Site icon Vistara News

Viral Video: ಲಗಾನ್‌ ಸಿನಿಮಾ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿದ ದಿನೇಶ್​ ಕಾರ್ತಿಕ್​

viral video

ಮುಂಬಯಿ: ಗುರುವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ(Mumbai Indians) ವಿರುದ್ಧ ಸ್ಫೋಟಕ ಬ್ಯಾಟಿಂಗ್​ ನಡೆಸುವ ಮೂಲಕ ಅಜೇಯ ಅರ್ಧಶತಕ ಬಾರಿಸಿದ ಆರ್​ಸಿಬಿ(Royal Challengers Bengaluru) ಬ್ಯಾಟರ್​ ದಿನೇಶ್​ ಕಾರ್ತಿಕ್(Dinesh Karthik)​ ಅವರು ಈ ಇನಿಂಗ್ಸ್​ಗೂ ಮುನ್ನ ಲಗಾನ್​ ಸಿನೆಮಾ ನೋಡಿ ಆಡಲಿಳಿದಿದ್ದಾರೆ ಎಂದು ನೆಟ್ಟಿಗರು ತಮಾಷೆ​ ಮಾಡಿದ್ದಾರೆ(Viral Video). ಇದಕ್ಕೆ ಕಾರಣ ದಿನೇಶ್​ ಕಾರ್ತಿಕ್​ ಲಗಾನ್​ ಸಿನಿಮಾದಲ್ಲಿ ಬರುವಂತೆ ಕೀಪರ್​ ಹಿಂಭಾಗಕ್ಕೆ 4 ಬೌಂಡರಿ ಬಾರಿಸಿದ್ದು.

2001ರಲ್ಲಿ ತೆರೆ ಕಂಡಿದ್ದ ಆಮೀರ್‌ ಖಾನ್‌ ನಿರ್ಮಾಣದ ಚೊಚ್ಚಲ ಚಿತ್ರ ʼಲಗಾನ್‌ʼನಲ್ಲಿ ತೆರಿಗೆ ರದ್ದು ಮಾಡಲು ಗ್ರಾಮದ ಯುವಕರು ಬ್ರಿಟಿಷರೊಂದಿಗೆ ಕ್ರಿಕೆಟ್​ ಆಡಿ ಗೆಲ್ಲುತ್ತಾರೆ. ಈ ಪಂದ್ಯದಲ್ಲಿ ಓರ್ವ ಹಿಮ್ಮುಖವಾಗಿ ಚೆಂಡನ್ನು ಬಾರಿಸುವ ಮೂಲಕ ಬೌಂಡರಿ ಗಳಿಸುವ ದೃಶ್ಯವಿದೆ. ಇದೀಗ ದಿನೇಶ್​ ಕಾರ್ತಿಕ್​ ಕೂಡ ಮುಂಬೈ ವಿರುದ್ಧದ ಪಂದ್ಯದಲ್ಲಿ ಇದೇ ರೀತಿಯ ಹೊಡೆತಗಳನ್ನು ಬಾರಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ಅಂದಿನ ಲಗಾನ್‌ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಕೆಲ ನೆಟ್ಟಿಗರು ಪಂದ್ಯಕ್ಕೂ ಮುನ್ನ ಕಾರ್ತಿಕ್​ ಈ ಸಿನಿಮಾ ನೋಡಿ ಕ್ರೀಸ್​ಗಿಳಿದಿರಬೇಕು ಎಂದು ತಮಾಷೆಯ ಕಮೆಂಟ್​ ಮಾಡಿದ್ದಾರೆ.

