ಸಿನ್ಸಿನಾಟಿ: ಭಾನುವಾರ ಇಲ್ಲಿ ನಡೆದ ಸಿನ್ಸಿನಾಟಿ ಓಪನ್ ಟೆನಿಸ್(Cincinnati Open) ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಅನುಭವಿ ಆಟಗಾರ ನೊವಾಕ್ ಜೊಕೋವಿಕ್(Novak Djokovic), ವಿಶ್ವದ ನಂ. 1 ಶ್ರೇಯಾಂಕದ ಟೆನಿಸ್ ಆಟಗಾರ ಕಾರ್ಲೊಸ್ ಅಲ್ಕರಾಜ್(Carlos Alcaraz) ಅವರನ್ನು 5-7, 7-6 (9/7), 7-6 (7/4) ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಪಂದ್ಯ ಸೋತ ನಿರಾಸೆಯಲ್ಲಿ ಅಲ್ಕರಾಜ್ ಕಣ್ಣೀರು ಸುರಿಸಿದರೆ, ಗೆದ್ದ ಖುಷಿಯಲ್ಲಿ ಜೋಕೊವಿಕ್ ತಮ್ಮ ಜೆರ್ಸಿಯನ್ನು ಹರಿದು ಸಂಭ್ರಸಿದರು. ಈ ಘಟನೆಯ ಫೋಟೊ ಮತ್ತು ವಿಡಿಯೊ ವೈರಲ್(Viral tennis videos) ಆಗಿದೆ.
36 ವರ್ಷದ ಜೊಕೊವಿಕ್ ತಮಗಿಂತ 16 ವರ್ಷಗಳಷ್ಟು ಕಿರಿಯ ಆಟಗಾರನ ಎದುರು ಮೂರು ಗಂಟೆ 49 ನಿಮಿಷಗಳ ಕಾಲ ಹೋರಾಟ ನಡೆಸಿ ಅಂತಿಮವಾಗಿ ಪಂದ್ಯದಲ್ಲಿ ಮೇಲುಗೈ ಸಾಧಿಸಿದರು. ಜತೆಗೆ 39ನೇ ಮಾಸ್ಟರ್ಸ್ 1000 ಕಿರೀಟವನ್ನು ತಮ್ಮದಾಗಿಸಿದರು.
ಕಣ್ಣೀರು ಸುರಿಸಿದ ಅಲ್ಕರಾಜ್
ಫೈನಲ್ನಲ್ಲಿ ಸೋತ ಕೂಡಲೇ ಕಾರ್ಲೊಸ್ ಅಲ್ಕರಾಜ್ ಅವರು ಕಣ್ಣಿರು ಸುರಿಸಿದರು. ಇದರ ಬಳಿಕ ಪ್ರಶಸ್ತಿ ನೀಡುವ ವೇಳೆಯೂ ಕಣ್ಣೀರು ಸುತಿಸುತ್ತಲೇ ಮಾತನಾಡಿ, ಜೋಕೊ ಅವರಂತಹ ದಿಗ್ಗಜ ಆಟಗಾರರ ಮುಂದೆ ಆಡುವುದೇ ಒಂದು ಸೌಭಾಗ್ಯ. ಉತ್ತಮ ಕಲಿಕಾ ಅನುಭವ ಕೂಡ ಸಿಕ್ಕಿದೆ. ಈ ಪಂದ್ಯ ನಿಜಕ್ಕೂ ರೋಮಾಂಚನವಾಗಿತ್ತು. ನಿಮ್ಮಂತಹ ಚಾಂಪಿಯನ್ ಅವರಿಂದ ಬಹಳಷ್ಟು ಕಲಿತೆ” ಎಂದು ಹೇಳಿ ಗದ್ಗದಿತರಾದರು.
