ ಬೇರೆ ವಿಚಾರಗಳನ್ನು ಇಲ್ಲಿ ತಂದು ಪ್ರತಿಕ್ರಿಯಿಸುತ್ತಿರುವವರ ವಿರುದ್ಧ ವೆಂಕಟೇಶ್ ಕೋಪಗೊಂಡರು.
ಇದನ್ನೂ ಓದಿ | ಬೆಳಗಾವಿಯಲ್ಲಿ ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದ ಮೂವರ ಬಂಧನ
ಈ ಟ್ವೀಟ್‌ಗೆ whataboutery (ಒಂದು ವಿಷಯಕ್ಕೆ ಕೌಂಟರ್ ಕೊಡುವುದು ಹಾಗೂ ಬೇರೆ ವಿಷಯವನ್ನು ಇಲ್ಲಿಗೆ ಜೋಡಿಸಿ ವಾದ ಮಾಡುವುದನ್ನು ಇಂಗ್ಲಿಷ್‌ನಲ್ಲಿ whataboutery ಎನ್ನಲಾಗುತ್ತದೆ). ಮಾಡುತ್ತಿರುವುದನ್ನು ನಂಬಲಾಗುತ್ತಿಲ್ಲ. ಪ್ರತಿಕೃತಿಗೆ ನೇಣು ಹಾಕಿದ್ದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವವರು ಹಾಗೂ ಟಿವಿ ಚಾನೆಲ್‌ಗಳೂ ಇಂತಹ ಹೀನ ಸ್ಥಿತಿಗೆ ಕಾರಣ. ಇದು ಕೇವಲ ಒಬ್ಬ ವ್ಯಕ್ತಿಯ ಪ್ರತಿಕೃತಿ ವಿಷಯ ಅಲ್ಲ, ಅನಿಶ್ಚಿತ ಸಮಯದಲ್ಲಿ ಇನ್ನೂ ಅನೇಕರಿಗೆ ನೀಡಿರುವ ಎಚ್ಚರಿಕೆ ಎಂದರು.
ವಿಷಯಾಂತರವೇ ಚರ್ಚೆಯ ರೀತಿಯಾದರೆ, ಈ ಹಿಂದೆ ಅನೇಕ ಬಾರಿ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಆಗೆಲ್ಲ ಸನಾತನ ಧರ್ಮ ಶಾಂತಿಯನ್ನು ಕಾಪಾಡಿದೆ ಎನ್ನುತ್ತ, ಈಗ ಹಿಂಸಾಚಾರದ ಪ್ರತಿಭಟನೆ ಮಾಡುತ್ತಿರುವವರನ್ನು ಪರೋಕ್ಷವಾಗಿ ಟೀಕಿಸಿದರು. ಇದಕ್ಕೆ ಫ್ರೀಲ್ಯಾನ್ಸ್ ಪತರ್ಕರ್ತ ಅಭಿಷೇಕ್ ಭಕ್ಷಿ (@baxiabhishek) ಎಂಬವರು ಪ್ರತಿಕ್ರಿಯಿಸಿ, ನೀವು ಈ ರೀತಿ ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡುವ ಬದಲು ನೇರವಾಗಿ ಜೈ ಶಾ ಜತೆಗೆ ಏಕೆ ಮಾತುಕತೆ ನಡೆಸಬಾರದು? ಎಂದರು. ಅಂದರೆ, ನಿಮಗೆ ಬಿಸಿಸಿಐನಲ್ಲಿ ಯಾವುದಾದರೂ ಸ್ಥಾನ ಬೇಕಿದೆ, ಅದಕ್ಕೆ ಹೀಗೆ ಬಿಜೆಪಿ ಪರ ಮಾತನಾಡುತ್ತಿದ್ದೀರ ಎಂದು ಟೀಕಿಸಿದರು.
ಇದಕ್ಕೆ ಕೋಪಗೊಂಡ ವೆಂಕಟೇಶ್ ಪ್ರಸಾದ್, ಪ್ರಪಂಚದಲ್ಲಿ ಎಲ್ಲವೂ ನಿನ್ನ ಊಹೆಗಳ ರೀತಿಯಲ್ಲೆ ನಡೆಯುತ್ತವೆ ಎಂಬ ನಿನ್ನ ತಿಳುವಳಿಕೆಯನ್ನು ಮುಚ್ಚಿಟ್ಟುಕೊಳ್ಳದೆ ಏಕೆ ಜಗತ್ತಿಗೆಲ್ಲ ಕಾಣುವಂತೆ ಬೆತ್ತಲಾಗುತ್ತಿದ್ದೀಯ ಎಂದು ತಿರುಗೇಟು ನೀಡಿದರು. ಸಾಮಾನ್ಯವಾಗಿ ಮೃದು ಸ್ವಭಾವದ ವೆಂಕಟೇಶ್ ಪ್ರಸಾದ್ ಈ ರೀತಿ ದಿಟ್ಟ ಉತ್ತರ ನೀಡಿದ್ದು ಅನೇಕರ ಮೆಚ್ಚುಗೆಗೆ ಪಾತ್ರ ಆಗಿದೆ. ಮುರಾದ್ ಎಂ ಎಂಬವರು ಇದಕ್ಕೆ ಉತ್ತರವಾಗಿ, 1996ರ ಆ ಕ್ಲೀನ್ ಬೌಲ್ಡ್ ಎಸೆತದ ಫೋಟೊ ಹಾಕಿದ್ದಾರೆ. ಈ ಚೆಂಡು ನೆನಪಾಯಿತು ವೆಂಕಿ ಎಂದಿದ್ದಾರೆ. ಇದಕ್ಕೆ ಮತ್ತೆ ರಿಯಾಕ್ಟ್ ಮಾಡಿದ ವೆಂಕಿ, ಅವರ ಅಹಂಕಾರಕ್ಕೆ ಮುಂದಿನ ಬಾಲ್‌ನಲ್ಲಿ ಉತ್ತರ ಸಿಕ್ಕಿದೆ ಎಂದರು.
ಈ ರೀತಿ ವೆಂಕಟೇಶ್ ಪ್ರಸಾದ್ ಹೇಳಿದ್ದು ಯಾವ ಚೆಂಡು?, ಯಾವಾಗ ಈ ಮ್ಯಾಚ್ ನಡೆದಿದ್ದು?, ಯಾರು ಔಟ್ ಆಗಿದ್ದು? ಎಂಬ ಕುತೂಹಲದಲ್ಲಿ ಟ್ವಿಟ್ಟಿಗರು ಈಗ ಎಲ್ಲೆಡೆ ಸರ್ಚ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಈಗ ನಡೆಯುತ್ತಿರುವ ವಿವಾದವೊಂದು 25 ವರ್ಷದ ಹಿಂದಿನ ಗೋಲ್ಡನ್ ಎಸೆತವೊಂದನ್ನು ನೆನಪಿಸಿದಂತಾಯಿತು. ಈ ಕೆಳಗಿದೆ ಆ ಎಸೆತದ ವಿಡಿಯೋ ಲಿಂಕ್.
ಇದನ್ನೂ ಓದಿ | ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ; ಪೊಲೀಸರತ್ತ ಆಕ್ರೋಶದಿಂದ ಕಲ್ಲು ಎಸೆದ ಮಕ್ಕಳು !