Site icon Vistara News

Vinesh Phogat: ಇಂದು ರಾತ್ರಿ 9.30ಕ್ಕೆ ವಿನೇಶ್ ಫೋಗಟ್‌ ಬೆಳ್ಳಿ​ ಪದಕದ ಭವಿಷ್ಯ ನಿರ್ಧಾರ

Vinesh Phogat

Vinesh Phogat : Vinesh Phogat appeal hearing Decision on silver medal before 9.30 pm today

ಪ್ಯಾರಿಸ್​: ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ(Paris Olympics 2024) ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಫೋಗಟ್‌(Vinesh Phogat) ತನಗೆ ಜಂಟಿ ಬೆಳ್ಳಿ ಪದಕ ನೀಡಬೇಕೆಂದು ಸಲ್ಲಿದ್ದ ಮನವಿಯ ವಿಚಾರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS​) ಶುಕ್ರವಾರವೇ ಮುಕ್ತಾಯಗೊಳಿಸಿದೆ. ಇದೀಗ ಅಂತಿಮ ತೀರ್ಪು ಇಂದು ರಾತ್ರಿ 9.30ಕ್ಕೆ ಪ್ರಕಟಗೊಳ್ಳಲಿದೆ. ತಮ್ಮ ಪರ ಸಕಾರತ್ಮಕ ತೀರ್ಪು ವಿಶ್ವಾಸವನ್ನು ಭಾರತೀಯ ಒಲಿಂಪಿಕ್ಸ್​ ಸಂಸ್ಥೆ(ಐಒಎ) ವ್ಯಕ್ತಪಡಿಸಿದೆ. ಹರೀಶ್ ಸಾಳ್ವೆ ಅವರು ಸತತ ಒಂದು ಗಂಟೆಗಳ ಕಾಲ ವಾದ ಮಂಡಿಸಿದ್ದರು. ವಿನೇಶ್​ಗೆ ಪದಕ ಒಲಿಯಲಿ ಎಂದು ಇಡೀ ದೇಶವೇ ಪ್ರಾರ್ಥಿಸುತ್ತಿದೆ.

ಮಂಗಳವಾರ ನಡೆದ ಅರ್ಹತಾ ಸುತ್ತಿಗೂ ಮುನ್ನ ವಿನೇಶ್‌ ಅವರ ತೂಕವನ್ನು ಲೆಕ್ಕ ಮಾಡಲಾಗಿತ್ತು. ಈ ವೇಳೆ ಅವರು 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ಪದಕ ನೀಡಲು ಸಾಧ್ಯವಿಲ್ಲ ಎಂದ ಥಾಮಸ್ ಬಾಕ್


ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್​​ ಅವರು ಶುಕ್ರವಾರ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ. ಪ್ಯಾರಿಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.

ಅಂತಾರಾಷ್ಟ್ರೀಯ ಒಕ್ಕೂಟದ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫೆಡರೇಶನ್, ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಕುಸ್ತಿಪಟು ನಿರ್ದಿಷ್ಟ ತಿಳುವಳಿಕೆಯನ್ನು ಹೊಂದಿರಬೇಕು. ಮಾನವೀಯತೆ ಸರಿಯಾಗಿರಬಹುದು. ಆದರೆ, ಒಕ್ಕೂಟ ಅಥವಾ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕಾದಾಗ ಎಲ್ಲರವನ್ನೂ ಗೌರವಿಸಬೇಕಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಪದಕ ನೀಡುವಂತೆ ಸಚಿನ್​ ಒತ್ತಾಯ

ಸಚಿನ್ ತೆಂಡೂಲ್ಕರ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿನೇಶ್​ಗೆ ಬೆಂಬಲ ನೀಡಿ ಹೇಳಿಕೆ ಪೋಸ್ಟ್ ಮಾಡಿದ್ದಾರೆ. ವಿನೇಶ್ ಫೈನಲ್​​​ಗೆ ನ್ಯಾಯಯುತವಾಗಿ ಅರ್ಹತೆ ಪಡೆದಿದ್ದಾರೆ. ಹೀಗಾಗಿ ಅರ್ಹ ಪದಕವನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಾಮರ್ಥ್ಯ ವರ್ಧನೆಯ ಔಷಧಿಗಳ ಬಳಕೆಯಂತಹ ದುಷ್ಕೃತ್ಯಗಳಾಗಿದ್ದರೆ ಅನರ್ಹತೆ ಅರ್ಥಪೂರ್ಣವಾಗುತ್ತಿತ್ತು ಎಂದು ಕ್ರಿಕೆಟ್ ದಂತಕಥೆ ಹೇಳಿದ್ದಾರೆ. ವಿನೇಶ್ ಗೆ ಅರ್ಹ ಮನ್ನಣೆ ಸಿಗುತ್ತದೆ ಎಂದು ಆಶಿಸುವ ಮೂಲಕ ತೆಂಡೂಲ್ಕರ್ ತಮ್ಮ ಹೇಳಿಕೆ ಕೊನೆಗೊಳಿಸಿದರು.

ಪ್ರತಿಯೊಂದು ಕ್ರೀಡೆಗೂ ನಿಯಮಗಳಿವೆ. ಆ ನಿಯಮಗಳನ್ನು ಸಂದರ್ಭಕ್ಕೆ ಅನುಗುಣವಾಗಿ ನೋಡಬೇಕು. ನಿಯಮಗಳನ್ನು ಕಾಲಕಾಲಕ್ಕೆ ಮರುಪರಿಶೀಲಿಸಬಹುದು. ವಿನೇಶ್ ಫೋಗಟ್ ಫೈನಲ್​ಗೆ ಅರ್ಹತೆ ಪಡೆದಿದ್ದರು. ಬಳಿಕ ಹೆಚ್ಚು ತೂಕದ ಆಧಾರದ ಮೇಲೆ ಅವರನ್ನು ಅನರ್ಹಗೊಳಿಸಲಾಯಿತು. ಅವರಿಂದ ಬೆಳ್ಳಿ ಪದಕವನ್ನು ಕಸಿದುಕೊಳ್ಳುವುದು ಕ್ರೀಡಾ ಪ್ರಜ್ಞೆಯನ್ನು ಉಲ್ಲಂಘನೆ ಎಂದು ಹೇಳಿದರು.

Exit mobile version