Site icon Vistara News

Vinesh Phogat: ಪ್ಯಾರಿಸ್​ನಲ್ಲಿ ಮೊದಲ ಚಿನ್ನ ಗೆಲ್ಲಲಿ ವಿನೇಶ್​ ಫೋಗಟ್; ಇಂದು ಫೈನಲ್​

Vinesh Phogat

Vinesh Phogat: Vinesh Phogat vs Sarah Hildebrandt final at Paris 2024 Olympics wrestling

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ(paris olympics) ಫೈನಲ್​ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿರುವ ಭಾರತದ ತಾರಾ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್(Vinesh Phogat)​ ಅವರು ಇಂದು(ಬುಧವಾರ) ರಾತ್ರಿ ನಡೆಯುವ ಫೈನಲ್​ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಅಖಾಡಕ್ಕೆ ಇಳಿಯಲಿದ್ದಾರೆ. ಫೈನಲ್​ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಅಮೆರಿಕದ ಸೆರಾ ಹಿಲ್ದಿಬ್ರೇಟ್‌ ಸವಾಲು ಎದುರಿಸಲಿದ್ದಾರೆ. ಪಂದ್ಯ ರಾತ್ರಿ 11. 23ಕ್ಕೆ ನಡೆಯಲಿದೆ.

ಮಂಗಳವಾರ ನಡೆದಿದ್ದ ಪ್ರೀ ಕ್ವಾರ್ಟರ್​, ಕ್ವಾರ್ಟರ್​ ಫೈನಲ್​ ಮತ್ತು ಸೆಮಿಫೈನಲ್​ ಪಂದ್ಯದಲ್ಲಿ ವಿನೇಶ್ ಅವರು ತನಗಿಂತ ಮೇಲಿನ ಶ್ರೇಯಾಂಕದ, ಅದರಲ್ಲೂ ಪ್ರೀ ಕ್ವಾರ್ಟರ್​ನಲ್ಲಿ 4 ಬಾರಿಯ ವಿಶ್ವ ಚಾಂಪಿಯನ್​ ಹಾಗೂ ಸೋಲನ್ನೇ ಕಾಣದ ಕುಸ್ತಿಪಟುವಿಗೆ ಸೋಲುಣಿಸಿದ್ದು ನಿಜಕ್ಕೂ ಸಣ್ಣ ಸಾಧನೆಯಲ್ಲ. 8 ಗಂಟೆಯ ಅಂತರದಲ್ಲಿ ಮೂರು ಗೆಲುವು ಸಾಧಿಸಿ ಅವರು ಫೈನಲ್​ ಪ್ರವೇಶಿಸಿದ್ದರು. ಇಡೀ ದಿನದಲ್ಲಿ ಆಡಿದ ಮೂರು ಬೌಟ್‌ಗಳಲ್ಲಿಯೂ ವಿನೇಶ್​ ಪಾರಮ್ಯ ಮೆರೆದಿದ್ದು ವಿಶೇಷ.

ಒಲಿಂಪಿಕ್ಸ್​ನಲ್ಲಿ ಫೈನಲ್​ಗೇರಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿನೇಶ್​, ಪ್ಯಾರಿಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಇರಾದೆಯೊಂದಿಗೆ ಇಂದು ಕಣಕ್ಕಿಳಿಯಲಿದ್ದಾರೆ. ಸದ್ಯ ಮೂರು ಕಂಚಿನ ಪದಕ ಗೆದ್ದಿರುವ ಭಾರತ, ನಾಲ್ಕನೆ ಪದಕದ ಕಾತರದಲ್ಲಿದೆ. ಹರಿಯಾಣದ 29 ವರ್ಷದ ವಿನೇಶ್​ ಮಂಗಳವಾರ ರಾತ್ರಿ ನಡೆದಿದ್ದ ಸೆಮಿಫೈನಲ್​ ಪಂದ್ಯದಲ್ಲಿ ಕ್ಯೂಬಾದ ಯಸ್ನಿಲಿಸ್​ ಗುಜ್ಮನ್​ ಲೋಪೆಜ್​ ವಿರುದ್ಧ 5-0 ಅಂಕಗಳಿಂದ ಸುಲಭ ಗೆಲುವು ದಾಖಲಿಸಿ ಫೈನಲ್​ಗೆ ಮುನ್ನಡೆದಿದ್ದರು.

