Site icon Vistara News

ಖೇಲ್‌ರತ್ನ, ಅರ್ಜುನ ಪ್ರಶಸ್ತಿ ವಾಪಸ್​ ಮಾಡುವ ನಿರ್ಧಾರ ಘೋಷಿಸಿ ಮೋದಿಗೆ ಪತ್ರ ಬರೆದ ವಿನೇಶ್‌ ಫೋಗಟ್

Vinesh Phogat

ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಕುಸ್ತಿಪಟು ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವ ಘೋಷಣೆ ಮಾಡಿದ್ದರು. ಇದೀಗ ಈ ಸಾಲಿಗೆ ವಿನೇಶ್ ಫೋಗಟ್(Vinesh Phogat) ಕೂಡ ಸೇರ್ಪಡೆಗೊಂಡಿದ್ದಾರೆ. ತಾವು ಪಡೆದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ(Khel Ratna) ಮತ್ತು ಅರ್ಜುನ್(Arjuna ) ಪ್ರಶಸ್ತಿಯನ್ನು ಹಿಂದಿರುಗಿಸಲಿದ್ದೇನೆ ಎಂದು ಮಂಗಳವಾರ ಘೋಷಿಸಿದ್ದಾರೆ.

ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿರುವುದಾಗಿ ವಿನೇಶ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ನನ್ನನ್ನು ಈ ಪರಿಸ್ಥಿತಿಗೆ ತಂದ ಸರ್ವಶಕ್ತನಿಗೆ ತುಂಬಾ ಧನ್ಯವಾದಗಳು ಎಂದು ಅವರು ಟ್ವೀಟ್‌ ಮಾಡಿ ಪತ್ರವನ್ನು ಹಂಚಿಕೊಂಡಿದ್ದಾರೆ.

“ದೇಶಕ್ಕೆ ಒಲಿಂಪಿಕ್​ ಪದಕಗಳನ್ನು ಗೆದ್ದ ಆಟಗಾರರು ಇದನೆಲ್ಲಾ ಯಾಕೆ ಮಾಡುತ್ತಿದ್ದಾರೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ. ನೀವು ದೇಶದ ಮುಖ್ಯಸ್ಥರು, ಆದ್ದರಿಂದ ಈ ವಿಷಯ ನಿಮಗೆ ತಲುಪಿರಬೇಕು. ನಾನು ನಿಮ್ಮ ಮನೆಯ ಮಗಳು ವಿನೇಶ್ ಫೋಗಟ್, ಕಳೆದ ಒಂದು ವರ್ಷದಿಂದ ನಾನು ಅನುಭವಿಸುತ್ತಿರುವ ನೋವನ್ನು ನಿಮಗೆ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ” ಎಂದು ವಿನೇಶ್ ಅವರು ಮೋದಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ ಕುಸ್ತಿ ಫೆಡರೇಶನ್ ಅಮಾನತು ಮಾಡಿದರೂ ಹೊಸ ಕ್ಯಾತೆ ತೆಗೆದ ಸಾಕ್ಷಿ ಮಲಿಕ್

ನಮ್ಮ ಕಷ್ಟ ಇನ್ನೂ ನಿಮಗೆ ಅರ್ಥವಾಗಿಲ್ಲ

“ಸರ್ ನಿಮ್ಮನ್ನು ಭೇಟಿಯಾದಾಗ ನಮ್ಮ ಎಲ್ಲ ಕಷ್ಟಗಳನ್ನು ಹೇಳಿಕೊಂಡಿದ್ದೆ. ನ್ಯಾಯಕ್ಕಾಗಿ ಒಂದು ವರ್ಷದಿಂದ ಬೀದಿಗಿಳಿದಿದ್ದೇವೆ. ಯಾರೂ ನಮ್ಮನ್ನು ನೋಡಿಕೊಳ್ಳುತ್ತಿಲ್ಲ. ನಮ್ಮ ಪದಕಗಳು ಮತ್ತು ಪ್ರಶಸ್ತಿಗಳು ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತಿದೆ. ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಾಗ ಇಡೀ ದೇಶವೇ ನಮ್ಮನ್ನು ಹೆಮ್ಮೆಯಿಂದ ಪರಿಗಣಿಸಿತ್ತು. ಈಗ ನಾವು ನಮ್ಮ ನ್ಯಾಯಕ್ಕಾಗಿ ಧ್ವನಿ ಎತ್ತಿದ್ದೇವೆ, ನಮ್ಮನ್ನು ದೇಶದ್ರೋಹಿ ಎಂದು ಕರೆಯಲಾಗುತ್ತಿದೆ. ಪದಕ ಪಡೆದ ಬಳಿಕ ನಮ್ಮನ್ನು ಕಸದಂತೆ ಕಾಣುತ್ತಿರುವಾಗ ನನಗೆ ಈ ಪದಕ ಇದರೆಷ್ಟು ಬಿಟ್ಟರೆಷ್ಟು, ಎಲ್ಲ ಘಟನೆಗಳನ್ನು ಮರೆಯಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಆದರೆ ಅದು ಅಷ್ಟು ಸುಲಭವಲ್ಲ. ನಮ್ಮ ಕಷ್ಟ ನಿಮಗೆ ಇನ್ನೂ ಅರ್ಥವಾಗಿಲ್ಲ” ಎಂದು ವಿನೇಶ್​ ಅವರು ಈ ಪತ್ರದಲ್ಲಿ ಬರೆದಿದ್ದಾರೆ.

“ನಾನು ಪಡೆದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿ ಈಗ ನನ್ನ ಜೀವನದಲ್ಲಿ ಇವುಗಳಿಗೆ ಯಾವುದೇ ಅರ್ಥವಿಲ್ಲ. ಪ್ರತಿಯೊಬ್ಬ ಮಹಿಳೆ ಗೌರವದಿಂದ ಬದುಕಲು ಬಯಸುತ್ತಾಳೆ. ಆದ್ದರಿಂದ, ಪ್ರಧಾನಿ ಸರ್, ನನ್ನ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ನಿಮಗೆ ಹಿಂದಿರುಗಿಸಲು ನಾನು ಬಯಸುತ್ತೇನೆ” ಎಂದು ವಿನೇಶ್​ ಹೇಳಿದ್ದಾರೆ. ಅವರಿಗೆ 2016 ರಲ್ಲಿ ಅರ್ಜುನ್ ಪ್ರಶಸ್ತಿ, 2020 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Exit mobile version