ಬೆಂಗಳೂರು: ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಕೆ. ಎಲ್ ರಾಹುಲ್ ತೀವ್ರ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಅವರ ಬ್ಯಾಟಿಂಗ್ ವೈಖರಿ ಬಗ್ಗೆ ಕ್ರಿಕೆಟ್ ಕ್ಷೇತ್ರದಲ್ಲಿ ಅಸಮಾಧಾನಗಳು ಕೇಳಿ ಬರುತ್ತಿವೆ. ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ಆಡುತ್ತಿರುವ ಅವರು ತಂಡದ ಸೋಲಿಗೆ ಕಾರಣರಾಗಲಿದ್ದಾರೆ ಎಂದೇ ಹೇಳುತ್ತಿದ್ದಾರೆ. ಅದರಲ್ಲೂ ಸೋಮವಾರದ ನಡೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿ 20 ಎಸೆತಗಳಲ್ಲಿ ಕೆ.ಎಲ್ ರಾಹುಲ್ ಕೇವಲ 18 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸ್ಟೊಯ್ನಿಸ್ ಮತ್ತು ಪೂರನ್ ಚೆನ್ನಾಗಿ ಆಡದೇ ಹೋಗಿದ್ದರೆ ಸೋಲಿನ ಹೊಣೆಯನ್ನು ರಾಹುಲ್ ಹೊತ್ತುಕೊಳ್ಳಬೇಕಾಗಿತ್ತು. ಅಷ್ಟೊಂದು ಕಳಪೆಯಾಗಿತ್ತು ಅವರ ಬ್ಯಾಟಿಂಗ್. ಈ ಬಗ್ಗೆ ಭಾರತದ ಮಾಜಿ ವೇಗಿ ದೊಡ್ಡ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರೇ ಆಗಿರುವ ರಾಹುಲ್ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿರುವ ಎರಡನೇ ಕನ್ನಡಿಗ ಕ್ರಿಕೆಟರ್ ದೊಡ್ಡ ಗಣೇಶ್. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 213 ರನ್ ಗುರಿ ಹಿಂಬಾಲಿಸಿದ ಲಖನೌ ಸೂಪರ್ ಜಯಂಟ್ಸ್ ತಂಡ ಕೇವಲ 23 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಕೆ.ಎಲ್ ರಾಹುಲ್ ಅವರು ಸ್ಫೋಟಕ ಬ್ಯಾಟ್ ಮಾಡಿ ತಂಡವನ್ನು ಅಪಾಯದಿಂದ ಪಾರು ಮಾಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಎದುರಿಸಿದ 20 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಬೇಸರ ಮೂಡಿಸಿದರು.
ಮಾರ್ಕಸ್ ಸ್ಟೋಯ್ನಿಸ್, ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದರು. ಆದರೆ, ಸ್ಟೋಯ್ನಿಸ್ ವಿಕೆಟ್ ಒಪ್ಪಿಸಿದ ಬಳಿಕ ಕೆ.ಎಲ್ ರಾಹುಲ್ ಕೂಡ ಪೆವಿಲಿಯನ್ಗೆ ಮರಳಿದರು. ಅಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಆಟದ ವೈಖರಿಗೆ ಅಸಮಾಧಾನದ ಮಾತುಗಳು ಕೇಳಿ ಬಂದವು.
ಹೆಸರಿಗೆ ಮಾತ್ರ ಜತೆಯಾಟ
ಸ್ಟೋಯ್ನಿಸ್ ಜತೆಗೂಡಿ ಕೆ.ಎಲ್ ರಾಹುಲ್ ನಾಲ್ಕನೇ ವಿಕೆಟ್‌ಗೆ 76 ರನ್ ಜೊತೆಯಾಟ ನೀಡಿದ್ದರು ರಾಹುಲ್. ಅದರಲ್ಲಿ .ಸ್ಟೋಯ್ನಿಸ್ ಕೇವಲ 30 ಎಸೆತಗಳಲ್ಲಿ 65 ರನ್ ಚಚ್ಚಿದ್ದರು. ಉಳಿದದ್ದು ರಾಹುಲ್ ರನ್. ಹೀಗಾಗಿ ಇವರಿಬ್ಬರ ಜತೆಯಾಟದಲ್ಲಿ ರಾಹುಲ್ ಪಾಲು ಏನೂ ಇಲ್ಲ. ಅವರಿಬ್ಬರ ನಿರ್ಗಮನದ ಬಳಿಕ ಲಖನೌ 108ಕ್ಕೆ 5 ವಿಕೆಟ್‌ಗಳನ್ನು ಕೈಚೆಲ್ಲಿಕೊಂಡಿತ್ತು. ನಿಕೋಲಸ್ ಪೂರನ್(62 ರನ್) ಅವರು ಕೇವಲ 19 ಎಸೆತಗಳಲ್ಲಿ ದಾಖಲೆಯ ಅರ್ಧಶತಕ ಸಿಡಿಸಿದ್ದರಿಂತ ಕ್ಯಾಪ್ಟನ್ ರಾಹುಲ್ ನಗುವಂತಾಯಿತು. ಇಲ್ಲದಿದ್ದರೆ ತನ್ನ ತವರು ಮೈದಾನದಲ್ಲೇ ಪೆಚ್ಚು ಮೋರೆ ಹಾಕಬೇಕಾಗಿತ್ತು.
ಇದನ್ನೂ ಓದಿ : IPL 2023 : ಕೆ. ಎಲ್ ರಾಹುಲ್ ಹೀಗೆ ಆಡಿದರೆ ಲಕ್ನೊ ಸೂಪರ್ ಜಯಂಟ್ಸ್ ತಂಡಕ್ಕೆ ಕಷ್ಟ
ಆರ್‌ಸಿಬಿ ವಿರುದ್ಧ ದೊಡ್ಡ ಮೊತ್ತವನ್ನು ಚೇಸ್ ಮಾಡುವಾಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ತುಂಬಾ ಭಯಾನಕವಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಈ ರೀತಿ ಆಡಿದ್ದನ್ನು ನಾನು ನೋಡಿದ್ದು ಇದೇ ಮೊದಲು. ಅವರ ಯೋಚನೆಯೇನು? ಈ ಹಂತದಲ್ಲಿ ಇದೆಂಥ ಆಟ. ಶಾಲೆಗಳಲ್ಲಿ ಆಡುವ ಕ್ರಿಕೆಟ್ ಎಂದುಕೊಂಡಿದ್ದಾರಾ ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.
ಹಾಲಿ ಐಪಿಎಲ್ನ ನಾಲ್ಕು ಪಂದ್ಯಗಳ ಅಂತ್ಯಕ್ಕೆ ಕೆ.ಎಲ್ ರಾಹುಲ್ ಕ್ರಮವಾಗಿ 8, 20, 35 ಹಾಗೂ 18 ರನ್‌ಗಳನ್ನು ಗಳಿಸಿದ್ದಾರೆ. ಈ ಹಿಂದಿನ ಆವೃತ್ತಿಗಳ ಐಪಿಎಲ್ ಟೂರ್ನಿಯ ಪ್ರದರ್ಶನಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕಳಪೆ.