Site icon Vistara News

Vijay Hazare Trophy | ಸೌರಾಷ್ಟ್ರ ತಂಡಕ್ಕೆ ವಿಜಯ್‌ ಹಜಾರೆ ಟ್ರೋಫಿ; ಋತುರಾಜ್‌ ಹೋರಾಟ ವ್ಯರ್ಥ

vijay hazare

ಅಹಮದಾಬಾದ್‌ : ಆರಂಭಿಕ ಬ್ಯಾಟರ್‌ ಶೆಲ್ಡಾನ್‌ ಜಾಕ್ಸನ್ (೧೩೩) ಅವರ ಅಜೇಯ ಶತಕದ ನೆರವು ಪಡೆದ ಸೌರಾಷ್ಟ್ರ ತಂಡ ವಿಜಯ್‌ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮಹರಾಷ್ಟ್ರ ವಿರುದ್ಧ ೫ ವಿಕೆಟ್‌ಗಳ ಗೆಲುವು ಸಾಧಿಸಿ, ಎರಡನೇ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಭರ್ಜರಿ ಫಾರ್ಮ್‌ನಲ್ಲಿದ್ದ ಋತುರಾಜ್‌ ಗಾಯಕ್ವಾಡ್‌ ಅವರ ಶತಕದ (೧೦೮) ಹೋರಾಟ ವ್ಯರ್ಥಗೊಂಡಿತು.

ನರೇಂದ್ರ ಮೋದಿ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್‌ ಗೆದ್ದ ಸೌರಾಷ್ಟ್ರ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ ತಂಡ ನಿಗದಿತ ೫೦ ಓವರ್‌ಗಳಲ್ಲಿ ೨೪೮ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಸೌರಾಷ್ಟ್ರ 46.3 ಓವರ್‌ಗಳಲ್ಲಿ ೫ ವಿಕೆಟ್‌ ನಷ್ಟಕ್ಕೆ ೨೪೯ ರನ್‌ ಬಾರಿಸಿ ಗೆಲುವು ಕಂಡಿತು.

ಸಾಧಾರಣ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಪರ ಹಾರ್ವಿಕ್‌ ದೇಸಾಯಿ (೫೦) ಅರ್ಧ ಶತಕ ಬಾರಿಸಿದರೆ, ಶೆಲ್ಡಾನ್‌ ಜಾಕ್ಸನ್‌ ಶತಕ ಬಾರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ೧೨೫ ರನ್‌ ಬಾರಿಸುವ ಮೂಲಕ ತಂಡದ ಜಯಕ್ಕೆ ಭದ್ರ ಬುನಾದಿ ಹಾಕಿದರು. ಅಂತಿಮವಾಗಿ ಚಿರಾಗ್‌ ಜಾನಿ ಅಜೇಯ ೩೦ ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು.

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಮಹಾರಾಷ್ಟ್ರ ತಂಡದ ಪರ ಋತುರಾಜ್‌ ಗಾಯಕ್ವಾಡ್‌ (೧೦೮) ಶತಕ ಬಾರಿಸಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ನೆರವು ಲಭಿಸದ ಕಾರಣ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ಸ್ಕೋರ್ ವಿವರ

ಮಹಾರಾಷ್ಟ್ರ : ೫೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೨೪೮ (ಋತುರಾಜ್‌ ಗಾಯಕ್ವಾಡ್‌ ೧೦೮, ಅಜೀಮ್‌ ಕಾಜಿ ೩೭; ಚಿರಾಗ್‌ ಜಾನಿ ೪೩ಕ್ಕೆ೩).

ಸೌರಾಷ್ಟ್ರ: ೪೬.೩ ಓವರ್‌ಗಳಲ್ಲಿ ೨೪೯ (ಶೆಲ್ಡಾನ್‌ ಜಾಕ್ಸನ್‌ ೧೩೩, ಹಾರ್ವಿಕ್‌ ದೇಸಾಯಿ ೫೦, ಮಕೇಶ್‌ ಚೌಧರಿ ೩೮ಕ್ಕೆ೨).

ಇದನ್ನೂ ಓದಿ | ಗ್ರೌಂಡ್ಸ್‌ಮನ್‌ ತಳ್ಳಿದ ಋತುರಾಜ್‌ ಗಾಯಕ್ವಾಡ್‌: ಸರಿಯೊ, ತಪ್ಪೊ

Exit mobile version