ಸೇಡು ತೀರಿಸಿದ ಜೋಕೊ
ವಿಂಬಲ್ಡನ್ 2023ರ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಸ್ಟಾರ್ ಆಟಗಾರ, 4 ಬಾರಿಯ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್‌ಗೆ ವಿಶ್ವದ ನಂ.1 ಆಟಗಾರ ಸ್ಪೇನ್ನ ಕಾರ್ಲೊಸ್ ಅಲ್ಕರಾಜ್ ಸೋಲಿನ ಆಘಾತವಿಕ್ಕಿದ್ದರು. ಈ ಮೂಲಕ ಹಾಲಿ ವರ್ಷದ ಸತತ 3ನೇ ಗ್ರ್ಯಾನ್ ಸ್ಲಾಂ ಮತ್ತು ಒಟ್ಟಾರೆ 24ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಕನಸಿಗೆ ಅಲ್ಕರಾಜ್ ತಣ್ಣೀರೆರಚಿದ್ದರು. ಈ ಸೋಲಿಗೆ ಜೋಕೊವಿಕ್ ಸಿನ್ಸಿನಾಟಿ ಓಪನ್ ಫೈನಲ್ನಲ್ಲಿ ಸೇಡು ತೀರಿಸಿಕೊಂಡರು. ಗೆದ್ದ ತಕ್ಷಣ ಅವರು ತಮ್ಮ ಜೆರ್ಸಿಯನ್ನು ಹರಿದು ಹಾಕಿ ಅಲ್ಕರಾಜ್ ಮೇಲಿನ ಎಲ್ಲ ಸಿಟ್ಟನ್ನು ಹೊರಹಾಕಿದರು.
ಟೆನಿಸ್ ಲೋಕದ ಯುವತಾರೆ ಅಲ್ಕರಾಜ್ ಬಗ್ಗೆ…
1. ಕಾರ್ಲೋಸ್ ಅಲ್ಕರಾಜ್ ಅವರು ಎಲ್ ಪಾಲ್ಮರ್ (ಮುರ್ಸಿಯಾ) ಕುಟುಂಬದ ಕುಡಿ. ಈ ಕುಟುಂಬದ ಎಲ್ಲರೂ ಅಪ್ರತಿಮ ಟೆನಿಸ್ ಪ್ರೇಮಿಗಳು. ಅವರ ತಂದೆ ಮತ್ತು ಅಜ್ಜ ಇಬ್ಬರೂ ಟೆನಿಸ್ ಆಟಗಾರರಾಗಿದ್ದರು. ತಂದೆ ಟೆನಿಸ್ ಅಕಾಡೆಮಿಯನ್ನೂ ನಡೆಸುತ್ತಿದ್ದಾರೆ.
2. 2020ರಲ್ಲಿ ಅಲ್ಕರಾಜ್ ತಮ್ಮ 16 ನೇ ವಯಸ್ಸಿನಲ್ಲಿ ಎಟಿಪಿ ಮೇಜರ್ ಡ್ರಾಗೆ ಪದಾರ್ಪಣೆ ಮಾಡಿದರು. ಈ ಮೂಲಕ ಟೆನಿಸ್ ಕ್ಷೇತ್ರದ ಪ್ರಮುಖ ವೇದಿಕೆಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಆಟಗಾರರಲ್ಲಿ ಒಬ್ಬರೆನಿಸಿಕೊಂಡರು. ಅವರು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಆಲ್ಬರ್ಟ್ ರಾಮೋಸ್ ವಿನೋಲಾಸ್ ಅವರನ್ನು ಸೋಲಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.
3. ಸ್ಪೇನ್ನವರಾಗಿರುವ ಅಲ್ಕರಾಜ್ಗೆ ರಾಫೆಲ್ ನಡಾಲ್ ರೋಲ್ ಮಾಡೆಲ್. ಬಿಗ್- 3ಗಳಾದ ಫೆಡರರ್, ನಡಾಲ್ ಮತ್ತು ಜೊಕೊವಿಕ್ ಅವರ ಮಿಶ್ರಣ ಅಲ್ಕರಾಜ್ ಎಂದು ಅವರ ತರಬೇತುದಾರ, ಮಾಜಿ ವಿಶ್ವ ನಂ.1 ಮತ್ತು ಎರಡು ಬಾರಿಯ ಒಲಿಂಪಿಯನ್ ಜುವಾನ್ ಕಾರ್ಲೋಸ್ ಫೆರೆರೊ ಹೇಳಿದ್ದಾರೆ.
4. ಆವೇ ಮಣ್ಣಿನ (ಕ್ಲೇ ಕೋರ್ಟ್) ಅಂಗಣದ ಒಂದೇ ಟೂರ್ನಿಯಲ್ಲಿ ರಾಫೆಲ್ ನಡಾಲ್ ಮತ್ತು ಜೊಕೊವಿಕ್ ಅವರನ್ನು ಸೋಲಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡವರು. 19ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
5. ಸ್ಪೇನ್ನ ಈ ಆಟಗಾರ 2021ರಲ್ಲಿ ತನ್ನ ಮೊದಲ ಸಿಂಗಲ್ಸ್ ಎಟಿಪಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2008ರಲ್ಲಿ ಜಪಾನ್ನ ಕೀ ನಿಶಿಕೊರಿ ರಿಚರ್ಡ್ ಅವರನ್ನು 6–2, 6–2 ಸೆಟ್ಗಳಿಂದ ಸೋಲಿಸಿದ ನಂತರ ಪ್ರಶಸ್ತಿ ಗೆದ್ದರು.
