Site icon Vistara News

Viral Video: ಆರ್​ಸಿಬಿ ಮಹಿಳಾ ತಂಡದ ಆಟಗಾರ್ತಿಯರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ

viral video

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಪುರುಷರ ತಂಡ ಇದುವರೆಗೂ ಕಪ್​ ಗೆಲ್ಲದಿದ್ದರೂ ಕೂಡ ತಂಡದ ಮೇಲಿನ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. 16 ವರ್ಷಗಳ ಕಾಲ ಕಪ್​ ನಮ್ದೇ ಎಂದು ಹೇಳುತ್ತ ಬಂದಿತ್ತ ಆರ್​ಸಿಬಿ ಅಭಿಮಾನಿಗಳ ಕನಸನ್ನು ನನಸು ಮಾಡಿದ್ದು ಮಹಿಳಾ ಆರ್​ಸಿಬಿ ತಂಡ(Royal Challengers Bengaluru Women’s Team). ಇದೇ ಖುಷಿಯಲ್ಲಿ ಅಭಿಮಾನಿಯೊಬ್ಬ ಮಹಿಳಾ ಆರ್​ಸಿಬಿ ತಂಡದ ಎಲ್ಲ ಆಟಗಾರ್ತಿಯರ ಹೆಸರನ್ನು ಕೈಯಲ್ಲಿ ಟ್ಯಾಟೂ ಹಾಕಿದ್ದಾನೆ. ಈ ವಿಡಿಯೊ ವೈರಲ್​ ಆಗಿದೆ.


ಡೆಲ್ಲಿಯನ್ನು ಮಣಿಸಿ ಕಪ್​ ಗೆದ್ದ ಆರ್​ಸಿಬಿ


ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಮಾರ್ಚ್​ 17ರಂದು ನಡೆದ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಧಿಕಾರಯುತ ಜಯ ಸಾಧಿಸಿ ಮೊದಲ ಬಾರಿ ಕಪ್ ಗೆದ್ದು ಮೆರೆದಾಡಿತ್ತು. ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ತಂಡ ಆರ್​ಸಿಬಿಯ ಆರ್​ಸಿಬಿ ಘಾತಕ ಬೌಲಿಂಗ್​ ದಾಳಿಗೆ ನಲುಗಿ ಕೇವಲ 113 ರನ್ ಗಳಿಗೆ ಆಲೌಟ್ ಆಯಿತು. ಡೆಲ್ಲಿಯ ಈ ಅಲ್ಪ ಮೊತ್ತವನ್ನು ಕಂಡು ಆರ್​ಸಿಬಿ ಅಭಿಮಾನಿಗಳು ಅದಾಗಲೇ ಈ ಬಾರಿ ಕಪ್​ ನಮ್ಮದೇ ಎಂದು ಸಂಭ್ರಮವನ್ನು ಶುರು ಮಾಡಿಕೊಂಡಿದ್ದರು.

ಇದನ್ನೂ ಓದಿ WPL 2024 : ಚಾಂಪಿಯನ್​ ಆರ್​ಸಿಬಿ ಮಹಿಳೆಯರಿಗೆ ಪುರುಷರ ತಂಡದಿಂದ ಗಾರ್ಡ್ ಆಫ್​ ಆನರ್​ ! ಇಲ್ಲಿದೆ ವಿಡಿಯೊ

ಗುರಿ ಬೆನ್ನಟ್ಟಿದ ಸ್ಮೃತಿ ಮಂಧಾನ ಬಳಗ 19.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್​ ಬಾರಿಸಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸ್ಮೃತಿ ಮಂಧಾನ 31 ರನ್ , ಸೋಫಿ ಡಿವೈನ್ 32 ರನ್ ಗಳಿಸಿ ಔಟಾದರು. ಆ ಬಳಿಕ ಎಲ್ಲಿಸ್ ಪೆರ್ರಿ(35*) ಮತ್ತು ರಿಚಾ ಘೋಷ್(17*) ರನ್​ ಬಾರಿಸಿ ತಂಡದ ಗೆಲುವು ಸಾರಿದರು.​ ಬಿಗಿ ದಾಳಿ ನಡೆಸಿದ ಶ್ರೇಯಾಂಕಾ ಪಾಟೀಲ್ 4, ಸೋಫಿ ಮೊಲಿನೆಕ್ಸ್ 3, ಆಶಾ ಶೋಭನ 2 ವಿಕೆಟ್ ಕಬಳಿಸಿದರು.

ಲೀಗ್‌ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದ ಮೆಗ್‌ ಲ್ಯಾನಿಂಗ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ಬಾರಿಗೆ ನೇರವಾಗಿ ಫೈನಲ್‌ಗೇರಿದ ಸಾಧನೆ ಮಾಡಿತ್ತು. ಅಲ್ಲದೆ ಆರ್​ಸಿಬಿ ವಿರುದ್ಧ ಅಜೇಯ ಗೆಲುವಿನ ದಾಖಲೆ ಕೂಡ ಹೊಂದಿತ್ತು. ಆದರೆ ಆರ್​ಸಿಬಿ ಹುಡುಗಿಯರು ಎಲ್ಲ ಸೋಲಿನ ಸೇಡನ್ನು ಫೈನಲ್​ನಲ್ಲಿ ತೀರಿಸಿದರು. ಚೊಚ್ಚಲ ಫೈನಲ್​ ಪ್ರವೇಶದಲ್ಲೇ ಕಪ್ ಗೆದ್ದು ಸಂಭ್ರಮಿಸಿದ್ದರು. 17ನೇ ಆವೃತ್ತಿಯ ಪುರುಷರ ಐಪಿಎಲ್​ ಆರಂಭಕ್ಕೂ ಮುನ್ನ ನಡೆದ ಆರ್​ಸಿಬಿ ಅನ್​ಬಾಕ್ಸ್​ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಮತ್ತು ಪುರುಷರ ತಂಡದ ಸಮ್ಮುಖದಲ್ಲಿ ಮಹಿಳಾ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಮಾಡಲಾಗಿತ್ತು.​

Exit mobile version