ಲಂಡನ್: ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ದ್ವಿತೀಯ ಟೆಸ್ಟ್(England vs West Indies 2nd Test) ಪಂದ್ಯದಲ್ಲಿ ವಿಂಡೀಸ್ ವೇಗಿ ಶಮರ್ ಜೋಸೆಫ್(Shamar Joseph) ಬಾರಿಸಿದ ಸಿಕ್ಸರ್ನ(shamar joseph six) ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ. ಅವರ ಈ ಸಿಕ್ಸರ್ ಹೊಡೆತಕ್ಕೆ ನಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನ(Trent Bridge, Nottingham) ಮೇಲ್ಛಾವಣಿಯ ಹೆಂಚುಗಳು ಪುಡಿಪುಡಿಯಾಗಿದೆ.
ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಗಸ್ ಅಟ್ಕಿನ್ಸನ್ ಓವರ್ನ ಎರಡನೇ ಎಸೆತದಲ್ಲಿ ಶಮರ್ ಜೋಸೆಫ್ ಈ ಗಗನಚುಂಬಿ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ಗೆ ಸ್ಟೇಡಿಯಂನ ಮೇಲ್ಛಾವಣಿಯ ಹೆಂಚುಗಳು ಪುಡಿಪುಡಿಯಾಗಿ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರ ತಲೆ ಮೇಲೆ ಬಿದ್ದಿದೆ. ಈ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಜೋಸೆಫ್ ಈ ಪಂದ್ಯದಲ್ಲಿ 27 ಎಸೆತಗಳಿಂದ 33 ರನ್ ಬಾರಿಸಿದರು. ಅವರ ಈ ಬ್ಯಾಟಿಂಗ್ ಇನಿಂಗ್ಸ್ನಲ್ಲಿ 2 ಸಿಕ್ಸರ್ ಮತ್ತು 5 ಬೌಂಡರಿ ದಾಖಲಾಯಿತು.
ಸದ್ಯ ಈ ಪಂದ್ಯ ಡ್ರಾಗೊಳ್ಳುವ ಸ್ಥಿತಿಯಲ್ಲಿದೆ. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 416 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ 457 ರನ್ ಬಾರಿಸಿ 41 ರನ್ ಮುನ್ನಡೆ ಸಾಧಿಸಿತ್ತು. ಇದೀಗ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 3 ವಿಕೆಟ್ಗೆ 250 ಗಡಿ ದಾಡಿ ಬ್ಯಾಟಿಂಗ್ ನಡೆಸುತ್ತಿದೆ. ಇಂದು ನಾಲ್ಕನೇ ದಿನವಾಗಿದ್ದು ಇನ್ನೊಂದು ದಿನದ ಆಟ ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಅಧಿಕ.
ಶಮಾರ್ ಜೋಸೆಫ್(Shamar Joseph) ಅವರ ಕ್ರಿಕೆಟ್ ಜರ್ನಿಯೇ ಒಂದು ರೋಚಕ. ಅವರ ಕ್ರಿಕೆಟ್ ಬದುಕಿನ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಲ್ಲ. ಶಮಾರ್ ಜೋಸೆಫ್ ಶ್ರೀಮಂತ ಕುಟುಂಬದಲ್ಲಿ ಅಥವಾ ಕ್ರಿಕೆಟ್ ಹಿನ್ನೆಲೆಯಿಂದ ಬಂದ ಪ್ರತಿಭೆಯಲ್ಲ. ಅಚ್ಚರಿ ಎಂದರೆ ಯಾವುದೇ ವೃತ್ತಿಪರ ಕ್ರಿಕೆಟ್ ಕೂಡ ಆಟದೆ ಅವರು ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಲು ನೆರವಾದದ್ದು ಕೆರಿಬಿಯನ್ ಪ್ರೀಮಿಯರ್ ಲೀಗ್. ಈ ಟೂರ್ನಿಗೆ ಆಯ್ಕೆಯಾದ ಬಳಿಕ ಶಮಾರ್ ಅವರ ಬದುಕಿನ ದಿಕ್ಕೇ ಬದಲಾಯಿತು.
ಇದನ್ನೂ ಓದಿ IPL 2025: ರಾಹುಲ್ ಆರ್ಸಿಬಿಗೆ, ಪಂತ್ ಸಿಎಸ್ಕೆ ಸೇರ್ಪಡೆ ಖಚಿತ
ಸಾವನ್ನೇ ಗೆದಿದ್ದ ಶಮಾರ್ ಜೋಸೆಫ್
ಜೋಸೆಫ್ ಅವರು ಊರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಮೇಲೆ ಮರ ಬೀಳುವುದರಿಂದ ಅಲ್ಪದರಲ್ಲೇ ಪಾರಾಗಿ, ಸಾವಿನಿಂದ ಬಚಾವಾಗಿದ್ದರು. ಕೇವಲ 400 ಜನಸಂಖ್ಯೆಯುಳ್ಳ ಕೆರಿಬಿಯನ್‌ನ ಹಳ್ಳಿಯೊಂದರ ಪ್ರತಿಭೆಯಾಗಿರುವ ಜೋಸೆಫ್ ಕಾಡಲ್ಲಿ ಮರ ಕಡಿಯುವ ವೃತ್ತಿ ಮಾಡುತ್ತಿದ್ದರು. ಇದಾದ ಬಳಿಕ ಅವರು 2021ರ ವರೆಗೆ ಬಾರ್ಬಿಸ್ ಎಂಬಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಹಣ್ಣು, ಬಾಟಲ್ ಮೂಲಕ ಬೌಲಿಂಗ್ ಅಭ್ಯಾಸ
ಜೋಸೆಫ್ ಅವರು ಕ್ರಿಕೆಟ್ಗೆ ಮರಳಿದ್ದು ಮತ್ತು ಬೌಲಿಂಗ್ ಅಭ್ಯಾಸ ನಡೆಸಿದ್ದು ಪ್ಲಾಸ್ಟಿಕ್ ಬಾಟಲ್ ಮತ್ತು ಹಣ್ಣುಗಳನ್ನೇ ಎಸೆದು. ಈ ವಿಚಾರ ನಂಬಲು ಕಷ್ಟವಾದರೂ ಕೂಡ ಇದನ್ನು ನಂಬಲೇ ಬೇಕು. 2018ರ ವರೆಗೂ ಅವರ ಊರಿನಲ್ಲಿ ಮೊಬೈಲ್, ಇಂಟರ್ನೆಟ್ ಸೇವೆ ಕೂಡ ಇರಲಿಲ್ಲ. ಇಂತಹ ಕುಗ್ರಾಮದಿಂದ ಬಂದ ಜೋಸೆಫ್ ಇಂದು ವಿಂಡೀಸ್‌ನ ಆಪತ್ಬಾಂಧವ. ಅವರ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಕಾರ್ಲ್ ಹೂಪರ್ ಸೇರಿದಂತೆ ಹಲವರು ಜೋಸೆಫ್ ಕ್ರಿಕೆಟ್ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.