ನವದೆಹಲಿ: ನಿಗದಿತ ತೂಕಕ್ಕಿಂತ ಅಧಿಕ ತೂಕ ಹೊಂದಿದ್ದ ಕಾರಣದಿಂದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ( ಅನರ್ಹಗೊಂಡು ಪದಕ ಕಳೆದುಕೊಂಡ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ‘ಭಾರತ ರತ್ನ’ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸುವಂತೆ ಒತ್ತಾಯಿಸಿದ್ದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ(Abhishek Banerjee) ಅವರಿಗೆ ನೆಟ್ಟಿಗರು ಸವಾಲೊಂದನ್ನು ಹಾಕಿದ್ದಾರೆ. ಭಾರತ ರತ್ನ ನೀಡುವ ಮುನ್ನ ವಿನೇಶ್ ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದಾರೆ.
ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ವಿನೇಶ್, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನೇನು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದ ಅವರನ್ನು ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚಿರುವ ಕಾರಣ ಫೈನಲ್ನಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಅವರು ಐತಿಹಾಸಿಕ ಪದಕವೊಂದನ್ನು ಗೆಲ್ಲುವ ಅವಕಾಶ ಕಳೆದುಕೊಂಡರು. ಪದಕ ಗೆಲ್ಲದಿದ್ದರೂ ಕೂಡ ವಿನೇಶ್ ಸಾಧನೆಗೆ ಇಡೀ ದೇಶವಾಸಿಗಳು ಮೆಚ್ಚುಗೆ ಸೂಚಿಸಿದ್ದರು.
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡ ವಿನೇಶ್ ಸಾಧನೆಯನ್ನು ಕೊಂಡಾಡಿದ್ದರು. ಜತೆಗೆ ವಿನೇಶ್ ಅವರ ಅಸಾಮಾನ್ಯ ಪ್ರದರ್ಶನವನ್ನು ಗುರುತಿಸಿ ಅವರಿಗೆ ಭಾರತ ರತ್ನ ಅಥವಾ ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸ್ಥಾನ ನೀಡಿ ಗೌರವಿಸಲು ಸರ್ಕಾರ ಹಾಗೂ ವಿಪಕ್ಷಗಳು ಒಮ್ಮತವನ್ನು ಕಂಡುಕೊಳ್ಳಬೇಕು. ಅವರು ಎದುರಿಸಿದ ಕಷ್ಟಗಳಿಗೆ ನಾವು ಕನಿಷ್ಠ ಪಕ್ಷ ಇಷ್ಟಾದರೂ ಮಾಡಬೇಕು ಎಂದು ಒತ್ತಾಯಿಸಿದ್ದರು.
ಅಭಿಷೇಕ್ ಬ್ಯಾನರ್ಜಿ ಅವರ ಈ ಹೇಳಿಕೆ ಕಂಡು ಅನೇಕ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ಭಾರತ ರತ್ನವನ್ನು ಹೀಗೆ ಎಲ್ಲರಿಗೂ ನೀಡುತ್ತಾ ಹೋದರೆ ಆ ಪ್ರಶಸ್ತಿಗೆ ಯಾವುದೇ ಬೆಲೆ ಇರುವುದಿಲ್ಲ. ಅವರ ಸಾಧನೆ ಮೇಲೆ ನಿಮಗ ಅಪಾರ ಗೌರವ ಇದ್ದರೆ ನೀವು ಅವರನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡಿ ಎಂದು ಸವಾಲ್ ಹಾಕಿದ್ದಾರೆ. ಇನ್ನು ಕೆಲವರು ನೋಬೆಲ್ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಎಂದು ಹೇಳಿದ್ದಾರೆ. ಹೀಗೆ ನಾನಾ ರೀತಿಯ ಕಮೆಂಟ್ ಮೂಲಕ ಅಭಿಷೇಕ್ ಬ್ಯಾನರ್ಜಿ ಅವರನ್ನು ರೋಸ್ಟ್ ಮಾಡಿದ್ದಾರೆ.
ಒಲಿಂಪಿಕ್ ಅನರ್ಹತೆಯ ವಿರುದ್ಧ ವಿನೇಶ್ ಫೋಗಟ್ ಅವರು ಸಲ್ಲಿದ್ದ ಮನವಿಯನ್ನು ಗುರುವಾರ (ಆಗಸ್ಟ್ 8) ಆರ್ಬಿಟ್ರೇಷನ್ ನ್ಯಾಯಾಲಯವು (CAS) ವಿನೇಶ್ ಮನವಿಯನ್ನು ಸ್ವೀಕರಿಸಿತ್ತು. ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ವಿಚಾರಣೆಗೆ ವಕೀಲರನ್ನು ನೇಮಿಸುವಂತೆ ಕೇಳಿದೆ.
ವಿನೇಶ್ ಪೋಗಟ್ ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸಮ್ಮಾನಿಸಲಾಗುವುದು ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಹೇಳಿದ್ದಾರೆ. ಒಲಿಂಪಿಕ್ ಬೆಳ್ಳಿ ಗೆದ್ದವರಿಗೆ ನೀಡುವಷ್ಟು ಬಹುಮಾನವನ್ನು ವಿನೇಶ್ ಅವರಿಗೆ ನೀಡಲಾಗುವುದು. ಸರಕಾರದ ಕ್ರೀಡಾ ನೀತಿಯಂತೆ ಒಲಿಂಪಿಕ್ ಚಿನ್ನ ಗೆದ್ದವರಿಗೆ ಸರಕಾರ ಆರು ಕೋಟಿ ರೂ. ಬೆಳ್ಳಿಗೆ ನಾಲ್ಕು ಕೋಟಿ ರೂ. ಮತ್ತು ಕಂಚು ಪದಕ ವಿಜೇತರಿಗೆ 2.5 ಕೋಟಿ ರೂ. ನೀಡಲಿದೆ.
ನಮ್ಮ ಧೈರ್ಯಶಾಲಿ ಪುತ್ರಿ ವಿನೇಶ್ ಅದ್ಭುತ ನಿರ್ವಹಣೆ ನೀಡಿ ಫೈನಲಿಗೇರಿದ್ದರು. ಆದರೆ ಕೆಲವೊಂದು ಅನಿವಾರ್ಯ ಕಾರಣಗಳಿಂದಾಗಿ ಫೈನಲಿನಲ್ಲಿ ಸ್ಪರ್ದಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ನಮಗೆಲ್ಲ ಚಾಂಪಿಯನ್ ಕುಸ್ತಿಪಟು ಆಗಿದ್ದಾರೆ. ಈ ಕಾರಣಕ್ಕಾಗಿ ನಮ್ಮ ಸರಕಾರವು ಅವರನ್ನು ಪದಕ ಗೆದ್ದವರ ರೀತಿಯಲ್ಲಿ ಸ್ವಾಗತ ಮತ್ತು ಸಮ್ಮಾನಿಸಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.