ನವದೆಹಲಿ: ಲೋಕಸಭೆ ಚುನಾವಣೆಗೆ(lok sabha election 2024) ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್(Vijender Singh) ಅವರು ಕಾಂಗ್ರೆಸ್(congress party) ತೊರೆದು ಬುಧವಾರ ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ವಿಜೇಂದರ್ ಸಿಂಗ್ ಅವರು ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಪದಕ ಗೆದ್ದ ಭಾರತೀಯ ಬಾಕ್ಸರ್ ಎಂಬ ಖ್ಯಾತಿ ಹೊಂದಿದ್ದಾರೆ.
ಬುಧವಾರ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ವಿಜೇಂದರ್ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ನಟಿ ಮತ್ತು ಹಾಲಿ ಬಿಜೆಪಿ ಸಂಸದೆ ಹೇಮಾ ಮಾಲಿನಿ ಸ್ಪರ್ಧಿಸುತ್ತಿರುವ ಮಥುರಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜೇಂದರ್ ಅವರ ಹೆಸರು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿತ್ತು. ಇದೀಗ ಅವರು ಬಿಜೆಪಿ ಸೇರಿದ್ದಾರೆ.
#WATCH | Boxer & Congress leader Vijender Singh joins BJP at the party headquarters in Delhi#LokSabhaElections2024 pic.twitter.com/5fqOt9KIcp
— ANI (@ANI) April 3, 2024
‘ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ. 20 ವರ್ಷದ ಬಾಕ್ಸಿಂಗ್ ವೃತ್ತಿಯಲ್ಲಿ ರಿಂಗ್‌ನಲ್ಲಿ ದೇಶಕ್ಕೆ ಹೆಮ್ಮೆ ತಂದಿದ್ದೇನೆ. ಈಗ ಮೋದಿ ಜತೆ ಸೇರಿ ದೇಶದ ಏಳಿಗೆಗಾಗಿ ಶ್ರಮಿಸುತ್ತೇನೆ’ ಎಂದು ವಿಜೇಂದರ್ ಹೇಳಿದರು. ವಿಜೇಂದರ್ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.
ವಾಯುಪಡೆಯ ಮಾಜಿ ಮುಖ್ಯಸ್ಥ ಆರ್.ಕೆ.ಎಸ್. ಬದೌರಿಯಾ ಬಿಜೆಪಿಗೆ ಸೇರ್ಪಡೆ
ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಆರ್ಕೆಎಸ್ ಬದೌರಿಯಾ (R K S Bhadauria) ಭಾನುವಾರ ಬಿಜೆಪಿಗೆ ಸೇರಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ (Vinod Thavde) ಅವರು ಭಾರತೀಯ ವಾಯುಪಡೆಯಲ್ಲಿ (IAF) ಬದೌರಿಯಾ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಪಕ್ಷಕ್ಕೆ ಬರ ಮಾಡಿಕೊಂಡರು. ರಕ್ಷಣಾ ಪಡೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ ನಂತರ ಅವರು ಈಗ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ತಾವ್ಡೆ ವ್ಯಕ್ತಪಡಿಸಿದ್ದರು.
ಬದೌರಿಯಾ ಅವರು ಐಎಎಫ್ನಲ್ಲಿ ಸುಮಾರು 40 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ್ ಕಾರ್ಯಕ್ರಮಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ಆರ್ಕೆಎಸ್ ಭದೌರಿಯಾ ಉತ್ತರ ಪ್ರದೇಶದವರಾಗಿದ್ದಾರೆ. ಅಂತೆಯೇ ಅಲ್ಲಿನ ಲೋಕಸಭಾ ಚುನಾವಣೆಗೆ ರಾಜ್ಯದ ಹಲವಾರು ಸ್ಥಾನಗಳಿಂದ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಇನ್ನೂ ಹೆಸರಿಸಿಲ್ಲ. ಹೀಗಾಗಿ ಬದೌರಿಯಾ ಅವರು ಅಲ್ಲಿ ಚುನಾವಣೆಗೆ ನಿಲ್ಲಬಹುದು ಎಂದು ಹೇಳಲಾಗಿದೆ.