Site icon Vistara News

Agni Chopra : ರಣಜಿ ಇತಿಹಾಸದಲ್ಲಿ ವಿನೂತನ ದಾಖಲೆ ಬರೆದ 12th ಫೇಲ್​ ಸಿನಿಮಾ ನಿರ್ದೇಶಕನ ಪುತ್ರ

Agni Chopra

ಬೆಂಗಳೂರು: ಖ್ಯಾತ ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಅವರ ಪುತ್ರ ಅಗ್ನಿ ಚೋಪ್ರಾ (Agni Chopra) ತಮ್ಮ ಮೊದಲ ನಾಲ್ಕು ರಣಜಿ ಟ್ರೋಫಿಯಲ್ಲಿ ಐದು ಶತಕಗಳನ್ನು ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ವಿಧು ಅವರು ಮಿಷನ್ ಕಾಶ್ಮೀರ್​ ಎಂಬ ಜನಪ್ರಿಯ ಚಿತ್ರದ ನಿರ್ದೇಶಕ. ಅದೇ ರೀತಿ ಅವರು ಇತ್ತೀಚೆಗೆ ನಿರ್ಮಾಣ ಮಾಡಿ, ನಿರ್ದೇಶಿಸಿದ 12th ಫೇಲ್​ ಸಿನಿಮಾ ಕೂಡ ಪ್ರಖ್ಯಾತಿ ಗಳಿಸಿತ್ತು.

ವಿಧು ಅವರ ಪುತ್ರ ರಣಜಿಯಲ್ಲಿ ಮಿಜೋರಾಂ ಪರ ಆಡುತ್ತಿದ್ದು ವಿಶ್ವ ದಾಖಲೆಯನ್ನು ಬರೆದಿದ್ದಾರೆ. 25 ವರ್ಷದ ಎಡಗೈ ಬ್ಯಾಟ್ಸ್ಮನ್ ಅಗ್ನಿ ತಮ್ಮ ಮೊದಲ ನಾಲ್ಕು ಪ್ರಥಮ ದರ್ಜೆ ಪಂದ್ಯಗಳಲ್ಲಿ ಸತತ ಐದು ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಯುವ ಆಟಗಾರ ಇದುವರೆಗೆ ಎಂಟು ಪ್ರಥಮ ದರ್ಜೆ ಇನ್ನಿಂಗ್ಸ್​ಗಳಲ್ಲಿ 95.87 ಸ್ಟ್ರೈಕ್ ರೇಟ್ನಲ್ಲಿ 767 ರನ್ ಬಾರಿಸಿದ್ದಾರೆ.

ಸಿಕ್ಕಿಂ ವಿರುದ್ಧ ಮಿಜೋರಾಂ ಪರ 166 ರನ್ ಗಳಿಸಿದ್ದಾರೆ. ಅಗ್ನಿ 30 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದ್ದಾರೆ. ಅಗ್ನಿ ಅವರ ವೀರೋಚಿತ ಪ್ರದರ್ಶನದ ಹೊರತಾಗಿಯೂ ಮಿಜೋರಾಂ ತಂಡ ಸಿಕ್ಕಿಂ ವಿರುದ್ಧ ನಾಲ್ಕು ವಿಕೆಟ್​ಗಳ ಸೋಲು ಅನುಭವಿಸಿತು.

ಇದನ್ನೂ ಓದಿ : Mayank Agarwal : ಮಯಾಂಕ್ ಅಗರ್ವಾಲ್ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ನಾಗಾಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಅಗ್ನಿ 150 ಎಸೆತಗಳಲ್ಲಿ 164 ರನ್ ಗಳಿಸಿ ಮಿಜೋರಾಂ ತಂಡಕ್ಕೆ ಮುನ್ನಡೆ ಸಾಧಿಸಲು ನೆರವಾಗಿದ್ದರು. ಭಾರತದ ಪ್ರೀಮಿಯರ್ ರೆಡ್-ಬಾಲ್ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಎರಡು ಪ್ರದರ್ಶನಗಳಲ್ಲಿ ಅವರು 21 ಬೌಂಡರಿಗಳು ಮತ್ತು ಮೂರು ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಅಗ್ನಿಯ ವಿಶೇಷತೆಯೇನು?