ಈ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ದಿನೇಶ್​ ಕಾರ್ತಿಕ್​ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರಿದರು. ಕೇವಲ 23 ಎಸೆತಗಳಿಂದ 5 ಬೌಂಡರಿ ಮತ್ತು 4 ಬಿಗ್​ ಹಿಟ್ಟಿಂಗ್​ ಸಿಕ್ಸರ್​ ನೆರವಿನಿಂದ ಅಜೇಯ 53 ರನ್​ ಚಚ್ಚಿದ್ದರು. ಆಕಾಶ್​ ಮದ್ವಾಲ್​ ಎಸೆದ 16ನೇ ಓವರ್​ನಲ್ಲಿ ದಿನೇಶ್​ ಕಾರ್ತಿಕ್ ಬರೋಬ್ಬರಿ 4 ಬೌಂಡರಿ ಬಾರಿಸಿದರು. ಈ ಎಲ್ಲ ಬೌಂಡರಿಗಳು ಕೀಪರ್​ ಹಿಂಭಾಗಕ್ಕೆ ಹೊಡೆದರು. ಕಾರ್ತಿಕ್​ ಸ್ಫೋಟಕ ಬ್ಯಾಟಿಂಗ್​ ಇನಿಂಗ್ಸ್​ ಕಂಡು ಸ್ಲಿಪ್​​ನಲ್ಲಿ ನಿಂತಿದ್ದ ರೋಹಿತ್ ಶರ್ಮ ಚಪ್ಪಾಳೆ ತಟ್ಟುತಾ ಟಿ20 ವಿಶ್ವಕಪ್​ನಲ್ಲಿ ಆಡುವಂತೆ ಆಫರ್​ ಕೂಡ ನೀಡಿದ್ದಾರೆ. 

2022ರ ಹರಾಜಿನಲ್ಲಿ ಕಾರ್ತಿಕ್​ ಅವರು ಬರೋಬ್ಬರಿ 5.5 ಕೋಟಿ ರೂ. ಪಡೆದು ಆರ್​ಸಿಬಿ ಕ್ಯಾಂಪ್ ಸೇರಿದ್ದರು. ಆ ಆವೃತ್ತಿಯಲ್ಲಿ ಕಾರ್ತಿಕ್ 14 ಇನ್ನಿಂಗ್ಸ್ ಗಳಲ್ಲಿ 287 ರನ್ ಬಾರಿಸಿದ್ದರು. ಜತೆಗೆ ತಂಡದಲ್ಲಿ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಆದರೆ ಕಳೆದ ಐಪಿಎಲ್​ ಟೂರ್ನಿಯಲ್ಲಿ ಘೋರ ವೈಫಲ್ಯ ಎದುರಿಸಿದ್ದರು. ಇದೀಗ ಪ್ರಚಂಡ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ್ದಾರೆ. ಇದು ಅವರ ವಿದಾಯದ ಟೂರ್ನಿಯಾಗಿದೆ. ಈ ವಿಚಾರವನ್ನು ಸ್ವತಃ ಅವರೇ ಟೂರ್ನಿ ಆರಂಭಕ್ಕೂ ಮುನ್ನ ತಿಳಿಸಿದ್ದರು.

ಇದನ್ನೂ ಓದಿ IPL 2024: ಆರ್​ಸಿಬಿ ವಿರುದ್ಧ ಅಬ್ಬರಿಸಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಸೂರ್ಯಕುಮಾರ್

ಐಪಿಎಲ್​ ಟೂರ್ನಿಯಲ್ಲಿ 248* ಪಂದ್ಯಗಳನ್ನು ಆಡಿರುವ ದಿನೇಶ್​ ಕಾರ್ತಿಕ್​, ಅತ್ಯಧಿಕ ಐಪಿಎಲ್​ ಪಂದ್ಯಗಳ್ನಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ 4659 ರನ್​ ಬಾರಿಸಿದ್ದಾರೆ. 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಕಾರ್ತಿಕ್​ ಭಾರತ ಪರ 26 ಟೆಸ್ಟ್‌ಗಳನ್ನು ಆಡಿ 1025 ರನ್ ಗಳಿಸಿದ್ದಾರೆ. 57 ಕ್ಯಾಚ್‌ಗಳು ಮತ್ತು 6 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಆಡಿದ್ದು 2018 ರಲ್ಲಿ. ಏಕದಿನದಲ್ಲಿ 94 ಪಂದ್ಯಗಳನ್ನು ಆಡಿ 1752 ರನ್ ಗಳಿಸಿದ್ದಾರೆ. 64 ಕ್ಯಾಚ್‌ಗಳು ಮತ್ತು 7 ಸ್ಟಂಪಿಂಗ್‌ಗಳನ್ನು ನಿರ್ವಹಿಸಿದ್ದಾರೆ. 60 ಟಿ20 ಪಂದ್ಯಗಳಿಂದ 686 ರನ್ ಗಳಿಸಿ, 30 ಕ್ಯಾಚ್‌ಗಳು ಮತ್ತು 8 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

Exit mobile version