Site icon Vistara News

Vinesh Phogat: ಖೇಲ್ ರತ್ನ ಪ್ರಶಸ್ತಿಯನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದ ವಿನೇಶ್ ಫೋಗಟ್​ಗೆ ಒಲಿದ ಒಲಿಂಪಿಕ್ಸ್​ ಟಿಕೆಟ್​

Vinesh Phogat

ನವದೆಹಲಿ: ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಚಾಂಪಿಯನ್ ವಿನೇಶ್ ಫೋಗಟ್(Vinesh Phogat) ಅವರು ಏಷ್ಯನ್ ಒಲಿಂಪಿಕ್ ಅರ್ಹತಾ ಸುತ್ತಿನ ಮಹಿಳೆಯರ 50 ಕೆಜಿ ಸ್ಪರ್ಧೆಯಲ್ಲಿ ಸೆಮಿಫೈನಲ್‌ನಲ್ಲಿ ಕಜಕಿಸ್ತಾನ್‌ನ ಲಾರಾ ಗ್ಯಾನಿಕಿಜಿ ಅವರನ್ನು 10-0 ಅಂತರದಿಂದ ಸೋಲಿಸುವ ಮೂಲಕ ಪ್ಯಾರಿಸ್​ ಒಲಿಂಪಿಕ್ಸ್​ಗೆ(Paris Olympics) ಅರ್ಹತೆ ಪಡೆದಿದ್ದಾರೆ. ಅತ್ಯಂತ ಶ್ರೇಷ್ಠ ಪ್ರದರ್ಶನ ತೋರಿದ ವಿನೇಶ್ ಎದುರಾಳಿಯನ್ನು ಕೇವಲ 4:18 ನಿಮಿಷದಲ್ಲಿ ಮಣಿಸಿದರು. 57 ಕೆಜಿ ವಿಭಾಗದಲ್ಲಿ ಅಂಶು ಮಲಿಕ್‌ ಕೂಡ ಒಲಿಂಪಿಕ್ಸ್​ಗೆ(Paris Olympics) ಅರ್ಹತೆ ಪಡೆದರು. ಇವರು ಉಜ್ಬೆಕ್ ಗ್ರಾಪ್ಲರ್ ಅವರನ್ನು 10-0 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದರು.

ವಿನೇಶ್ ಫೋಗಟ್ ಅವರು ಕಳೆದ ವರ್ಷ, ಆರು ಬಾರಿ ಬಿಜೆಪಿ ಸಂಸದರಾಗಿದ್ದ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಪ್ರಮುಖ ರುವಾರಿಯೂ ಕೂಡ ಇವರೇ ಆಗಿದ್ದರು. ವಿಶ್ವಾದ್ಯಂತ ಈ ಪ್ರತಿಭಟನೆ ಭಾರೀ ಸುದ್ದು ಮಾಡಿತ್ತು.

ಬ್ರಿಜ್​ ಭೂಷಣ್​ ಅವರ ಆಪ್ತ ಸಂಜಯ್​ ಸಿಂಗ್​ ಅವರು ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದುದನ್ನು ಖಂಡಿಸಿ ತಾವು ಪಡೆದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ(Khel Ratna) ಮತ್ತು ಅರ್ಜುನ್(Arjuna ) ಪ್ರಶಸ್ತಿಯನ್ನು ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದ(Kartavya Path) ಪಾದಚಾರಿ ಮಾರ್ಗದಲ್ಲಿಟ್ಟು ತೊರೆದಿದ್ದರು. ಇದು ಮಾತ್ರವಲ್ಲದೆ ಪ್ರಧಾನಿ ಮೋದಿಗೆ ಪತ್ರ ಬರೆದು ನನ್ನನ್ನು ಈ ಪರಿಸ್ಥಿತಿಗೆ ತಂದ ಸರ್ವಶಕ್ತನಿಗೆ ತುಂಬಾ ಧನ್ಯವಾದಗಳು ಎಂದು ಹೇಳಿದ್ದರು.

ಇದನ್ನೂ ಓದಿ Paris Olympics: ಟ್ರ್ಯಾಕ್‌-ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ 41.6 ಲಕ್ಷ ಬಹುಮಾನ!; ಐತಿಹಾಸಿಕ ನಿರ್ಧಾರ ಪ್ರಕಟಿಸಿದ ಡಬ್ಲ್ಯುಎ

ಕಳೆದ ವಾರವಷ್ಟೇ ಭಾರತ ಕುಸ್ತಿ ಫೆಡರೇಷನ್ (WFI) ತನ್ನ ವಿರುದ್ಧ ಡೋಪಿಂಗ್ ಪಿತೂರಿ ಮಾಡುವ ಸಾಧ್ಯತೆಗಳಿವೆ ಎಂದು ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಗಂಭೀರ ಆರೋಪ ಮಾಡಿದ್ದರು. “ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ನನ್ನ ಭಾಗವಹಿಸುವಿಕೆ ತಡೆಯಲು ಡಬ್ಲ್ಯುಎಫ್‌ಐ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಡೋಪಿಂಗ್ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಭಯವಿದೆ. ನಾನು ಅಭ್ಯಾಸದ ವೇಳೆ ಸೇವಿಸುವ ನೀರಿನಲ್ಲಿ ಡೋಪಿಂಗ್ ಅಂಶವುಳ್ಳ ಕೆಲ ರಾಸಾಯನಿಕವನ್ನು ಬರೆಸಿರುವ ಅನುಮಾನವಿದೆ” ಎಂದು ವಿನೇಶ್​ ಫೋಗಟ್‌ ಆರೋಪಿಸಿದ್ದರು. ಇದೀಗ ಪ್ಯಾರಿಸ್​ ಒಲಿಂಪಿಕ್ಸ್ ಟಿಕೆಟ್​ ಗಿಟ್ಟಿಸಿಕೊಂಡಿದ್ದಾರೆ. ಒಲಿಂಪಿಕ್ಸ್​ ಜುಲೈ 26 ರಿಂದ ಆಗಸ್ಟ್‌ 11ರವರೆಗೆ ನಡೆಯಲಿದೆ.

ಇತ್ತೀಚೆಗೆ ವಿನೇಶ್ ಫೋಗಟ್(Vinesh Phogat) ಸೀನಿಯರ್‌ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. 55 ಕೆಜಿ ವಿಭಾಗದಲ್ಲಿ ವಿನೇಶ್​ ಅವರು ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ತಂಡದ ಪರ 29 ವರ್ಷದ ವಿನೇಶ್​ ಕಣಕ್ಕಿಳಿದಿದ್ದರು.

Exit mobile version