ಮಹಿಳಾ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿಯುವ 2ನೇ ಪದಕ ಇದಾಗಿದೆ. ಇದಕ್ಕೂ ಮುನ್ನ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್ ಅವರು ಕಂಚು ಗೆದ್ದಿದ್ದರು. ಇದೀಗ ವಿನೇಶ್​ ಐತಿಹಾಸಿಕ ಪದಕ ಗೆಲ್ಲಲು ಸಜ್ಜಾಗಿದ್ದಾರೆ. ವಿನೇಶ್​ಗೆ ಇದು ಮೂರನೇ ಒಲಿಂಪಿಕ್ಸ್​ ಕೂಟವಾಗಿದೆ. 2016ರ ರಿಯೊ ಒಲಿಂಪಿಕ್ಸ್​ನಲ್ಲಿ ಮಂಡಿನೋವಿನಿಂದ ಸಮಸ್ಯೆಯಾಗಿತ್ತು. 2021ರ ಟೋಕಿಯೊದಲ್ಲಿ ಅನಿರೀಕ್ಷಿತ ಸೋಲು ಕಂಡು ಹೊರಬಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಚೊಚ್ಚಲ ಪದಕ ಗೆಲ್ಲುವ ತವಕದಲ್ಲಿದ್ದಾರೆ.

ಭಾರತದ ಕುಸ್ತಿ ಫೆಡರೇಷನ್​ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು​ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಿ ನಡು ರಸ್ತೆಯಲ್ಲೇ ಪೊಲೀಸರಿಂದ ಲಾಠಿ ಏಟು ತಿಂದು ಬಂಧನಕ್ಕೆ ಒಳಗಾಗಿದ್ದ ವಿನೇಶ್​ಗೆ ಅಂದು ಯಾರು ಕೂಡ ಬೆಂಬಲ ಸೂಚಿಸಿರಲಿಲ್ಲ. ಇಂದು ಇದೇ ಹೆಣ್ಣು ಮಗಳು ದೇಶಕ್ಕಾಗಿ ಪದಕ ಗೆದ್ದು ಎಲ್ಲ ಆಡಳಿತ ವ್ಯವಸ್ಥೆಯನ್ನು ತನ್ನ ಸಾಧನೆ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾಳೆ.

ಇದನ್ನೂ ಓದಿ Paris Olympics: ಐತಿಹಾಸಿಕ ಪದಕ ಗೆಲ್ಲಲಿ ಮೀರಾಬಾಯಿ; ಇಂದು ಬಲಾಢ್ಯರ ಜತೆ ಸ್ಪರ್ಧೆ

ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್​ ಅವರು ಮೂರು ಬಾರಿಯ ಕಾಮನ್​ವೆಲ್ತ್​ ಚಿನ್ನದ ಪದಕ ವಿಜೇತೆ ಉಕ್ರೇನ್​ನ ಒಕ್ಸಾನಾ ಲಿವಾಚ್ ವಿರುದ್ಧ 7-5 ಅಂತರದ ರೋಚಕ ಗೆಲುವು ಸಾಧಿಸಿ ಸೆಮಿ ಫೈನಲ್​ ಪ್ರವೇಶಿಸಿದರು. ಇದಕ್ಕೂ ಮುನ್ನ ನಡೆದಿದ್ದ ಅತ್ಯಂತ ರೋಚಕ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ವಿನೇಶ್ ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, ನಾಲ್ಕು ಬಾರಿಯ ವಿಶ್ವ ಚಾಂಪಿಯನ್​, ಸೋಲನ್ನೇ ಕಾಣದ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಸುಸಾಕಿ ಅವರಿಗೆ ಮೊದಲ ಸೋಲಿನ ರುಚಿ ತೋರಿಸಿದರು.

ಸಸಾಕಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕಂಡ ಮೊದಲ ಆಘಾತಕಾರಿ ಸೋಲು ಇದಾಗಿದೆ. ಈ ಪಂದ್ಯಕ್ಕೂ ಮುನ್ನ 82 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದ ಸುಸಾಕಿ ಎಲ್ಲ ಪಂದ್ಯವನ್ನು ಗೆದ್ದು ಬೀಗಿದ್ದರು. ಇದೀಗ ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್​ ಹಾಕುವಲ್ಲಿ ಭಾರತೀಯ ಕುಸ್ತಿಪಟು ಯಶಸ್ಸು ಕಂಡಿದ್ದಾರೆ. ಈ ಗೆಲುವು ಸಾಧಿಸಿದಾಗಲೇ ವಿನೇಶ್​ ಈ ಬಾರಿ ಪದಕ ಗೆಲ್ಲುವುದು ಖಚಿತ ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಂತೆ ಅವರು ಫೈನಲ್​ ಪ್ರವೇಶಿಸಿ ಪದಕವೊಂದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

Exit mobile version