Site icon Vistara News

ICC World Cup 2023 : ಲಂಕಾ ವಿರುದ್ಧ ಗೆಲುವು; ವಿಶ್ವ ಕಪ್​ನಲ್ಲಿ ಮೊದಲ ಜಯ ಗಳಿಸಿದ ಆಸ್ಟ್ರೇಲಿಯಾ

Australia Cricket team

ಲಖನೌ: ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ಹಾಲಿ ವಿಶ್ವ ಕಪ್​ನಲ್ಲಿ (ICC World Cup 2023) ತನ್ನ ಮೊದಲ ವಿಜಯವನ್ನು ಕಂಡಿದೆ. ಸೋಮವಾರ (ಅಕ್ಟೋಬರ್ 16) ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 5 ವಿಕೆಟ್​ಗಳ ಸುಲಭ ಜಯ ಗಳಿಸಿದ ಪ್ಯಾಟ್​ ಕಮಿನ್ಸ್ ಬಳಗ ಗೆಲುವಿನ ನಗೆ ಬೀರಿದೆ. ಕಾಂಗರೂ ಪಡೆ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ವಿರುದ್ಧ 6 ವಿಕೆಟ್​ಗಳ ಸೋಲಿಗೆ ಒಳಗಾಗಿದ್ದರೆ, ನಂತರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್​ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆಯುವ ಮೂಲಕ ವಿಮರ್ಶೆಗೆ ಒಳಪಟ್ಟಿತ್ತು. ಇದೀಗ ಮೈ ಚಳಿ ಬಿಟ್ಟು ಆಡುವ ಮೂಲಕ ಗೆಲುವು ತನ್ನದಾಗಿಸಿಕೊಂಡಿದೆ.

ಇಲ್ಲಿನ ಭಾರತ ರತ್ನ ಶ್ರೀ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 43.3 ಓವರ್​ಗಳಲ್ಲಿ 209 ರನ್​ಗಳಿಗೆ ಆಲ್​​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 35.2 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 215 ರನ್ ಬಾರಿಸಿ ಗೆಲುವು ಕಂಡಿತು.

ಈ ಸುದ್ದಿಗಳನ್ನೂ ಓದಿ
ICC World Cup 2023 : ಜಸ್ಟ್​ ಮಿಸ್​; ಪ್ರೇಕ್ಷಕರ ಸೀಟ್​​ಗಳ ಮೇಲೆ ಬಿದ್ದ ಬೃಹತ್​ ಹೋರ್ಡಿಂಗ್​
Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ
Virat Kohli : ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆಯಾಗಲು ಕೊಹ್ಲಿಯೇ ಕಾರಣವಂತೆ

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ್ದ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಾಣಲಿಲ್ಲ. ಡೇವಿಡ್​ ವಾರ್ನರ್​ (11ರನ್​) ಹಾಗೂ ಸ್ಟೀವ್ ಸ್ಮಿತ್​ (0) ಬೇಗ ಔಟಾಗುವ ಮೂಲಕ 24 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ವೇಳೆ ಜತೆಯಾದ ಮರ್ನಸ್​ ಲಾಬುಶೇನ್ (40) ಹಾಗೂ ಆರಂಭಿಕ ಬ್ಯಾಟರ್​ ಮಿಚೆಲ್ ಮಾರ್ಷ್​ (52) ಚೇತರಿಕೆ ತಂದರು. ಮಾರ್ಷ್​ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು. ಬಳಿಕ ಆಡಲು ಇಳಿದ ವಿಕೆಟ್​ಕೀಪರ್​ ಬ್ಯಾಟರ್​ ಜೋಶ್ ಇಂಗ್ಲಿಸ್​ (58) ಕೂಡ ಅರ್ಧ ಶತಕ ಬಾರಿಸಿ ಗೆಲುವಿನ ಹಾದಿಗೆ ತಂಡವನ್ನು ಕೊಂಡೊಯ್ದರು. ಕೊನೆಯಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ 21 ಎಸೆತಗಳಲ್ಲಿ 31 ರನ್ ಬಾರಿಸಿದರೆ, ಮಾರ್ಕಸ್​ ಸ್ಟೊಯ್ನಿಸ್​ 10 ಎಸೆತಗಳಲ್ಲಿ 20 ರನ್ ಬಾರಿಸಿ ಜಯ ತಂದುಕೊಟ್ಟರು. ಲಂಕಾ ಪರ ಬೌಲಿಂಗ್​ನಲ್ಲಿ ಮದುಶಂಕ 38 ರನ್​ಗಳಿಗೆ 3 ವಿಕೆಟ್ ಕಿತ್ತು ಮಿಂಚಿದರು.

ಲಂಕಾ ಉತ್ತಮ ಆರಂಭದ ಬಳಿಕ ಕುಸಿತ

ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕಾ (67 ಎಸೆತಗಳಲ್ಲಿ 61 ರನ್) ಮತ್ತು ಕುಸಾಲ್ ಪೆರೆರಾ (82 ಎಸೆತಗಳಲ್ಲಿ 78 ರನ್) ಮೊದಲ ವಿಕೆಟ್​ಗೆ 130 ಎಸೆತಗಳಲ್ಲಿ 125 ರನ್ ಸೇರಿಸಿದರು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 22ನೇ ಓವರ್​ನಲ್ಲಿ ನಿಸ್ಸಾಂಕಾ ಅವರನ್ನು ಶಾರ್ಟ್ ಬಾಲ್​ನಲ್ಲಿ ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಪೆರೆರಾ ಕೂಡ ಕೆಲವು ಓವರ್​ಗಲ ನಂತರ ಪ್ಯಾಟ್ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಅವರ ಔಟ್ ನಂತರ, ಆಡಮ್ ಜಂಪಾ ಲಂಕಾ ಬ್ಯಾಟಿಂಗ್ ಬಲಕ್ಕೆ ಪೆಟ್ಟು ಕೊಟ್ಟರು. ಹೀಗಾಗಿ ಶ್ರೀಲಂಕಾ ನಾಟಕೀಯ ಕುಸಿತವನ್ನು ಅನುಭವಿಸಿತು. ಕುಸಾಲ್ ಮೆಂಡಿಸ್ (13 ಎಸೆತಗಳಲ್ಲಿ 9), ಸದೀರಾ ಸಮರವಿಕ್ರಮ (8 ಎಸೆತಗಳಲ್ಲಿ 8), ಚಮಿಕಾ ಕರುಣರತ್ನೆ (11 ಎಸೆತಗಳಲ್ಲಿ 2) ಮತ್ತು ಮಹೀಶ್​ ತೀಕ್ಷಣಾ (5 ಎಸೆತಗಳಲ್ಲಿ 0) ತಮ್ಮ ವಿಕೆಟ್​ಗಳನ್ನು ಜಂಪಾಗೆ ಒಪ್ಪಿಸಿದರು. ಹೀಗಾಗಿ ಅವರು 47 ರನ್​ಗೆ 4 ವಿಕೆಟ್ ಪಡೆದರು.

Exit mobile version