ಗ್ರಾಸ್ ಐಲೆಟ್: ಶುಕ್ರವಾರ ರಾತ್ರಿ ನಡೆದ ಇಂಗ್ಲೆಂಡ್ ಎದುರಿನ ಸೂಪರ್-8(T20 World Cup 2024) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ರನ್ಗಳ ರೋಚಕ ಜಯ ಸಾಧಿಸಿ ಸೆಮಿಫೈನಲ್ ಬಾಗಿಲಿಗೆ ಬಂದು ನಿಂತಿದೆ. ಪಂದ್ಯದ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಾಚರಣೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video) ಆಗಿದೆ.
‘ಬಿ’ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಆರಂಭಕಾರ ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕದ ನೆರವಿನಿಂದ 6 ವಿಕೆಟಿಗೆ 163 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಅಂತಿಮ ಹಂತದಲ್ಲಿ ಎಡವಿ 6 ವಿಕೆಟ್ ನಷ್ಟಕ್ಕೆ 156 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ಚೇಸಿಂಗ್ ವೇಳೆ ಇಂಗ್ಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ 53(37 ಎಸೆತ) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ 33(17 ಎಸೆತ) ಬಾರಿಸಿದರೂ ಕೂಡ ಇವರಿಂದ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಕಳೆದ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಆರಂಭಿಕ ಆಟಗಾರ ಫಿಲ್ ಸಾಲ್ಟ್(11) ಮತ್ತು ಜಾನಿ ಬೇರ್ಸ್ಟೊ(16) ಈ ಪಂದ್ಯದಲ್ಲಿ ವಿಫಲರಾದರು. ಇದು ತಂಡಕ್ಕೆ ಹಿನ್ನಡೆಯಾಯಿತು.
ಪಂದ್ಯದ ತಿರುವು
ಅಂತಿಮ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಬೇಕಿತ್ತು. ಅರ್ಧಶತಕ ಬಾರಿಸಿದ್ದ ಹ್ಯಾರಿ ಬ್ರೂಕ್ ಕ್ರೀಸ್ನಲ್ಲಿದ್ದರು. ಹೀಗಾಗಿ ಇಂಗ್ಲೆಂಡ್ಗೆ ಗೆಲುವಿನ ಅವಕಾಶ ಅಧಿಕವಾಗಿತ್ತು. ಅನ್ರಿಚ್ ನೋರ್ಜೆ ಎಸೆದ ಈ ಓವರ್ನ ಮೊದಲ ಎಸೆತದಲ್ಲೇ ಬ್ರೂಕ್ ಸ್ಟ್ರೈಟ್ ಡೆಲಿವರಿ ಕಡೆ ಚೆಂಡನ್ನು ಬಾರಿಸಿದರು. ಗಾಳಿಯಲ್ಲಿದ್ದ ಚೆಂಡನ್ನು ಚಿರತೆ ವೇಗದಲ್ಲಿ ಹಿಮ್ಮುಖವಾಗಿ ಓಡಿ ಐಡೆನ್ ಮಾರ್ಕ್ರಮ್ ಸೂಪರ್ ಮ್ಯಾನ್ ರೀತಿಯಲ್ಲಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಇದು ಪಂದ್ಯಕ್ಕೆ ಮಹತ್ವದ ತಿರುವು ಕೊಟ್ಟಿತು. ಈ ವಿಕೆಟ್ ಪತನಗೊಳ್ಳುತ್ತಿದ್ದಂತೆ ಹರಿಣ ಪಡೆ ಮೇಲುಗೈ ಸಾಧಿಸಿತು. ಅಂತಿಮವಾಗಿ 7 ರನ್ಗಳ ರೋಚಕ ಗೆಲುವು ಸಾಧಿಸಿತು.
ಇದನ್ನೂ ಓದಿ WI vs USA: ಹೋಪ್ ಬ್ಯಾಟಿಂಗ್ ಆರ್ಭಟಕ್ಕೆ ತಲೆಬಾಗಿದ ಅಮೆರಿಕ; ವಿಂಡೀಸ್ ಸೆಮಿ ಆಸೆ ಜೀವಂತ
ಈ ಗೆಲುವಿನ ಬಳಿಕ ದಕ್ಷಿಣ ಆಫ್ರಿಕಾ ಆಟಗಾರರು ಡ್ರೆಸ್ಸಿಂಗ್ ರೂಮ್ನಲ್ಲಿ ಕೊಂಚ ಅಗ್ರೆಸಿವ್ ಆಗಿ ಸಂಭ್ರಮಾಚರಣೆ ನಡೆಸಿದರು. ಕಾಗಿಸೊ ರಬಾಡ ಎಸ್…ಎಸ್ ಎಂದು ಕಿರುಚುತ್ತಾ ಕೈಗಳನ್ನು ಟೇಬಲ್ಗೆ ಬಡಿದರು. ಮಾರ್ಕೊ ಜಾನ್ಸೆನ್ ಟೇಬಲ್ಗೆ ತಮ್ಮ ಕ್ಯಾಪ್ ಬಡಿದು ಸಂಭ್ರಮಿಸಿದರು. ಹೀಗೆ ಎಲ್ಲ ಆಟಗಾರರು ವಿಭಿನ್ನವಾಗಿ ಸಂಭ್ರಮಾಚರಣೆ ಮಾಡಿದರು. ಈ ಬಾರಿ ತಂಡದ ಪ್ರದರ್ಶನ ಮತ್ತು ಲಕ್ ನೋಡುವಾಗ ಕಪ್ ಗೆದ್ದು ಚೋಕರ್ಸ್ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ.