ಪಲ್ಲೆಕೆಲೆ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ತಂಡದ ಆಟಗಾರರು ಫಿಲ್ಡಿಂಗ್ ಅಥವಾ ಬೌಲಿಂಗ್ನಲ್ಲಿ ಏನಾದರು ತಪ್ಪುಗಳನ್ನು ಮಾಡಿದ ತಕ್ಷಣ ಅವರ ವಿರುದ್ಧ ಮುನಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಈಗಾಗಲೇ ಇಂತಹ ಹಲವು ನಿದರ್ಶನಗಳನ್ನು ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಕಳೆದ ನೇಪಾಳ(India vs Nepal) ವಿರುದ್ಧದ ಪಂದ್ಯದಲ್ಲಿಯೂ ನಡೆದಿದೆ. ಕಳಪೆ ಫೀಲ್ಡಿಂಗ್ಗೆ ರೋಹಿತ್ ಅವರು ತಾಳ್ಮೆ ಕಳೆದುಕೊಂಡಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಮೊದಲ ಓವರ್ನಲ್ಲಿಯೇ ಶ್ರೇಯಸ್ ಅಯ್ಯರ್ ಸುಲಭದ ಕ್ಯಾಚ್ ಬಿಟ್ಟರು. ಇದಾದ ಬಳಿಕ ಮುಂದಿನ ಓವರ್ನಲ್ಲಿ ವಿರಾಟ್ ಕೊಹ್ಲಿ ಕೂಡ ಕ್ಯಾಚ್ ಕೈಚೆಲ್ಲಿದರು. ಬಳಿಕ ಇಶಾನ್ ಕಿಶನ್ ಸರದಿ ಹೀಗೆ 26 ಎಸೆತ ಆಗುವಷ್ಟರಲ್ಲಿ ಭಾರತೀಯ ಆಟಗಾರರು ಒಟ್ಟು ಮೂರು ಕ್ಯಾಚ್ ಬಿಟ್ಟರು. ಇದರ ಮಧ್ಯೆ ಹಲವು ಎಡವಟ್ಟಿನಿಂದ ಬೌಂಡರಿ ಕೂಡ ಬಿಟ್ಟುಕೊಟ್ಟರು. ಇದನೆಲ್ಲ ನೋಡುತ್ತಿದ್ದ ರೋಹಿತ್ ಮಳೆ ಬಂದು ಆಟಗಾರರು ಡಗ್ಔಟ್ ಕಡೆಗೆ ಹೋಗುತ್ತಿದ್ದ ವೇಳೆ ಕೋಪದಿಂದಲೇ ಆಟಗಾರರನ್ನು ದಿಟ್ಟಿಸಿ ನೋಡಿದ್ದಾರೆ. ಇದರ ವಿಡಿಯೊ ವೈರಲ್(Viral Video) ಆಗಿದೆ.
ಅಸಮಾಧಾನ
ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಬೌಲಿಂಗ್ ಉತ್ತಮವಾಗಿತ್ತು ಆದರೆ ಫೀಲ್ಡಿಂಗ್ ಬಹಳ ಕೆಟ್ಟದಾಗಿತ್ತು. ನಾವು ಇದನ್ನು ಸುಧಾರಿಸದೇ ಹೋದರೆ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಇದು ಮರುಕಳಿಸಿದರೆ ಅಷ್ಟು ಉತ್ತಮವಾಗಿರುವುದಿಲ್ಲ ಎಂದು ಸಹ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
“ತಂಡ ಸೂಪರ್-4ಗೆ ಪ್ರವೇಶ ಪಡೆದಿರುವುದು ಸಂತಸ ತಂದಿದೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಆರಂಭಿಕ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡರೂ ಆ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಉ ಉತ್ತಮ ಇನಿಂಗ್ಸ್ ಕಟ್ಟಿದರು. ಉಭಯ ಆಟಗಾರರ ಪ್ರದರ್ಶನದಿಂದ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ಬಂದಿದೆ. ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಅನೇಕ ಆಟಗಾರರು ಗಾಯದಿಂದ ಚೇತರಿಸಿಕೊಂಡು ಹಿಂತಿರುಗುತ್ತಿದ್ದಾರೆ ಮತ್ತು ಅವರು ಲಯಕ್ಕೆ ಮರಳಲು ಸಮಯ ಬೇಕಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ Rohit Sharma: ಸಚಿನ್ ದಾಖಲೆ ಸರಿಗಟ್ಟಿ ಇನ್ನೂ ಹಲವು ದಾಖಲೆ ಬರೆದ ರೋಹಿತ್ ಶರ್ಮ
ದಾಖಲೆ ಬರೆದ ರೋಹಿತ್
ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ರೋಹಿತ್ 59 ಎಸೆತಗಳಿಂದ ಅಜೇಯ 74 ರನ್ ಬಾರಿಸಿದರು. ಇದರಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಒಳಗೊಂಡಿತ್ತು. ಹಲವು ಪಂದ್ಯಗಳ ಬಳಿಕ ಅವರು ಆಡಿದ ಉತ್ತಮ ಇನಿಂಗ್ಸ್ ಇದಾಗಿತ್ತು. ಇದೇ ವೇಳೆ ಅವರು ಏಷ್ಯಾಕಪ್ ಟೂರ್ನಿಯಲ್ಲಿ(ಟಿ20 ಮತ್ತು ಏಕದಿನ) ಅತಿ ಹೆಚ್ಚು ಅರ್ಧಶತಕ ಬಾರಿಸಿದವರ ಪಟ್ಟಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಸದ್ಯ 7 ಅರ್ಧಶತಕ ಬಾರಿಸಿದ್ದಾರೆ.
ಇದಲ್ಲದೆ ಏಕದಿನ ಮಾದರಿಯ ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಈಗ ಅಗ್ರಸ್ಥಾನದಲ್ಲಿದ್ದಾರೆ. 36 ವರ್ಷದ ರೋಹಿತ್ ನೇಪಾಳ ವಿರುದ್ಧ 5 ಸಿಕ್ಸರ್ ಬಾರಿಸಿ ಈ ಸಾಧನೆ ಮಾಡಿದರು. ಇದುವರೆಗೂ ಈ ದಾಖಲೆ ಮಾಜಿ ಆಟಗಾರ ಸುರೇಶ್ ರೈನಾ ಹೆಸರಿನಲ್ಲಿತ್ತು. ರೈನಾ 18 ಗರಿಷ್ಠ ಸಿಕ್ಸರ್‌ಗಳನ್ನು ಬಾರಿಸಿದ್ದರು. ಆದರೆ ರೋಹಿತ್ ಈಗ 22 ಸಿಕ್ಸರ್ ಬಾರಿಸಿ ರೈನಾ ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಸಕ್ರೀಯವಾಗಿ ಏಷ್ಯಾಕಪ್ ಆಡುತ್ತಿರುವವರ ಪೈಕಿ ಸಿಕ್ಸರ್ ದಾಖಲೆಯಲ್ಲಿ ರೋಹಿತ್ ಅಗ್ರಸ್ಥಾನ ಪಡೆದಿದ್ದಾರೆ.