ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡು ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್(Vinesh Phogat) ಶನಿವಾರ ಭಾರತಕ್ಕೆ ಆಗಮಿಸಿದ್ದರು. ನವದೆಹಲಿಗೆ ಬಂದಿಳಿದಿದ್ದ ವಿನೇಶ್ಗೆ ಭರ್ಜರಿ ಸ್ವಾಗತ ಕೋರಲಾಗಿತ್ತು. ಕಾಂಗ್ರೆಸ್ ನಾಯಕ ದೀಪೇಂದರ್ ಹೂಡಾ, ರೈತನಾಯಕರು, ಬಜರಂಗ್ ಪೂನಿಯ, ಸಾಕ್ಷಿ ಮಲಿಕ್ ಸೇರಿ ಸೇರಿ ನೂರಾರು ಮಂದಿ ನೆರೆದಿದ್ದರು. ವಿಮಾನ ನಿಲ್ದಾಣದಿಂದ ವಿನೇಶ್ ತವರಾದ ಹರ್ಯಾಣದ ಬಲಾಲಿಗೆ ಕಾರ್ನಲ್ಲಿ ಮೆರವಣಿ ಮಾಡುವ ಮೂಲಕ ಕರೆದೊಯ್ಯಲಾಗಿತ್ತು. ಇದೀಗ ತವರಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿನೇಶ್ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿದ ಘಟನೆ ನಡೆದಿದೆ. ಈ ವಿಡಿಯೊ ಇದೀಗ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ವೇದಿಕೆಯಲ್ಲಿ ಆಸೀನರಾಗಿದ್ದ ವಿನೇಶ್ ಏಕಾಏಕಿ ಮೂರ್ಛೆ ಹೋಗಿ ತಾವು ಕುಳಿತಿದ್ದ ಕುರ್ಚಿಗೆ ಒರಗಿಕೊಂಡು ಮಲಗಿರುವುದನ್ನು ಕಾಣಬಹುದಾಗಿದೆ. ಪಕ್ಕದಲ್ಲೇ ಇದ್ದ ಭಜರಂಗ್ ಪೂನಿಯಾ ವಿನೇಶ್ಗೆ ನೀರು ಕೊಟ್ಟು ಉಪಚರಿಸಿದ್ದಾರೆ. ಅವರು ಶೀಘ್ರದಲಲ್ಲೇ ಚೇತರಿಕೆ ಕಾಣಲಿ ಎಂದು ಜನರು ಆಶಿಸಿದ್ದಾರೆ.
ಫೈನಲ್ ಪಂದ್ಯಕ್ಕೂ ಮುನ್ನ ಹೆಚ್ಚಳವಾಗಿದ್ದ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್ ನಡೆಸಿ, ಸ್ಕಿಪ್ಪಿಂಗ್ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ, ದೇಹದಿಂದ ರಕ್ತವನ್ನು ಕೂಡ ತೆಗಿದಿದ್ದರು. ರಕ್ತ ತೆಗೆದ ಪರಿಣಾಮ ಅಸ್ವಸ್ಥರಾಗಿ ಆಸ್ಪತ್ರೆ ಕೂಡ ಸೇರಿದ್ದರು. ಈ ಅಸ್ವಸ್ಥದಿಂದ ಅವರು ಇನ್ನೂ ಸರಿಯಾಗಿ ಚೇತರಿಕೊಂಡಂತೆ ಕಾಣುತ್ತಿಲ್ಲ. ಭಾರತಕ್ಕೆ ಬಂದ ವೇಳೆ ಅವರು ಬಿಡುವಿಲ್ಲದೆ ಸರಿ ಸುಮಾರು 20 ಗಂಟೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಮೂರ್ಛೆ ಹೋದಂತೆ ಕಾಣುತ್ತಿದೆ. ಕೆಲ ದಿನಗಳು ವಿಶ್ರಾಂತಿ ಪಡೆದು ಆ ಬಳಿಕ ಸನ್ಮಾನ ಸಮಾರಂಭಕ್ಕೆ ಹೋದರೆ ಉತ್ತಮ ಎಂದು ಕೆಲ ನೆಟ್ಟಿಗರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ Vinesh Phogat: ತವರಿಗೆ ಮರಳಿದ ವಿನೇಶ್ ಫೋಗಟ್ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು
ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವಿನೇಶ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.
ಅನರ್ಹಗೊಂಡ ಬೇಸರದಲ್ಲೇ ವಿನೇಶ್ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿನೇಶ್ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್) ತಿರಸ್ಕರಿಸಿತ್ತು. ಹೋಗಾಗಿ ಕೊನೆಯ ಆಸೆ ಕೂಡ ಕಮರಿಹೋಗಿದೆ. ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಮುಷ್ಕರದಲ್ಲಿ ವಿನೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.