ಬರ್ಮಿಂಗ್ಹಮ್ : ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಹಾಲಿ ಆವೃತ್ತಿಯ ಕಾಮನ್ವೆಲ್ತ್‌ನ ಮಹಿಳೆಯರ ಕುಸ್ತಿ ಸ್ಪರ್ಧೆಯ ೫೩ ಕೆ.ಜಿ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಅವರು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರು ಬಾರಿ ಸ್ವರ್ಣ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಸಾಧನೆ ತಮ್ಮದಾಗಿಸಿಕೊಂಡರು. ವಿನೇಶ್ ಅವರು ೨೦೧೪ರ ಗ್ಲಾಸ್ಗೊ ಕಾಮನ್ವೆಲ್ತ್, ೨೦೧೮ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು.
ವಿನೇಶ್ ಅವರು ಬಂಗಾರದ ಪದಕ ಗೆಲ್ಲುವ ಮೂಲಕ ಭಾರತದ ಬಂಗಾರದ ಪದಕಗಳ ಒಟ್ಟು ಸಂಖ್ಯೆ ೧೧ಕ್ಕೆ ಏರಿತು. ಇದಕ್ಕಿಂತ ಕೆಲವೇ ಕ್ಷಣಗಳ ಮೊದಲು ರವಿ ದಹಿಯಾ ಅವರು ಪುರುಷರ ೫೭ ಕೆ.ಜಿ ವಿಭಾಗದಲ್ಲಿ ಬಂಗಾರ ಗೆಲ್ಲುವ ಮೂಲಕ ಭಾರತದ ಬಂಗಾರದ ಪದಕಗಳ ಸಂಖ್ಯೆಯನ್ನು ಎರಡಂಕಿಗೆ ತಲುಪಿಸಿದ್ದರು. ಅಂತೆಯೇ ವಿನೇಶ್ ಬಂಗಾರದ ಪದಕ ಗೆಲ್ಲುವುದರೊಂದಿಗೆ ಭಾರತದ ಐದು ಕುಸ್ತಿಪಟುಗಳು ಚಿನ್ನದ ಸಾಧನೆ ಮಾಡಿದಂತಾಗಿದೆ.
ವಿನೇಶ್ ಅವರು ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಸಾಧನೆ ಮಾಡಿದ್ದರು. ಈ ಮೂಲಕ ಎರಡು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಎಂಬ ಸಾಧನೆಯನ್ನೂ ತಮ್ಮದಾಗಿಸಿಕೊಂಡರು.
ವಿನೇಶ್ ಅವರ ಬಂಗಾರದ ಪದಕದ ಸೇರ್ಪಡೆಯೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೩೩ಕ್ಕೆ ಏರಿಕೆಯಾಗಿದೆ. ಇದರಲ್ಲಿ ೧೧ ಚಿನ್ನದ ಪದಕಗಳಾದರೆ, ತಲಾ ೧೧ ಬೆಳ್ಳಿ ಹಾಗೂ ಕಂಚಿನ ಪದಕಗಳಾಗಿವೆ. ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ೫೬ ಚಿನ್ನ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನ, ೪೮ ಚಿನ್ನ ಗೆದ್ದಿರುವ ಇಂಗ್ಲೆಂಡ್ ಎರಡನೇ ಸ್ಥಾನ, ೧೯ ಚಿನ್ನ ಗೆದ್ದಿರುವ ಕೆನಡಾ ಮೂರನೇ ಸ್ಥಾನ ಹಾಗೂ ೧೭ ಚಿನ್ನ ಗೆದ್ದಿರುವ ನ್ಯೂಜಿಲೆಂಡ್ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ | CWG-2022 | ಭಾರತಕ್ಕೆ 10ನೇ ಚಿನ್ನದ ಪದಕ ಗೆದ್ದುಕೊಟ್ಟ ಕುಸ್ತಿಪಟು ರವಿ ದಹಿಯಾ