Site icon Vistara News

Vinesh Phogat: ವಿನೇಶ್ ಫೋಗಟ್‌ ಅನರ್ಹತೆಗೆ ಸಂಸತ್‌ನಲ್ಲಿ ಸಚಿವ ಮಂಡಾವಿಯ ಆಕ್ರೋಶ; ನೆರವಿನ ಅಭಯ

Vinesh Phogat

ಪ್ಯಾರಿಸ್:‌ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (paris olympics) ಫೈನಲ್​ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದ ಭಾರತದ ಖ್ಯಾತ ಮಹಿಳಾ ಕುಸ್ತಿಪಟು (Wrestler) ವಿನೇಶ್​ ಫೋಗಟ್ (Vinesh Phogat) ಅವರನ್ನು ಹೆಚ್ಚಿನ ತೂಕದ ಹಿನ್ನೆಲೆಯಲ್ಲಿ ಅನರ್ಹತೆಗೊಳಿಸಿರುವುದಕ್ಕೆ ಕೇಂದ್ರ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ. ವಿನೇಶ್‌ ಫೋಗಟ್‌ ಅನರ್ಹತೆ ಕುರಿತು ಸಂಸತ್‌ನಲ್ಲಿ ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಂಡಾವಿಯ (Mansukh Mandaviya) ಅವರು ಪ್ರಸ್ತಾಪಿಸಿದ್ದು, ಅನರ್ಹತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

100 ಗ್ರಾಂ ಹೆಚ್ಚು ತೂಕವಿದ್ದ ಕಾರಣ ಅವರು ಒಲಿಂಪಿಕ್ಸ್‌ನಿಂದ ಅನರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್‌ ನಿಯಮಗಳ ಅನುಸಾರ ಅವರನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ ಈಗ ಒಲಿಂಪಿಕ್ಸ್‌ ಅಸೋಸಿಯೇಷನ್‌ಗೆ ದೂರು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಕರೆ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಸೂಚಿಸಿದ್ದಾರೆ ಎಂದು ಮಂಡಾವಿಯ ಹೇಳಿದ್ದಾರೆ.

ಪ್ರತಿಯೊಂದು ಹೆಜ್ಜೆಯಲ್ಲೂ ವಿನೇಶ್‌ ಫೋಗಟ್‌ ಅವರಿಗೆ ಸಹಕಾರ ನೀಡಲಾಗಿದೆ. ಅವರಿಗೆ ವೈಯಕ್ತಿಕ ಸಿಬ್ಬಂದಿಯನ್ನೂ ಭಾರತ ಕಳುಹಿಸಿದೆ. ಸಹಾಯಕ ಸಿಬ್ಬಂದಿಯನ್ನೂ ಅವರಿಗೆ ಒದಗಿಸಲಾಗಿದೆ. ಇದಕ್ಕೂ ಮೊದಲು ಕೂಡ ವಿನೇಶ್‌ ಫೋಗಟ್‌ ಅವರ ಸಾಧನೆಗೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಿದೆ. ಮುಂದಿನ ದಿನಗಳಲ್ಲೂ ನೆರವು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ತೂಕ ಇಳಿಸಿದ್ದೇ ಸಮಸ್ಯೆಗೆ ಕಾರಣ?

ವಿನೇಶ್​ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್​ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್​ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್​ ಆರಂಭಕ್ಕೂ ಮುನ್ನ ನಡೆದಿದ್ದ ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿಯೂ ವಿನೇಶ್​ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದರು. ಆದರೆ, 50 ಕೆಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅವರು ಕಣಕ್ಕಿಳಿದ್ದರು. ಇದೀಗ ತೂಕ ಬದಲಿಸಿದ್ದೇ ಅವರ ಈ ಹಿನ್ನಡೆಗೆ ಕಾರಣ ಎಂದರೂ ತಪ್ಪಾಗಲಾರದು.

ಒಲಿಂಪಿಕ್ಸ್​ ಸ್ಪರ್ಧೆಗೂ ಮುನ್ನ ವಿನೇಶ್​ ಅವರ ತೂಕ 2 ಕೆಜಿ ಹೆಚ್ಚಳವಾಗಿತ್ತು. ಇದನ್ನು ಕಡಿಮೆ ಮಾಡಲೆಂದೆ ಅವರು ನಿದ್ದೆ, ಆಹಾರ ಬಿಟ್ಟು ಅತ್ಯಂತ ಕಠಿಣ ವ್ಯಾಯಾಮ ನಡೆಸಿ ಸುಮಾರು 1.90 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ 100 ಗ್ರಾಂ ಹೆಚ್ಚಳದಿಂದ ಇದೀಗ ಅವರ ಒಲಿಂಪಿಕ್ಸ್​ ಪದಕದ ಕನಸು ನುಚ್ಚುನೂರಾಗಿದೆ. ಒಂದೊಮ್ಮೆ ಅವರು ತಮ್ಮ ಈ ಹಿಂದಿನಂತೆ 53 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ ಈ ಹಿನ್ನಡೆ ಉಂಟಾಗುತ್ತಿರಲಿಲ್ಲ.

ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಾಂತ್ವನ

ಅನರ್ಹವಾಗಿ ಆಘಾತದಲ್ಲಿರುವ ವಿನೇಶ್​ಗೆ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಸಾಂತ್ವನ ಹೇಳಿದ್ದಾರೆ. “ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನಿಮಗೆ ಮಾತ್ರವಲ್ಲದೆ ಇಡೀ ದೇಶವಾಸಿಗಳಿಗೆ ನೋವು ತಂದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ” ಎಂದು ಮೋದಿ ಟ್ವೀಟ್​ ಮಾಡಿದ್ದಾರೆ. ಜತೆತೆ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಗೆ ಮತ್ತೊಮ್ಮೆ ಈ ನಿರ್ಧಾರವನ್ನು ಪರಿಶೀಲಿಸುವಂತೆ ಮೋದಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Vinesh Phogat: ನೋ! ನೋ! ನೋ!; ವಿನೇಶ್​ ಫೋಗಟ್ ಅನರ್ಹತೆ ಕೆಟ್ಟ ಕನಸಾಗಿರಲಿ: ಆನಂದ್‌ ಮಹೀಂದ್ರಾ

Exit mobile version