ಬೆಂಗಳೂರು: ಟೀಮ್ ಇಂಡಿಯಾಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ಪಣತೊಟ್ಟಿರುವ ಕನ್ನಡಿಗ ಮಯಾಂಕ್ ಅಗರ್ವಾಲ್(Mayank Agarwal) ಅವರು ಮಳೆಯನ್ನೂ ಲೆಕ್ಕಿಸದೇ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಅಗರ್ವಾಲ್ ಅವರು ಮಳೆಯಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಜತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.
ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಬೆನ್ನಲೇ ಭಾರತ ತಂಡದಲ್ಲಿ ಹಲವು ಬದಲಾವಣೆಯನ್ನು ತರಲು ಬಿಸಿಸಿಐ ಮೆಗಾ ಪ್ಲ್ಯಾನ್ ರೂಪಿಸಿದೆ. ಮುಂಬರುವ ವಿಂಡೀಸ್ ವಿರುದ್ಧದ ಸರಣಿಯಿಂದಲೇ ಇದು ಕಾರ್ಯ ರೂಪಕ್ಕೆ ಬರುವ ಸಾಧ್ಯತೆದೊಂದು ದಟ್ಟವಾಗಿದೆ. ಹಿರಿಯ ಆಟಗಾರರಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಇದೇ ನಿಟ್ಟಿನಲ್ಲಿ ಮಯಾಂಕ್ ಅವರು ಈ ಪ್ರವಾಸಕ್ಕೂ ಮುನ್ನ ನಡೆಯುವ ದುಲೀಪ್ ಟ್ರೋಫಿಯಲ್ಲಿ(duleep trophy 2023) ಉತ್ತಮ ಪ್ರದರ್ಶನ ತೋರಿ ಆಯ್ಕೆ ಸಮಿತಿಯ ಗಮನಸೆಳೆಯಲು ಮುಂದಾಗಿದ್ದಾರೆ. ಹೀಗಾಗಿ ಅವರು ಮಳೆಯಲ್ಲಿಯೂ ನಿರಂತರ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಇದನ್ನೂ ಓದಿ IRANI CUP : ಶೇಷ ಭಾರತ ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕ, ಸರ್ಫರಾಜ್ ಖಾನ್ ಅಲಭ್ಯ
ಈಗಾಗಲೇ ಹಲವು ಬಾರಿ ಭಾರತ ಟೆಸ್ಟ್ ತಂಡದ ಪರ ಮಯಾಂಕ್ ಆಡಿದ್ದರೂ ಅವರ ಸ್ಥಾನ ಮಾತ್ರ ಗಟ್ಟಿಯಾಗಿರಲಿಲ್ಲ. ಆರಂಭಿಕ ಆಟಗಾರರು ಗಾಯಗೊಂಡರೆ ಮಾತ್ರ ಅವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಅವರು ಸಿಕ್ಕ ಅನೇಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು ಇದುವರೆಗೆ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು 4 ಶತಕ, 2 ದ್ವಿಶತಕ ಮತ್ತು 6 ಅರ್ಧಶತಕ ಬಾರಿಸಿದ್ದಾರೆ. 243 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
Rain doesn't play a spoil sport if you use it to train yourself pic.twitter.com/O0XW1AGLwW
— Mayank Agarwal (@mayankcricket) June 20, 2023
ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಹೊರಗುಳಿದರೆ ಆಗ ಗಿಲ್ ಜತೆ ಅಗರ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಇವರ ಜತೆಗೆ ಯಶಸ್ವಿ ಜೈಸ್ವಾಲ್ ಕೂಡ ರೇಸ್ನಲ್ಲಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿಯೂ ಅಗರ್ವಾಲ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು.