ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕುಸ್ತಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಪದಕವೊಂದನ್ನು ಗೆಲ್ಲುವು ನಿರೀಕ್ಷೆಯಲಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರನ್ನು ಒಲಿಂಪಿಕ್ಸ್ ಸಮಿತಿ ಅನರ್ಹ ಮಾಡಿದೆ. 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಇದೀಗ ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ಅವರನ್ನು ಫೈನಲ್ನಿಂದ ಅನರ್ಹ(Vinesh Phogat Disqualified) ಮಾಡಲಾಗಿದೆ. ಅವರ ಈ ಹಿನ್ನಡೆಗೆ ತೂಕ ಬದಲಾವಣೆಯೂ ಕಾರಣವಾಗಿರಬಹುದೆಂಬ ಚರ್ಚೆಗಳು ಇದೀಗ ಶುರುವಾಗಿದೆ.
ಹೌದು, ವಿನೇಶ್ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಆಡುತ್ತಿರುವುದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ ರಿಯೋ ಒಲಿಂಪಿಕ್ಸ್ನಲ್ಲಿ 48 ಕೆಜಿ, ಟೋಕಿಯೊದಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ನಡೆದಿದ್ದ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿಯೂ ವಿನೇಶ್ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿದ್ದರು. ಆದರೆ, 50 ಕೆಜಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಅವರು ಕಣಕ್ಕಿಳಿದ್ದರು. ಇದೀಗ ತೂಕ ಬದಲಿಸಿದ್ದೇ ಅವರ ಈ ಹಿನ್ನಡೆಗೆ ಕಾರಣ ಎಂದರೂ ತಪ್ಪಾಗಲಾರದು.
ಒಲಿಂಪಿಕ್ಸ್ ಸ್ಪರ್ಧೆಗೂ ಮುನ್ನ ವಿನೇಶ್ ಅವರ ತೂಕ 2 ಕೆಜಿ ಹೆಚ್ಚಳವಾಗಿತ್ತು. ಇದನ್ನು ಕಡಿಮೆ ಮಾಡಲೆಂದೆ ಅವರು ನಿದ್ದೆ, ಆಹಾರ ಬಿಟ್ಟು ಅತ್ಯಂತ ಕಠಿಣ ವ್ಯಾಯಾಮ ನಡೆಸಿ ಸುಮಾರು 1.90 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ 100 ಗ್ರಾಂ ಹೆಚ್ಚಳದಿಂದ ಇದೀಗ ಅವರ ಒಲಿಂಪಿಕ್ಸ್ ಪದಕದ ಕನಸು ನುಚ್ಚುನೂರಾಗಿದೆ. ಒಂದೊಮ್ಮೆ ಅವರು ತಮ್ಮ ಈ ಹಿಂದಿನಂತೆ 53 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ ಈ ಹಿನ್ನಡೆ ಉಂಟಾಗುತ್ತಿರಲಿಲ್ಲ.
ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಾಂತ್ವನ
ಅನರ್ಹವಾಗಿ ಆಘಾತದಲ್ಲಿರುವ ವಿನೇಶ್ಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಾಂತ್ವನ ಹೇಳಿದ್ದಾರೆ. “ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನಿಮಗೆ ಮಾತ್ರವಲ್ಲದೆ ಇಡೀ ದೇಶವಾಸಿಗಳಿಗೆ ನೋವು ತಂದಿದೆ. ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ. ಬಲವಾಗಿ ಹಿಂತಿರುಗಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಜತೆತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಮತ್ತೊಮ್ಮೆ ಈ ನಿರ್ಧಾರವನ್ನು ಪರಿಶೀಲಿಸುವಂತೆ ಮೋದಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ Vinesh Phogat: ರಾತ್ರಿಯಿಡೀ ಪ್ರಯತ್ನಪಟ್ಟರೂ ಇಳಿಯದೆ ವಿನೇಶ್ ಕನಸು ನುಚ್ಚುನೂರು ಮಾಡಿದ ಆ 100 ಗ್ರಾಂ!
ಆಸ್ಪತ್ರೆಗೆ ದಾಖಲು
ಫೈನಲ್‌ಗೆ ಪ್ರವೇಶಿಸಿದ ಬಳಿಕ ತಮ್ಮ ತೂಕ ಇಳಿಸಿಕೊಳ್ಳಲು ರಾತ್ರಿಪೂರ್ತಿ ವರ್ಕ್‌ಔಟ್ ಮಾಡಿದ್ದ ವಿನೇಶ್, ಇಂದು ನಿರ್ಜಲೀಕರಣದಿಂದಾಗಿ ಅಸ್ವಸ್ತಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ವಿನೇಶ್ ಫೋಗಟ್ ಅವರನ್ನು ಅನರ್ಹ ಮಾಡಿದ ಕುರಿತು ಭಾರತದ ನಿಯೋಗದಿಂದ ದೂರ ದಾಖಲಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ವಿನೇಶ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು, ಆದರೆ ಅವರ ತೂಕ ನಿಗದಿತ ಮಿತಿಗಿಂತ ಹೆಚ್ಚಿರುವುದರಿಂದ ಅವರನ್ನು ಕುಸ್ತಿ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ನಾವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ದೂರು ದಾಖಲಿಸಿದ್ದೇವೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.