ಮುಂಬಯಿ: ಮಾಜಿ ಕ್ರಿಕೆಟಿಗರು ಮತ್ತು ಬಾಲಿವುಡ್ ತಾರೆಯರ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಸಚಿನ್ ತೆಂಡೂಲ್ಕರ್(Sachin Tendulkar) ಅವರು ಪ್ಯಾರಾ ಕ್ರಿಕೆಟರ್ ಅಮೀರ್ ಹುಸೇನ್ ಲೋನ್(Amir Hussain Lone) ಅವರ ಜತೆ ಕ್ರೀಸ್‌ಗೆ ಇಳಿದು ಬ್ಯಾಟಿಂಗ್ ನಡೆಸಿದ್ದಾರೆ. ಈ ವಿಡಿಯೊ ವೈರಲ್(Viral Cricket Video) ಆಗಿದೆ. ಪಂದ್ಯದ ಬಳಿಕ ಈ ಆಟಗಾರ ಸಾಧನೆಯನ್ನು ಕೂಡ ಸಚಿನ್ ಕೊಂಡಾಡಿದ್ದಾರೆ.
ಅಮೀರ್ ಅವರು ಈ ಪಂದ್ಯದಲ್ಲಿ ತಮ್ಮ ಕಾಲಿನ ಮೂಲಕ ಸ್ಪಿನ್ನ ಬೌಲಿಂಗ್ ಕೂಡ ಮಾಡಿ ಗಮನಸೆಳೆದರು. ಸಚಿನ್ ಅವರು ಅಮೀರ್ ಹೆಸರಿನ ಜೆರ್ಸಿಯಲ್ಲಿ ಈ ಪಂದ್ಯದಲ್ಲಿ ಕಣಕ್ಕಿಳಿದರೆ, ಸಚಿನ್ ಅವರ ಅಪಟ್ಟ ಅಭಿಮಾನಿಯಾಗಿರುವ ಅಮೀರ್ ಕೂಡ ತೆಂಡೂಲ್ಕರ್ ಹೆಸರಿನ ಜೆರ್ಸಿ ತೊಟ್ಟು ಮೈದಾನಕ್ಕಿಳಿದರು. ಅಕ್ಷಯ್ ಕುಮಾರ್ ಅವರ ಓವರ್ನಲ್ಲಿ ಕೆಲವು ರನ್ ಗಳಿಸಿದ ಅಮೀರ್ ಬಳಿಕ ರಾಬಿನ್ ಉತ್ತಪ್ಪ ಓವರ್ನಲ್ಲಿ ವಿಕೆಟ್ ಕೀಪರ್ ಕ್ಯಾಚ್ನಲ್ಲಿ ಔಟಾದರು. ಸಚಿನ್ ಈ ವೇಳೆ ಅಮೀರ್ ಆಟಕ್ಕೆ ತಮ್ಮ ಬ್ಯಾಟ್ ಎತ್ತಿ ಚಪ್ಪಾಳೆ ತಟಟ್ಟುವ ಮೂಲಕ ಗೌರವ ಸೂಚಿಸಿದರು. ವಿಕೆಟ್ ಕಿತ್ತ ಉತ್ತಪ್ಪ ಕೂಡ ಕೈ ಮುಗಿದು ಗೌರವಿಸಿದರು.
ಪಂದ್ಯದ ಬಳಿಕ ಟ್ವೀಟ್ ಮಾಡಿರುವ ಸಚಿನ್, ಪ್ರತಿ ಎಸೆತದಲ್ಲಿ ವೈಡ್ಸ್ ಧಿಕ್ಕರಿಸಿದ ಅಮೀರ್ “ರಿಯಲ್ ಲೆಗ್ ಸ್ಪಿನ್ನರ್” ಆಗಿ ಎದ್ದು ಕಾಣುತ್ತಾರೆ! ನೀವು ಎಲ್ಲರಿಗೂ ಸ್ಪೂರ್ತಿ. ಎಂದು ಅಮೀರ್ ಬೌಲಿಂಗ್ ನಡೆಸುತ್ತಿರುವ ಫೋಟೋವನ್ನು ಹಂಚಿಕೊಂಡು ಬರೆದಿದ್ದಾರೆ. ಇತ್ತೀಗೆಚೆ ಕಾಶ್ಮೀರ ಪ್ರವಾಸದ ವೇಳೆ ಸಚಿನ್ ಅವರು ಅಮೀರ್ ಹುಸೇನ್ ಲೋನ್ ಅವರನ್ನು ಭೇಟಿಯಾಗಿದ್ದರು.
Defying odds with every delivery, Amir stands out as the “REAL LEG SPINNER”!
— Sachin Tendulkar (@sachin_rt) March 7, 2024
You're an inspiration to all. pic.twitter.com/GWEAiV8Tob
24 ವರ್ಷದ ಅಮೀರ್ ಹುಸೈನ್ ಲೋನ್ ಎರಡೂ ಕೈಗಳು ಇಲ್ಲದಿದ್ದರೂ ಕೂಡ ಅದ್ಭುತವಾಗಿ ಕ್ರಿಕೆಟ್ ಆಡುತ್ತಾರೆ. ತನ್ನ ಕಾಲಿನಿಂದ ಬೌಲಿಂಗ್ ಮಾಡುತ್ತಾರೆ. ಅವರ ಈ ಸಾಹಸದ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಹುಟ್ಟುವಾಗ ಎಲ್ಲರಂತೆ ಸಹಜವಾಗಿ ಎರಡು ಕೈಗಳ ಸಮೇತವೇ ಹುಟ್ಟಿದ ಅಮೀರ್ ತನ್ನ ಕೈಗಳನ್ನು ಕಳೆದುಕೊಂಡದ್ದು ಒಂದು ದುರಂತದಲ್ಲಿ. 8 ವರ್ಷದವರಿದ್ದಾಗ ತನ್ನ ತಂದೆಯ ಮರದ ಮಿಲ್ಲೊಂದರಲ್ಲಿ ಇದ್ದ ಯಂತ್ರವೊಂದಕ್ಕೆ ಕೈಗಳು ಸಿಲುಕಿ ಅಮೀರ್ ತಮ್ಮ ಎರಡು ಕೈಗಳನ್ನು ಕಳೆದುಕೊಂಡರು.
ಬದುಕುವ ಛಲ ಬಿಡದ ಅವರು ಈ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡ ಬಳಿಕ ತನ್ನ ಎಲ್ಲ ಕೆಲಸಗಳನ್ನು ಕಾಲುಗಳಿಂದ ಮಾಡಲು ಅಭ್ಯಾಸ ಮಾಡಿಕೊಂಡರು. ತಮ್ಮ ಗೆಳೆಯರೊಂದಿಗೆ ಕ್ರಿಕೆಟ್ ಕೂಡ ಆಡಲು ಆರಂಭಿಸಿದರು. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿಕೊಂಡ ಅಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.