ಲಂಡನ್: ಟೀಮ್ ಇಂಡಿಯಾದ(Team India) ಮಾಜಿ ಕ್ರಿಕೆಟ್ ಸಹೋದರರಾದ ಇರ್ಫಾನ್ ಪಠಾಣ್(Irfan Pathan) ಮತ್ತು ಯೂಸುಫ್ ಪಠಾಣ್(Yusuf Pathan) ಅವರು ಭಾರತ ಪರ ಆಡುವ ವೇಳೆ ಅಮೋಘ ಜತೆಯಾಟ ನಡೆಸುವ ವೇಳೆ ಅದೆಷ್ಟೋ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಆದರೆ, ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಷಿಪ್(World Championship of Legends) ಟೂರ್ನಿಯಲ್ಲಿ ಈ ಸಹೋದರರಿಬ್ಬರು ರನೌಟ್ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡು ಕಿತ್ತಾಡಿಕೊಂಡ ಘಟನೆ ಸಂಭವಿಸಿದೆ. ಈ ವಿಡಿಯೊ(Viral Video) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಸಕ್ತ ಸಾಗುತ್ತಿರುವ ಮಾಜಿ ಆಟಗಾರರ ಲೆಜೆಂಡ್ಸ್ ಚಾಂಪಿಯನ್‌ಷಿಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ನಾರ್ಥ್‌ಹ್ಯಾಂಪ್ಟನ್‌ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, 211 ರನ್ ಬಾರಿಸಿ ಸವಾಲೊಡ್ಡಿತು.
ಈ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿದ್ದ ಭಾರತ, ಡೇಲ್ ಸ್ಟೇನ್ ಅವರ ಬೌಲಿಂಗ್‌ನಲ್ಲಿ ಇರ್ಫಾನ್ ಪಠಾಣ್ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಈ ವೇಳೆ ಬ್ಯಾಟ್‌ಗೆ ಎಡ್ಜ್ ಆದ ಚೆಂಡು ಲಾಂಗ್ ಆನ್ ಕಡೆಗೆ ಹಾರಿತು. 2 ರನ್ ಓಡುವ ಅವಕಾಶವಿದ್ದ ಕಾರಣ ಇರ್ಫಾನ್ ಎರಡನೇ ರನ್ ಕದಿಯಲು ಸ್ಟ್ರೈಕ್ ಕಡೆಗೆ ಓಡಿದರು. ಆದರೆ ಇದನ್ನು ಗಮನಿಸದ ಯೂಸುಫ್ ಮತ್ತೊಂದು ರನ್ ಓಡಲು ನಿರಾಕರಿಸಿದರು. ಅರ್ಧ ಪಿಚ್ ತನಕ ಓಡಿ ಬಂದಿದ್ದ ಇರ್ಫಾನ್ ಹಿಂದಿರುಗಿ ವಾಪಸ್ ಕ್ರೀಸ್ ಮುಟ್ಟುವಷ್ಟರಲ್ಲಿ ರನೌಟ್ ಬಲೆಗೆ ಬಿದ್ದರು. ಔಟ್ ಆದ ಸಿಟ್ಟಿನಲ್ಲಿ ಇರ್ಫಾನ್ ಸಹೋದರ ವಿರುದ್ಧ ಜೋರಾಗಿ ಕಿರುಚಾಡಿ ತಮ್ಮ ಆಕ್ರೋಶ ಹೊರಹಾಕಿದರು. ಈ ವಿಡಿಯೊ ವೈರಲ್ ಆಗಿದೆ. ಈ ಪಂದ್ಯದಲ್ಲಿ ಭಾರತ ತಂಡ 54 ರನ್ಗಳ ಸೋಲು ಕಂಡಿತು. ಇರ್ಫಾನ್ 35 ರನ್ ಬಾರಿಸಿದರೆ, ಯೂಸುಫ್ ಅಜೇಯ 54 ರನ್ ಬಾರಿಸಿದರು.
ಇದನ್ನೂ ಓದಿ Yusuf Pathan: ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಜೈ ಹಿಂದ್ ಘೋಷಣೆ ಕೂಗಿದ ಯೂಸುಫ್ ಪಠಾಣ್
ಪಠಾಣ್ ಸೋದರರಲ್ಲಿ ಹಿರಿಯರಾದ ಯೂಸುಫ್ ಪಠಾಣ್ ಹೊಡಿಬಡಿ ಆಟಕ್ಕೆ ಖ್ಯಾತರಾಗಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್, 2011ರ ವಿಶ್ವಕಪ್, ಕೆಕೆಆರ್‌ನ ಐಪಿಎಲ್ ಗೆಲುವಿನ ವೇಳೆ ತಂಡದ ಸ್ಟಾರ್ ಆಟಗಾರನಾಗಿ ಮಿಂಚಿದ್ದು ಯೂಸುಫ್ ಹೆಗ್ಗಳಿಕೆ. 2021ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಯೂಸುಫ್ ಪಠಾಣ್ 57 ಏಕದಿನ ಪಂದ್ಯಗಳಿಂದ 810 ರನ್ ಹೊಡೆದಿದ್ದಾರೆ. 2 ಶತಕ, 3 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. 22 ಟಿ20 ಪಂದ್ಯಗಳಿಂದ 236 ರನ್ ಬಾರಿಸಿದ್ದಾರೆ. 2012ರಲ್ಲಿ ಭಾರತವನ್ನು ಕೊನೆಯ ಸಲ ಪ್ರತಿನಿಧಿಸಿದ್ದರು. 174 ಐಪಿಎಲ್ ಪಂದ್ಯಗಳಿಂದ 3,204 ರನ್, ಭಾರತದ ಅತೀ ವೇಗದ ಶತಕದ ದಾಖಲೆ, 16 ಪಂದ್ಯಶ್ರೇಷ್ಠ ಗೌರವ, 42 ವಿಕೆಟ್ ಸಂಪಾದಿಸಿದ ಹೆಗ್ಗಳಿಕೆ ಯೂಸುಫ್ ಅವರದು. ಪ್ರಸ್ತುತ ಪಶ್ಚಿಮ ಬಂಗಾಳದ ಬರ್ಹಾಂಪೋರ್ ಲೋಕಸಭಾ ಕ್ಷೇತ್ರದ ಟಿಎಂಸಿ ಸಂಸದರಾಗಿದ್ದಾರೆ.