ಮುಂಬಯಿ: ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಬಂಧನದ ಬಳಿಕ ಪಾಕ್ನಲ್ಲಿ ದೊಡ್ಡಮಟ್ಟದ ಗಲಾಟೆ ಸೃಷ್ಟಿಯಾಗಿವೆ. ಈಗಾಗಲೇ ಪ್ರತಿಭಟನೆಗಳು ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಇದೇ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ಏಷ್ಯಾ ಮತ್ತು ಮಿಡಲ್ ಈಸ್ಟ್ ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ(Bridge Tournament) ಭಾಗವಹಿಸಲು ಬಂದಿರುವ ಭಾರತ ತಂಡಕ್ಕೆ ತಕ್ಷಣವೇ ಪಾಕಿಸ್ತಾನವನ್ನು ತೊರೆದು ಭಾರತಕ್ಕೆ ಹಿಂತಿರುಗುವಂತೆ ಸೂಚನೆ ನೀಡಿದೆ.
ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು 30 ಮಂದಿ ಸದಸ್ಯರ ಭಾರತ ತಂಡವು ಕಳೆದ ವಾರ ವಾಘಾ ಬಾರ್ಡರ್ ಮೂಲಕ ಲಾಹೋರ್ ತಲುಪಿತ್ತು. ಈವೆಂಟ್‌ಗಳಲ್ಲಿ ಭಾರತ ಮಾತ್ರವಲ್ಲದೆ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್ ಮತ್ತು ಬಾಂಗ್ಲಾದೇಶ ಮತ್ತು ಪ್ಯಾಲೆಸ್ಟೈನ್ ದೇಶಗಳು ಭಾಗವಹಿಸಬೇಕಿದ್ದವು. ಸದ್ಯ ಪಾಕ್ನಲ್ಲಿ ನಡೆಯುತ್ತಿರುವ ಗಲಾಟೆಯಿಂದ ಎಲ್ಲ ದೇಶಗಳು ತಮ್ಮ ದೇಶಕ್ಕೆ ಮರಳುವ ಸಿದ್ಧತೆ ಆರಂಭಿಸಿವೆ.
ಇದನ್ನೂ ಓದಿ ICC World Cup 2023: ಭಾರತ-ಪಾಕ್ ಪಂದ್ಯಕ್ಕೆ ಡೇಟ್ ಫಿಕ್ಸ್; ಕಿವೀಸ್-ಇಂಗ್ಲೆಂಡ್ಗೆ ಮೊದಲ ಪಂದ್ಯ
ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಕಾರಣಕ್ಕೆ ಅವರ ಅನುಯಾಯಿಗಳು ಮತ್ತು ಅವರ ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಉಗ್ರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಸಿಕ್ಕ ಸಿಕ್ಕ ವಾಹನ ಮತ್ತು ವಸ್ತುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. 25 ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಸರ್ಕಾರಿ ಕಚೇರಿಗಳು, ಶಾಲೆಗಳ ಮೇಲೂ ದಾಳಿ ನಡೆಸುತ್ತಿದ್ದಾರೆ. ಈಗಾಗಲೇ 14ಕ್ಕೂ ಹೆಚ್ಚು ಸರ್ಕಾರಿ ಕಟ್ಟಡಗಳನ್ನು ಲೂಟಿ ಮಾಡಿದ್ದಾರೆ. ಪ್ರತಿಭಟನಾಕಾರರ ದಾಳಿಗೆ 130ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಇನ್ನೂ ಕೂಡ ತೀವ್ರಗೊಳ್ಳುವ ಸುಳಿವು ಸಿಕ್ಕ ಕಾರಣ ಭಾರತೀಯ ಹೈಕಮಿಷನ್, ಬ್ರಿಡ್ಜ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬಂದಿರುವ ಭಾರತೀಯ ತಂಡಕ್ಕೆ ತಕ್ಷಣ ತವರಿಗೆ ಮರಳುವಂತೆ ಹೇಳಿದೆ. ಸದ್ಯ ಭಾರತ ತಂಡದ ಆಟಗಾರರು ಪಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಸುರಕ್ಷಿತರಾಗಿದ್ದಾರೆ.
ಪ್ರಾಣಭಯದಲ್ಲಿ ಇಮ್ರಾನ್ ಖಾನ್
ಬಂಧಿತ ಇಮ್ರಾನ್ ಖಾನ್ ಅವರನ್ನು ವಿಚಾರಣೆ ನಡೆಸಲು ಅಲ್ಲಿನ ನ್ಯಾಶನಲ್ ಅಕೌಂಟೆಬಿಲಿಟಿ ಬ್ಯೂರೋ (NAB)ದ ಮೂವರು ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಆದರೆ ಈ ಮಧ್ಯೆ ಇಮ್ರಾನ್ಖಾನ್ ಅವರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ‘ನನಗೆ ಕಳೆದ 24ಗಂಟೆಯಿಂದ ವಾಶ್ರೂಮ್ಗೆ ಹೋಗಲು ಬಿಟ್ಟಿಲ್ಲ. ವಿಷದ ಇಂಜೆಕ್ಷನ್ ಕೊಟ್ಟು ಕೊಂದರೂ ಕೊಲ್ಲಬಹುದು’ ಎಂದು ಕೋರ್ಟ್ನಲ್ಲಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಳಿಕ ಪಾಕ್ನಲ್ಲಿ ಹಿಂಸಾತ್ಮಕ ಕೃತ್ಯ ತೀವ್ರಗೊಳ್ಳಲು ಪ್ರಮುಖ ಕಾರಣ.