ರಾಜ್ಕೋಟ್: ವಿಜಯ್ ಹಜಾರೆ(Vijay Hazare Trophy) ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ (Karnataka) ತಂಡ ವಿದರ್ಭ(Vidarbha vs Karnataka) ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಯಲ್ಲಿ ರಾಜಸ್ಥಾನ ವಿರುದ್ಧ ಕಣಕಿಳಿಯಲಿದೆ. ಈ ಪಂದ್ಯ ಡಿಸೆಂಬರ್ 14ರಂದು ನಡೆಯಲಿದೆ.
ರಾಜ್ಕೋಟ್ನ ಸನೋಸಾರ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡಲಿಳಿದ ಕರ್ನಾಟಕ ತಂಡ ಟಾಸ್ ಗದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆಹ್ವಾನ ಪಡೆದ ವಿದರ್ಭ ವಿಜಯ್‌ಕುಮಾರ್ ವೈಶಾಖ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ 44.5 ಓವರ್ಗಳಲ್ಲಿ ಕೇವಲ 173 ರನ್ಗಳಿಗೆ ಸರ್ವಪತನ ಕಂಡಿತು. ಜವಾಬಿತ್ತ ಕರ್ನಾಟಕ ಈ ಅಲ್ಪ ಮೊತ್ತವನ್ನು 40.3 ಓವರ್ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ ಜಯ ಸಾಧಿಸಿತು.
ಮಿಂಚಿದ ಸಮರ್ಥ್-ಅಗರ್ವಾಲ್
ಚೇಸಿಂಗ್ ನಡೆಸಿದ ಕರ್ನಾಟಕ ತಂಡಕ್ಕೆ ಆರಂಭಕಾರ ಹಾಗೂ ನಾಯಕ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್ ಅತ್ಯುತ್ತಮ ಆರಂಭ ಒದಗಿಸಿದ್ದರು. ಈ ಜೋಡಿ ವಿದರ್ಭ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ಮಿಂಚಿದರು. ಮೊದಲ ವಿಕೆಟ್ಗೆ 82 ರನ್ಗಳ ಜತೆಯಾಟ ನಡೆಸಿದರು.
ಅರ್ಧಶತಕ ಬಾರಿಸಿದ ಬಳಿಕ ಮಯಾಂಕ್ ಅಗರ್ವಾಲ್ ವಿಕೆಟ್ ಒಪ್ಪಿಸಿದರು. ಅವರು 64 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ ಹರ್ಷ್ ದುಬೆಗೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಬೇರೂರಿ ನಿಂತಿದ್ದ ಸಮರ್ಥ್ ಅವರನ್ನು ಔಟ್ ಮಾಡಲು ವಿದರ್ಭ ಬೌಲರ್ಗಳಿಗೆ ಸಾಧ್ಯವಾಗಲೇ ಇಲ್ಲ. ಸಮರ್ಥ್ 7 ಬೌಂಡರಿ ನೆರವಿನಿಂದ ಅಜೇಯ 72 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ನಿಕಿನ್ ಜೋಸ್ 31 ರನ್ ಬಾರಿಸಿ ಉಪಯುಕ್ತ ಕೊಡುಗೆ ನೀಡಿದರು.
ಇದನ್ನೂ ಓದಿ Vijay Hazare Trophy: ಅಗರ್ವಾಲ್,ಸಮರ್ಥ್ ಶತಕ; ಭರ್ಜರಿ ಗೆಲುವು ಸಾಧಿಸಿದ ಕರ್ನಾಟಕ
ಘಾತಕ ಬೌಲಿಂಗ್ ನಡೆಸಿದ ವೈಶಾಖ್
16ನೇ ಆವೃತ್ತಿಯಲ್ಲಿ ಆರ್ಸಿಬಿ ಪರ ಆಡಿದ್ದ ವಿಜಯ್‌ಕುಮಾರ್ ವೈಶಾಖ್ ಅವರು ಈ ಪಂದ್ಯದಲ್ಲಿ ಘಾತಕ ಬೌಲಿಂಗ್ ನಡೆಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು 8.5 ಓವರ್ ಎಸೆದು 2 ಮೇಡನ್ ಸಹಿತ 44 ರನ್ ವೆಚ್ಚದಲ್ಲಿ ಪ್ರಮುಖ 4 ವಿಕೆಟ್ ಕಿತ್ತರು. ಉಳಿದಂತೆ ಮನೋಜ್ ಭಾಂಡಗೆ ಮತ್ತು ಜಗದೀಶ್ ಸುಚಿತ್ ತಲಾ 2 ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ನಡೆಸಿದ ವಿದರ್ಭ ಪರ ಯಶ್ ಕಮ್ 72 ಎಸೆತಗಳಲ್ಲಿ 38 ರನ್ ಬಾರಿಸಿದರೆ, ಶುಭಂ ದುಬೆ 59 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 41 ರನ್ ಬಾರಿಸಿದರು. ಉಭಯ ಆಟಗಾರರನ್ನು ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟರ್ಗಳು ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲಿಲ್ಲ. ಕರ್ನಾಟಕ ತೊರೆದು ಆಡಿದ ಕರುಣ್ ನಾಯರ್ ಕೇವಲ 5 ರನ್ ಬಾರಿಸಿದರು.