Site icon Vistara News

Viral Video: ತಂಡದಿಂದ ಹೊರಬಿದ್ದ ಬೆನ್ನಲ್ಲೇ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಪೂಜಾರ; ವಿಡಿಯೊ ವೈರಲ್​

cheteshwar pujara batting practice

ರಾಜ್​ಕೋಟ್​​: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ತೋರಿದ ಕಳಪೆ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಚೇತೇಶ್ವರ್​ ಪೂಜಾರ(Cheteshwar Pujara) ಅವರನ್ನು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಕೈ ಬಿಡಲಾಗಿದೆ. ಜತೆಗೆ ಟೆಸ್ಟ್​ ತಂಡದ ಉಪನಾಯಕ ಸ್ಥಾನದಿಂದಲೂ ಕೆಳಗಿಳಿಸಿ ಈ ಸ್ಥಾನವನ್ನು ಅಜಿಂಕ್ಯ ರಹಾನೆಗೆ ನೀಡಲಾಗಿದೆ. ಈ ಎಲ್ಲ ಬೆಳವಣಿಗೆ ಬಳಿಕ ಪೂಜಾರ ಅವರು ದುಲೀಪ್​ ಟ್ರೋಫಿ(Duleep Trophy) ಆಡಲು ನಿರ್ಧರಿಸಿದ್ದು ಇದಕ್ಕಾಗಿ ಭರ್ಜರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸ ನಡೆಸುತ್ತಿರುವ ವಿಡಿಯೊವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಪೂಜಾರ ಬ್ಯಾಟಿಂಗ್​ ನಡೆಸುತ್ತಿರುವ 9 ನಿಮಿಷಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.

ಪೂಜಾರ ಅವರನ್ನು ವಿಂಡೀಸ್​ ಸರಣಿಯಿಂದ​ ಕೈ ಬಿಟ್ಟ ವಿಚಾರವಾಗಿ ಅನೇಕ ಮಾಜಿ ಕ್ರಿಕೆಟಿಗರು ಬಿಸಿಸಿಐ(BCCI) ವಿರುದ್ದ ದ್ವಂದ್ವ ಹೇಳಿಕೆಯನ್ನು ನೀಡಿದ್ದರು. ಕೆಲವರು ಈ ನಿರ್ಧಾರ ಉತ್ತಮ ಎಂದರೆ ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಮಾತನಾಡಿದ ಪೂಜಾರ ಅವರ ತಂದೆ ಹಾಗೂ ಕೋಚ್‌ ಕೂಡ ಆಗಿರುವ ಅರವಿಂದ್‌ ಪೂಜಾರ, “ಮಾನಸಿಕವಾಗಿ ಪೂಜಾರ ಬಲಿಷ್ಠವಾಗಿದ್ದಾನೆ. ಆಯ್ಕೆ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವನೀಗ ದುಲೀಪ್‌ ಟ್ರೋಫಿಗಾಗಿ ಅಭ್ಯಾಸ ನಡೆಸುತ್ತಿದ್ದಾನೆ. ಮತ್ತೆ ಆತ ಟೀಮ್‌ ಇಂಡಿಯಾಕ್ಕೆ ಮರಳುವ ವಿಶ್ವಾಸವಿದೆ” ಎಂದು ಹೇಳಿದರು.

ಜೂನ್​ 28ರಿಂದ ಆರಂಭವಾಗಲಿರುವ ದುಲೀಪ್​ ಟ್ರೋಫಿ(Duleep Trophy) ಕ್ರಿಕೆಟ್​ ಟೂರ್ನಿಯಲ್ಲಿ ಪೂಜಾರ ಆಡಲು ಸಜ್ಜಾಗಿದ್ದಾರೆ. ಪಶ್ಚಿಮ ವಲಯ ತಂಡಕ್ಕೆ ಆಯ್ಕೆಯಾಗಿದ್ದು ಟೂರ್ನಿಯಲ್ಲಿ ಆಡಲು ಅವರು ಒಪ್ಪಿಕೊಂಡಿದ್ದಾರೆ. ಇವರ ಜತೆಗೆ ಸೂರ್ಯಕುಮಾರ್ ಯಾದವ್(Suryakumar Yadav)​ ಕೂಡ ​ಪಶ್ಚಿಮ ವಲಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ INDvsWI : ಪೂಜಾರಗೆ ವಿಶ್ರಾಂತಿ ಎಂದುಕೊಳ್ಳುವೆ; ಬಿಸಿಸಿಐ ವಿರುದ್ಧ ಮಾಜಿ ಸ್ಪಿನ್ನರ್‌ ಪರೋಕ್ಷ ಅಸಮಾಧಾನ

ರಾಹುಲ್​ ದ್ರಾವಿಡ್​, ಸಚಿನ್​ ತೆಂಡೂಲ್ಕರ್​ ಸೇರಿ ಅನೇಕ ಕ್ರಿಕೆಟಿಗರು ಫಾರ್ಮ್ ಕಳೆದುಕೊಂಡಾಗ ದೇಶಿ ಕ್ರಿಕೆಟ್​ ಆಡಿ ಮತ್ತೆ ತಮ್ಮ ಬ್ಯಾಟಿಂಗ್​ ಲಯವನ್ನು ಕಂಡುಕೊಂಡ ನಿದರ್ಶನಗಳು ಹಲವು ಇದೆ. ಇದೇ ಸೂತ್ರವನ್ನು ಇದೀಗ ಪೂಜಾರ ಕೂಡ ಕೈಗೆತ್ತಿಕೊಂಡಂತೆ ತೋರುತ್ತಿದೆ.

Exit mobile version