ಹೈದರಾಬಾದ್: ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಅವರನ್ನು ನೋಟುಗಳ ಮಳೆಯನ್ನೇ ಸುರಿಸಿ ಸ್ವಾಗತಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಮುಗಿಸಿ ತವರಿಗೆ ಮರಳಿದ ಸಂದರ್ಭ ಅವರನ್ನು ಈ ರೀತಿಯಾಗಿ ಸ್ವಾಗತಿಸಲಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 9 ವಿಕೆಟ್‌ಗಳನ್ನು ಕಿತ್ತಿದ್ದರು. ಕೇಪ್ಟೌನ್ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಘಾತಕ ಬೌಲಿಂಗ್ ದಾಳಿ ನಡಸಿದ್ದ ಅವರು ಕೇವಲ 15 ರನ್ಗೆ 6 ವಿಕೆಟ್ ಕಿತ್ತು ಮಿಂಚಿದ್ದರು.
ಸಿರಾಜ್ ತಮ್ಮ ತವರು ಹೈದರಾಬಾದ್‌ಗೆ ಮರಳಿದ ತಕ್ಷಣ ಅಭಿಮಾನಿಗಳು ಅವರ ಮೇಲೆ ಹಣದ ಮಳೆಯನ್ನು ಸುರಿಸಿ ಭರ್ಜರಿ ಸ್ವಾಗತ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ ಹೈದರಾಬಾದ್‌ನಲ್ಲಿ ಕವ್ವಾಲಿ ಕೂಟದಲ್ಲಿ ಅವರ ಅಭಿಮಾನಿಗಳು ಈ ಸ್ವಾಗತ ಕಾರ್ಯಕ್ರಮ ಆಯೋಜಿಸಿದ್ದರು.
Cricketer Mohd Siraj enjoying at a Qawalli program in Hyderabad. pic.twitter.com/IAWNB5w9lq
— ASIF YAR KHAN (@Asifyarrkhan) January 11, 2024
ತಮ್ಮ ನೆಚ್ಚಿನ ಆಟಗಾರರನ್ನು ಕಂಡ ತಕ್ಷಣ ಅವರ ಮೇಲೆ ನೋಟುಗಳ ಮಳೆಯನ್ನೇ ಸುರಿಸಿದರು. ಎಐಎಂಐಎಂ ಶಾಸಕ ಮಾಜಿದ್ ಹುಸೇನ್ ಕೂಡ ಈ ವೇಳೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಸಿರಾಜ್ ಇದೇ ತಿಂಗಳು 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮತ್ತೆ ತಂಡ ಸೇರಲಿದ್ದಾರೆ.
ಇದನ್ನೂ ಓದಿ Mohammed Siraj : ಸಿರಾಜ್ ಸಾಧನೆಗಾಗಿ ಕಪಿಲ್ ದೇವ್ಗೆ ಥ್ಯಾಂಕ್ಸ್ ಹೇಳಿದ ಗವಾಸ್ಕರ್
ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್ ದಾನ ಮಾಡಿದ್ದ ಸಿರಾಜ್
ಶ್ರೀಲಂಕಾ ತಂಡದ ವಿರುದ್ಧ ಕಳೆದ ವರ್ಷ ನಡೆದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಅಸಾಧಾರಣ ಬೌಲಿಂಗ್ ಸಾಧನೆ ಮಾಡಿದ್ದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದರು. ಅವರಿಗೆ 5000 ಡಾಲರ್ (4,15,451.75 ರೂ.) ಬಹುಮಾನ ನೀಡಲಾಗಿತ್ತು. ಆದರೆ ಅವರು ಸ್ಥಳದಲ್ಲೇ ಆ ಬಹುಮಾನವನ್ನು ಮೈದಾನದ ಸಿಬ್ಬಂದಿಗೆ (ಗ್ರೌಂಡ್ ಸ್ಟಾಪ್) ಅರ್ಪಿಸಿ ಮನಗೆದ್ದಿದ್ದರು.
ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಕೆಲ ವರ್ಷಗಳಿಂದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿಯೂ ಅಗ್ರಸ್ಥಾನ ಪಡೆದಿದ್ದಾರೆ. ಸದ್ಯ ಅವರು ತಂಡದ ಪ್ರಮುಖ ಬೌಲರ್ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಮನಾರ್ಹ ಪ್ರದರ್ಶನ ತೋರಿದ್ದರು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ ಬೇಸರಲ್ಲಿ ಸಿರಾಜ್ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಅವರನ್ನು ತಂಡದ ನಾಯಕ ರೋಹಿತ್ ಶರ್ಮ ಮತ್ತು ಸಹ ಆಟಗಾರ ಜಸ್ಪ್ರೀತ್ ಬುಮ್ರಾ ಸಮಾಧಾನಪಡಿಸಿದ್ದರು.