6. ಕಾರ್ಲೋಸ್ ಅಲ್ಕರಾಜ್ 2022ರಲ್ಲಿ ಮ್ಯಾಡ್ರಿಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಟೂರ್ನಿಯಲ್ಲಿ ವಿಶ್ವದ ಅಗ್ರ ಆಟಗಾರರಾದ ರಾಫೆಲ್ ನಡಾಲ್, ನೊವಾಕ್ ಜೊಕೊವಿಕ್ ಮತ್ತು ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಸೋಲಿಸಿದ್ದರು. 2023ರಲ್ಲಿ ಮತ್ತೆ ಪ್ರಶಸ್ತಿ ಉಳಿಸಿಕೊಂಡಿದ್ದರು. ಫೈನಲ್ನಲ್ಲಿ ಜಾನ್-ಲೆನ್ನಾರ್ಡ್ ಸ್ಟ್ರಫ್ ವಿರುದ್ಧ ಗೆದ್ದಿದ್ದರು. ಯುಎಸ್ ಓಪನ್ 2022ರ ಫೈನಲ್ನಲ್ಲಿ ಕ್ಯಾಸ್ಪರ್ ರುಡ್ ವಿರುದ್ಧ ಹಾಗೂ ವಿಂಬಲ್ಡನ್ 2023ರಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ಗೆದ್ದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಅಲ್ಕರಾಜ್ ಒಟ್ಟು 12 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
7. ಎಟಿಪಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅಲ್ಕರಾಜ್ ಪಾತ್ರರಾಗಿದ್ದಾರೆ. 2022ರ ಯುಎಸ್ ಓಪನ್ ಫೈನಲ್ನಲ್ಲಿ ಕಾರ್ಲೋಸ್ ಅಲಾಕರಾಜ್ ಎದುರಾಳಿ ಕ್ಯಾಸ್ಪರ್ ರುಡ್ ಅವರನ್ನು ಸೋಲಿಸಿ ವಿಶ್ವದ ನಂ.1 ಸ್ಥಾನಕ್ಕೇರಿದ್ದರು. ಆ ವರ್ಷದ ಆರಂಭದಲ್ಲಿ 32ನೇ ಸ್ಥಾನ ಹೊಂದಿದ್ದ ಅವರು ಅಂತ್ಯದ ವೇಳೆಗೆ ೧ ನೇ ಸ್ಥಾನಕ್ಕೇರಿದ್ದು ಕೂಡ ಐತಿಹಾಸಿಕ ದಾಖಲೆಯಾಗಿದೆ.
8. ಪ್ರತಿಷ್ಠಿತ ವಿಂಬಲ್ಡನ್ ಪ್ರಶಸ್ತಿ ಗೆದ್ದ ಮೂರನೇ ಸ್ಪ್ಯಾನಿಷ್ ಆಟಗಾರ. ರಾಫೆಲ್ ನಡಾಲ್ (2008, 2010) ಮತ್ತು ಮ್ಯಾನುಯೆಲ್ ಸ್ಯಾಂಟನಾ (1966) ರಲ್ಲಿ ಈ ಸಾಧಣೆ ಮಾಡಿದ್ದರು.
9. ಕಾರ್ಲೋಸ್ ಅಲ್ಕರಾಜ್ ಎಲ್ಲ ಮೂರು ಮಾದರಿಯ ಕೋರ್ಟ್ನಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆವೆ ಮಣ್ಣಿನ ಕೋರ್ಟ್ನಲ್ಲಿ 2 ಎಟಿಪಿ 1000 ಪ್ರಶಸ್ತಿಗಳು, ಹಾರ್ಡ್ ಕೋರ್ಟ್ನಲ್ಲಿ 2 ಎಟಿಪಿ 1000 ಪ್ರಶಸ್ತಿಗಳು ಹಾಗೂ ಒಂದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಹುಲ್ಲಿನಂಗಣದಲ್ಲಿ (ಗ್ರಾಸ್ ಕೋರ್ಟ್) ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.