ಅಗ್ನಿ ಬಗ್ಗೆ ಹೇಳುವುದಾದರೆ ಅವರು ನವೆಂಬರ್ 4, 1998 ರಂದು ಅಮೆರಿಕದ ಮಿಚಿಗನ್ ನ ಡೆಟ್ರಾಯಿಟ್ ನಲ್ಲಿ ಜನಿಸಿದ್ದಾರೆ. ಅವರು ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಮತ್ತು ಪ್ರಸಿದ್ಧ ಲೇಖಕಿ ಅನುಪಮಾ ಚೋಪ್ರಾ ಅವರ ಪುತ್ರ. ವಿಧು ಅವರ ಅಕ್ಟೋಬರ್ 27, 2023 ರಂದು ಬಿಡುಗಡೆಯಾದ ’12th ಫೇಲ್​’ ಚಿತ್ರದ ಯಶಸ್ಸಿನಲ್ಲಿದ್ದಾರೆ.

ಮುಂಬೈ ತಂಡಕ್ಕೆ ಪ್ರವೇಶ ಪಡೆಯಲು ವಿಫಲಗೊಂಡ ಅವರು ಉತ್ತಮ ಅವಕಾಶಗಳನ್ನು ಪಡೆಯುವ ಭರವಸೆಯೊಂದಿಗೆ ತಮ್ಮ ನೆಲೆಯನ್ನು ಮಿಜೋರಾಂಗೆ ಬದಲಾಯಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಛತ್ತೀಸ್​ಗಢ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಮಿಜೋರಾಂ ಪರ ಮೊದಲ ಬಾರಿಗೆ ಕಾಣಿಸಿಕೊಡಿದ್ದರು. ಈವರೆಗೆ ಅವರು ಏಳು ಲಿಸ್ಟ್-ಎ ಮತ್ತು ಟಿ 20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 174 ಮತ್ತು 234 ರನ್ ಗಳಿಸಿದ್ದಾರೆ.

ಮಗನ ಸಾಧನೆ ಹೊಗಳಿದ ಅನುಪಮಾ ಚೋಪ್ರಾ


ಚಲನಚಿತ್ರ ವಿಮರ್ಶಕಿ ಅನುಪಮಾ ಚೋಪ್ರಾ ಅವರ ಪುತ್ರರಾಗಿರುವ ಅಗ್ನಿ 2024 ರ ರಣಜಿ ಟ್ರೋಫಿಯಲ್ಲಿ ತಮ್ಮ ಪ್ರಭಾವಶಾಲಿ ಪ್ರದರ್ಶನದಿಂದ ತಮ್ಮ ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ. ಪ್ರತಿಭಾನ್ವಿತ ಬ್ಯಾಟರ್​​ನ ಸಾಧನೆಯನ್ನು ಅವರ ತಾಯಿ ಶ್ಲಾಘಿಸಿದ್ದಾರೆ. ತಮ್ಮ ಮೊದಲ 4 ಪಂದ್ಯಗಳಲ್ಲಿ ಶತಕಗಳೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಹೊಸ ದಾಖಲೆಯನ್ನು ರಚಿಸಿದ್ದಕ್ಕೆ ಅಮೂಲ್ಯವಾದ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹೆಮ್ಮೆಯ ತಾಯಿ ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

ಹೈದರಾಬಾದ್​ನಲ್ಲಿ ನಡೆಯಲಿರುವ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆಡುವ ಮೂಲಕ ಅಗ್ನಿ ಮಿಜೋರಾಂ ಪರ ಉತ್ತಮ ಫಾರ್ಮ್ ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಮಿಜೋರಾಂ ಆಡಿರುವ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಡ್ರಾದೊಂದಿಗೆ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ಲೇಟ್ ಗುಂಪಿನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಫೆ.24ರಿಂದ ಆರಂಭವಾಗಲಿರುವ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಪ್ಲೇಟ್ ಗುಂಪಿನ ಅಂತಿಮ ಸ್ಪರ್ಧಿಗಳು ಮುಂದಿನ ಋತುವಿನಲ್ಲಿ ಎಲೈಟ್ ವಿಭಾಗದಲ್ಲಿ ಆಡಲಿದ್ದಾರೆ. ಮುಂದಿನ ಋತುವಿನಲ್ಲಿ ಮಿಜೋರಾಂ ಎಲೈಟ್ ವಿಭಾಗಕ್ಕೆ ಅರ್ಹತೆ ಪಡೆಯಬೇಕಾದರೆ ಅಗ್ನಿ ಅವರ ಹೆಗಲ ಮೇಲೆ ಬಹಳಷ್ಟು ಇರುತ್ತದೆ.

Exit mobile version